ಸ್ಕೌಟ್ಸ್-ಗೈಡ್ಸ್ ಬಗ್ಗೆ ಶಿಕ್ಷಣಾಧಿಕಾರಿಗಳ ಅಸಡ್ಡೆ ಸಲ್ಲ

ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ, ನವೀಕೃತ ಧರಾಮ ಸ್ಕೌಟ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ, ಶಾಸಕ ಸಮರ್ಥ್ ಶಾಮನೂರು, ಕೊಂಡಜ್ಜಿ ಬಿ. ಷಣ್ಮುಖಪ್ಪ, ಮುರುಘರಾಜೇಂದ್ರ ಜೆ.ಚಿಗಟೇರಿ, ರಾಜನಹಳ್ಳಿ ಡಿ. ಬದ್ರೀನಾಥ್, ಪ್ರಭುದೇವ ಜೆ. ಚಿಗಟೇರಿ ಇತರರಿದ್ದರು.
ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ, ನವೀಕೃತ ಧರಾಮ ಸ್ಕೌಟ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ, ಶಾಸಕ ಸಮರ್ಥ್ ಶಾಮನೂರು, ಕೊಂಡಜ್ಜಿ ಬಿ. ಷಣ್ಮುಖಪ್ಪ, ಮುರುಘರಾಜೇಂದ್ರ ಜೆ.ಚಿಗಟೇರಿ, ರಾಜನಹಳ್ಳಿ ಡಿ. ಬದ್ರೀನಾಥ್, ಪ್ರಭುದೇವ ಜೆ. ಚಿಗಟೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾದಕ ವಸ್ತುಗಳ ಕಡಿವಾಣ ಜವಾಬ್ದಾರಿ ನಮಗೆ ಕೊಡಿ
  • ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ ಹೇಳಿಕೆ
  • ನವೀಕೃತ ಧರಾಮ ಸ್ಕೌಟ್ ಭವನ ಉದ್ಘಾಟನೆ
ದಾವಣಗೆರೆ: ಸ್ಕೌಟ್ಸ್-ಗೈಡ್ಸ್ ಬಗ್ಗೆ ಮುಖ್ಯಮಂತ್ರಿ, ಸಚಿವರಲ್ಲಿ ಗೌರವ ಭಾವನೆ ಇದೆ. ಆದರೆ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳಲ್ಲಿರುವ ಅಸಡ್ಡೆ ಸರಿಯಲ್ಲ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ ಅಸಮಾಧಾನ ವ್ಯಕ್ತಪಡಿಸಿದರು.
ಭಾರತ್ ಸ್ಕೌಟ್ಸ್‌ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯಿಂದ ನಗರದ ಪಿ.ಜೆ. ಬಡಾವಣೆಯಲ್ಲಿ 2.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತ ನವೀಕೃತ ಧರಾಮ ಸ್ಕೌಟ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಸ್ಕೌಟ್-ಗೈಡ್ಸ್ ಸಂಸ್ಥೆಯು ಮಕ್ಕಳನ್ನು ಮನುಷ್ಯರನ್ನಾಗಿ ಮಾಡುತ್ತಿದೆ. ಆದರೆ ಸ್ಕೌಟ್ಸ್ ಕಾರ್ಯಕ್ರಮಗಳಿಗೆ ಡಿಡಿಪಿಐ, ಡಿಡಿಪಿಯು, ಬಿಇಒ ಹಾಗೂ ವಿವಿ ಕುಲಸಚಿವರು ಬರುತ್ತಿಲ್ಲ. ಕೆಲ ಶಿಕ್ಷಕರು ಅರ್ಧ ತಾಸು ಸ್ಕೌಟ್ ಕಾರ್ಯದಲ್ಲಿ ತೊಡಗಲು ಅಧಿಕಾರಿಗಳು ಅಸಹಕಾರ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಸಹ ಸಾರ್ವಜನಿಕರ ಮಕ್ಕಳಿಗೆ ಕಲಿಸುತ್ತಿದ್ದೇವೆ. ಪಠ್ಯಕ್ಕೆ ಸೀಮಿತ ಅಂಕಗಳಿಂದ ಎಷ್ಟು ಜನರಿಗೆ ನಾಗರಿಕ ಸೇವೆ, ಖಾಸಗಿ ಉದ್ಯೋಗ ದಕ್ಕಿವೆ? 15 ವರ್ಷದಲ್ಲಿ ನೇಮಕಾತಿಯೇ ನಡೆದಿಲ್ಲ. 52 ಸಾವಿರ ಹುದ್ದೆಗಳ ಭರ್ತಿ ಮಾಡುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ ಎಂದರು.
ವಿಶ್ವ ಪರಿಸರ ದಿನ, ಕುಷ್ಠರೋಗ ದಿನ, ಕಾರ್ಮಿಕ ದಿನಾಚರಣೆ ಮೊದಲಾದ ಸರ್ಕಾರಿ ಕಾರ್ಯಕ್ರಮಗಳಿಗೆ ಜನರು ಬರುವುದಿಲ್ಲ ಎಂದು ಸ್ಕೌಟ್ಸ್-ಗೈಡ್ಸ್ ಮಕ್ಕಳನ್ನು ಆಹ್ವಾನಿಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವುದು ಅನಗತ್ಯ ಎಂದರು.
ರಾಜ್ಯದಲ್ಲಿನ 2 ಕೋಟಿ ವಿದ್ಯಾರ್ಥಿಗಳ ಪೈಕಿ 1.70 ಲಕ್ಷ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ 32 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಆಯವ್ಯಯದಲ್ಲಿ 56 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅದು ಎಲ್ಲಿಗೆ ಹೋಗುತ್ತದೆ? ಸ್ಕೌಟ್ಸ್ ಚಟುವಟಿಕೆಗೆ ಸಹಕರಿಸಲು ಶಾಸಕ ಸಮರ್ಥ್ ಅವರು ಸ್ಥಳೀಯ ಶಿಕ್ಷಣಾಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ’ಯುವ ಆಪದಾ ಮಿತ್ರ’ ಯೋಜನೆಯಡಿ 12 ಜಿಲ್ಲೆಗಳ 4 ಸಾವಿರ ಮಕ್ಕಳಿಗೆ ಪ್ರಾಕೃತಿಕ ವಿಕೋಪ ಎದುರಿಸುವ ಬಗ್ಗೆ ಏಳು ದಿನದ ತರಬೇತಿ ನೀಡಲಾಗಿದೆ. ತಲಾ ವಿದ್ಯಾರ್ಥಿಗೆ 32 ಸಾವಿರ ರೂ. ವೆಚ್ಚ ಮಾಡುವ ಯೋಜನೆ ಉಪಯುಕ್ತವಾಗಿದೆ ಎಂದರು.
ಚಾಕಲೇಟ್, ಐಸ್‌ಕ್ರೀಂ, ಕೈಗೆ ಅಂಟಿಸಿ ತಿನ್ನುವ ರೂಪದಲ್ಲಿ ಶಾಲೆಗಳಿಗೂ ಇಂದು ಲಗ್ಗೆ ಇಟ್ಟಿರುವ ಮಾದಕ ವಸ್ತುಗಳ ಕಡಿವಾಣಕ್ಕೆ ಸ್ಕೌಟ್-ಗೈಡ್ಸ್ ಶಿಕ್ಷಕರು, ಮಕ್ಕಳಿಗೆ ಜವಾಬ್ದಾರಿ ನೀಡಬೇಕು ಎಂದೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಡ್ರಗ್ಸ್ ನಿಯಂತ್ರಣಕ್ಕೆ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ. ಮೀಸಲಿಟ್ಟಿರುವ ಸರ್ಕಾರ ಇದಕ್ಕೆ ಎಷ್ಟಾದರೂ ಹಣ ನಿಗದಿಪಡಿಸಲಿ. ನಮಗೆ ಹಣ ಬೇಕಿಲ್ಲ. ವಾರದಲ್ಲಿ 2 ಗಂಟೆ ಮಾದಕ ವ್ಯಸನದ ಬಗ್ಗೆ ಸ್ಕೌಟ್ಸ್-ಗೈಡ್ಸ್ ಶಿಕ್ಷಕರು, ಮಕ್ಕಳು ಜಾಗೃತಿ ಮೂಡಿಸಿದರೆ ಒಂದೇ ವರ್ಷದಲ್ಲಿ ಶೇ.50ರಷ್ಟು ನಿಯಂತ್ರಣ ಆಗಲಿದೆ ಎಂದರು.
ಬೆಂಗಳೂರು ಇಂದು ಗಾರ್ಡನ್‌ಸಿಟಿ ಬದಲಾಗಿ ಗಾರ್ಬೇಜ್ ಸಿಟಿಯಾಗಿದೆ. ಹಾಗೆಂದು ಟೀಕೆ ಮಾಡಿದರೆ ನಮ್ಮ ಕೆಲಸ ಮುಗಿಯುವುದಿಲ್ಲ. ಹೀಗಾಗಿ ನವೆಂಬರ್ 1ರಿಂದ 2ಸಾವಿರ ಸ್ಕೌಟ್ಸ್ ಮಕ್ಕಳನ್ನು ಗಾರ್ಬೇಜ್ ಸೋಲ್ಡ್ಜರ್ಸ್‌ ಆಗಿ ತಯಾರಿಸಿ, ಅವರ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ.ಚಿಗಟೇರಿ, ಸ್ಕೌಟ್ ಭವನಕ್ಕೆ ರಾಜ್ಯ ಸಂಸ್ಥೆಯು 1 ಕೋಟಿ ರೂ.ನೆರವು ನೀಡಿದೆ. ಇಲ್ಲಿ 30 ಅಭ್ಯರ್ಥಿಗಳಿಗೆ ಉದ್ಯೋಗಾಧಾರಿತ ಸನಿವಾಸ ತರಬೇತಿ ನೀಡುವ ಉದ್ದೇಶವಿದೆ. ಡಾರ್ಮೆಂಟರಿ, ಕಂಪ್ಯೂಟರ್ ಲ್ಯಾಬ್ ತೆರೆಯುವ ಇರಾದೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಕೊಂಡಜ್ಜಿ ಬಿ. ಷಣ್ಮುಖಪ್ಪ, ಜಿಲ್ಲಾ ಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ಡಿ. ಬದ್ರೀನಾಥ್, ಪ್ರಭುದೇವ ಜೆ. ಚಿಗಟೇರಿ, ಡಾ. ಎಚ್.ಬಿ.ಮಂಜುನಾಥ್, ಎ.ಮಹಾಲಿಂಗಪ್ಪ, ಶಾರದಾ ಮಾಗಾನಹಳ್ಳಿ, ಬೂಸ್ನೂರು ವಿಶ್ವನಾಥ್, ಮಹ್ಮದ್ ವಾಸಿಲ್, ಶಾಂತಾ ಎಸ್. ಯಾವಗಲ್, ಎ.ಪಿ.ಷಡಾಕ್ಷರಪ್ಪ ಎಂ. ರತ್ನಾ ಇತರರಿದ್ದರು.

ಸ್ಕೌಟ್ಸ್-ಗೈಡ್ಸ್ ಸಂಸ್ಥೆಯಲ್ಲಿ ಎಲ್ಲರೂ ಸಮಾನರು. ಇಲ್ಲಿ ಕಾಣಸಿಗುವ ಸಮವಸ್ತ್ರಸಹಿತ ಶಿಸ್ತು ನಗರಾದ್ಯಂತ ವಿಸ್ತರಣೆಯಾದರೆ ಊರೇ ಸುಂದರವಾಗಿ ಕಾಣಲಿದೆ. ಶಾಸಕರ ನಿಧಿಯನ್ನು ಶಾಲೆಗಳಿಗೂ ಬಳಸುವ ಉದ್ದೇಶವಿದೆ. ಹೀಗಾಗಿ ಧರಾಮ ಸ್ಕೌಟ್ ಭವನದ ಉದ್ದೇಶಿತ ಲಿಫ್ಟ್‌ಗೆ ವಾಣಿಜ್ಯ ಮಳಿಗೆಗಳ ಶೇ.70ರಷ್ಟು ಹಣ ಬಳಸಿ. ಉಳಿದ ಹಣಕ್ಕಾಗಿ ಕೈ ಜೋಡಿಸುತ್ತೇನೆ.

— ಸಮರ್ಥ್ ಶಾಮನೂರು, ದಾವಣಗೆರೆ ದಕ್ಷಿಣ ಶಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net