ದಾವಣಗೆರೆ: ಲಿಂಗಾಯತ ಮಠಗಳು ರಾಜ್ಯದ ಶಕ್ತಿ ಕೇಂದ್ರಗಳು. ಇವು ಇಲ್ಲವಾಗಿದ್ದರೆ ಕರ್ನಾಟಕದ ಮುಕ್ಕಾಲು ಪಾಲು ಜನ ವಿದ್ಯಾವಂತರು ಆಗುತ್ತಿರಲಿಲ್ಲ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯವ್ಯಾಪಿ ಸಂಚರಿಸುತ್ತಿರುವ ರಥಯಾತ್ರೆ ಶುಕ್ರವಾರ ದಾವಣಗೆರೆಗೆ ಆಗಮಿಸಿದ್ದು, ಇಲ್ಲಿನ ಮೋತಿ ಚನ್ನಬಸಮ್ಮ ಕಲ್ಯಾಣಮಂಟಪ ಆವರಣದಲ್ಲಿ ಸ್ವಾಗತಿಸಿದ ಸಂದರ್ಭದಲ್ಲಿ ಮಾತನಾಡಿದರು.
ಮಠಗಳೇ ಇಲ್ಲದ್ದರಿಂದಾಗಿ ಅಸ್ಸಾಂ, ಬಿಹಾರ್ ಹಿಂದುಳಿದ ರಾಜ್ಯಗಳಾಗಿವೆ. ಚಿತ್ರದುರ್ಗ, ಸಿರಿಗೆರೆ, ಸುತ್ತೂರು, ಸಿದ್ಧಗಂಗಾ ಮೊದಲಾದ ಲಿಂಗಾಯತ ಮಠಗಳು ಅನ್ನ, ಜ್ಞಾನ, ಅಕ್ಷರ ದಾಸೋಹ ಒದಗಿಸುತ್ತ ಬಂದಿವೆ. ಬಸವತತ್ವದ ಆಚರಣೆಯ ಮೂಲ ತತ್ವವಾಗಿ ಇರಿಸಿಕೊಂಡ ಈ ಮಠಗಳು ಎಲ್ಲ ವರ್ಗದ ಜನರನ್ನೂ ಪ್ರೀತಿಸುತ್ತ ಬಂದಿವೆ ಎಂದರು.
ಮಠಗಳು ಬಡವರು, ನೊಂದವರು ಹಾಗೂ ನಾಡಿನ ಉದ್ಧಾರಕ್ಕಾಗಿ ಇವೆ. ಇಲ್ಲಿನ ಹಾಸ್ಟೆಲ್‌ಗಳಲ್ಲಿ ರಾಜಕೀಯ ಪಟುಗಳಾದ ಎಸ್.ನಿಜಲಿಂಗಪ್ಪ, ಕೊಂಡಜ್ಜಿ ಬಸಪ್ಪ, ಬಿ.ಡಿ. ಜತ್ತಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮೊದಲಾದ ಖ್ಯಾತನಾಮರು ಓದಿದ್ದಾರೆ. ಮಠಗಳಲ್ಲಿ ಓದಿದವರು ಸಮಾಜಸೇವೆ, ದೇಶಸೇವೆ ಮಾಡಿದ್ದಾರೆ. ಇದಕ್ಕೆ ಮಠಗಳೇ ಕಾರಣ ಎಂದು ಹೇಳಿದರು.
ಸುತ್ತೂರು ಮಠವು ನಾಡಿಗೆ ತನ್ನದೇ ಆದ ಸಾಮಾಜಿಕ, ಶೈಕ್ಷಣಿಕ ಕೊಡುಗೆ ನೀಡಿದೆ. ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುತ್ತ ನಾಡಿನ ಗಮನ ಸೆಳೆದಿದೆ. ಸುತ್ತೂರು ಜಾತ್ರಾ ಮಹೋತ್ಸವ ಜ. 15ರಿಂದ 20ರವರೆಗೆ ನಡೆಯಲಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ ಸುತ್ತೂರು ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲರಿಗೂ ಅನುಕೂಲತೆ ಇವೆ. ಇದು ಮನಸ್ಸಿಗೆ ಆನಂದ ನೀಡಲಿದೆ. ನಾನು ಎಲ್ಲ ಮಠಗಳ ಸಂಪರ್ಕದಲ್ಲಿದ್ದೇನೆ. ಸುತ್ತೂರು ಮಠ ಎತ್ತರದ ಸ್ಥಾನದಲ್ಲಿದೆ ಎಂದರು.
ಜಾತ್ರಾ ಸಮಿತಿ ಸಂಚಾಲಕ ಪಂಚಾಕ್ಷರಿ ಮಾತನಾಡಿ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿ ಮೇಳೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಬರುವ ಜನರಿಗೆ ವಸತಿ-ಊಟದ ವ್ಯವಸ್ಥೆ ಇದೆ. ಜಾತ್ರೆ ಅಂಗವಾಗಿ 45 ದಿನಗಳ ರಥಯಾತ್ರೆ 20 ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಪರಿಷತ್‌ನ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಮುಖಂಡರಾದ ಅಜ್ಜಂಪುರ ಶೆಟ್ರು ರಾಜಣ್ಣ, ಐಗೂರು ಚಂದ್ರಶೇಖರ್, ಎನ್.ಎಸ್. ರಾಜು, ಅಜ್ಜಂಪುರ ಷಡಾಕ್ಷರಿ, ಮರುಳಸಿದ್ದಯ್ಯ, ಮಲ್ಲಿಕಾರ್ಜುನ ಸ್ವಾಮಿ, ಜಯಮ್ಮ ನೀಲಗುಂದ, ಕಂಚಿಕೆರೆ ಸುಶೀಲಮ್ಮ, ಮಮತಾ ನಾಗರಾಜ್, ಸಿರಿಗೆರೆ ಮಲ್ಲಿಕಾರ್ಜುನ್, ಬಿ.ಟಿ. ಪ್ರಕಾಶ್, ಶಿವರಾಜ್ ಕಬ್ಬೂರು, ದೊಗ್ಗಳ್ಳಿ ಶಿವಣ್ಣ ಇತರರಿದ್ದರು.
ಶಿವರಾತ್ರೀಶ್ವರ ಶಿವಯೋಗಿಗಳ ಪ್ರತಿಮೆಯುಳ್ಳ ಆಕರ್ಷಕ ರಥವು ಕಾರ್ಯಕ್ರಮದ ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಹೆಬ್ಬಾಳು, ಭರಮಸಾಗರ ಮೂಲಕ ಚಿತ್ರದುರ್ಗಕ್ಕೆ ತಲುಪಿತು.
ಸುತ್ತೂರು ಸಂಸ್ಥಾನದ ಶಿಕ್ಷಣ ಕೇಂದ್ರಗಳು ದೇಶ ಹಾಗೂ ಅಮೆರಿಕ, ದೆಹಲಿ ಮುಂತಾದೆಡೆ ಇವೆ. ದಾವಣಗೆರೆ ಭಾಗದಲ್ಲಿಲ್ಲ. ಇಲ್ಲಿನ ಬಾತಿ ಗುಡ್ಡದ ಬಳಿ ಜಾಗ ನಿಗದಿಯಾಗಿದ್ದು ಶೀಘ್ರವೇ ಶಿಕ್ಷಣ ಕೇಂದ್ರವಾದರೆ ಜನರಿಗೆ ಅನುಕೂಲವಾಗಲಿದೆ.