ಹೈನುಗಾರಿಕೆಯಿಂದ ಲಕ್ಷಗಟ್ಟಲೆ ಸಂಪಾದನೆ

ಕೆಂಚಮ್ಮನಹಳ್ಳಿ ಗ್ರಾಮದ ಯುವ ರೈತ ಕೆ.ಕಾಮಯ್ಯ ಅವರು ಸಾಕಿರುವ ಮಿಶ್ರ ತಳಿ ಹಸುಗಳು.
ಕೆಂಚಮ್ಮನಹಳ್ಳಿ ಗ್ರಾಮದ ಯುವ ರೈತ ಕೆ.ಕಾಮಯ್ಯ ಅವರು ಸಾಕಿರುವ ಮಿಶ್ರ ತಳಿ ಹಸುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕೆಂಚಮ್ಮನಹಳ್ಳಿ ಗ್ರಾಮದ ರೈತನ ಯಶೋಗಾಥೆ
  • 12 ಮಿಶ್ರತಳಿ ಹಸುಗಳ ಮೂಲಕ ಹಾಲಿನ ಉತ್ಪಾದನೆ
  • ಉಪಕಸುಬಾದ ಕುರಿ, ಕೋಳಿ ಸಾಕಣೆಯಿಂದ ಆದಾಯ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಆಧುನಿಕ ಯುಗದ ಯುವಕರು ನಗರ ಪ್ರದೇಶಕ್ಕೆ ಹೋಗಿ ದುಡಿಯುವ ಹಂಬಲ ಹೊಂದಿದ್ದರೆ, ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ಕೆಂಚಮ್ಮನಹಳ್ಳಿ ಗ್ರಾಮದ ಕೆ. ಕಾಮಯ್ಯ ಬೆಂಗಳೂರಿನಿಂದ ಬಂದು ಹಸುಗಳನ್ನು ಸಾಕಿ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿ ಸುತ್ತಿದ್ದಾರೆ. ಇವರ ಪರಿಶ್ರಮ, ದೃಢಸಂಕಲ್ಪ ಮತ್ತು ಹೈನುಗಾರಿಕೆ ಇತರರಿಗೆ ಮಾದರಿಯಾಗಿದೆ.
ಇವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಬುಗಡಿಹಳ್ಳಿ ಗ್ರಾಮದವರು. 20 ವರ್ಷಗಳ ಹಿಂದೆ ಕುಟುಂಬ ಸಮೇತರಾಗಿ ದಾವಣಗೆರೆಗೆ ಬಂದು ಮೊದಲು ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
2019ರಲ್ಲಿ ಕೆಂಚಮ್ಮನಹಳ್ಳಿಯಲ್ಲಿ 1 ಎಕರೆ 30 ಗುಂಟೆ ಜಮೀನನ್ನು ಖರೀದಿಸಿ ಮನೆ ನಿರ್ಮಿಸಿ ಅಲ್ಲೆ ನೆಲೆಸಿದರು. ಇದೇ ಜಾಗದಲ್ಲಿ ಹಸು, ಕೋಳಿ, ಕುರಿ ಸಾಕಾಣಿಕೆ ಆರಂಭಿಸಿ ಪ್ರಗತಿ ಸಾಧಿಸಿದ್ದಾರೆ.
ಕೆ. ಕಾಮಯ್ಯ ಅವರ ಬಳಿ 10 ಎಚ್‌ಎಫ್ ತಳಿ, 1 ಸಾಮಿವಾಲ ತಳಿ, 1 ಜರ್ಸಿ ತಳಿ ಸೇರಿ ಒಟ್ಟು 12 ಹಸುಗಳಿವೆ. ಇದರ ಜತೆಗೆ 6 ಹೆಣ್ಣು ಕರುಗಳಿವೆ. ಪ್ರಸ್ತುತ 11 ಹಸುಗಳು ಹಾಲು ಕೊಡುತ್ತಿದ್ದು, ಬೆಳಗ್ಗೆ 91 ಲೀ. ಮತ್ತು ಸಂಜೆ 80 ಲೀ. ದಿನಕ್ಕೆ ಸರಾಸರಿ 170 ಲೀ ಹಾಲು ಉತ್ಪಾದನೆಯಾಗುತ್ತಿದೆ.
ಪ್ರತಿ ಲೀಟರ್ ಹಾಲಿಗೆ 34.70 ರೂ. ದರ, ದಿನಕ್ಕೆ 5900 ರೂ. ಆದಾಯ ಮತ್ತು ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಸಹಾಯಧನ ನೀಡುತ್ತಿದ್ದು ಮೂರು ತಿಂಗಳಿಗೊಮ್ಮೆ 60 ಸಾವಿರ ಹಣ ಖಾತೆಗೆ ಜಮೆಯಾಗುತ್ತಿದೆ.
ಹಾಲು ಕರೆಯಲು ಮತ್ತು ಹುಲ್ಲು ಕತ್ತರಿಸಲು ಸೇರಿ ಎಲ್ಲ ಆಧುನಿಕ ಉಪಕರಣಗಳನ್ನು ಬಳಸುತ್ತಿದ್ದಾರೆ. ಹಸು ಆರೈಕೆ ಕೊಟ್ಟಿಗೆ ನೆಲದಲ್ಲಿ ಮ್ಯಾಟ್ ಅಳವಡಿಸಿದ್ದಾರೆ. ನಿಯಮಿತ ಸ್ವಚ್ಛತೆ ಮತ್ತು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಅಲ್ಲದೇ ರೈತ ಕಾಮಯ್ಯನವರು ಬೋರ್ವೆಲ್ ನೀರಾವರಿ ಬಳಸಿಕೊಂಡು 840 ಅಡಕೆ ಸಸಿಗಳನ್ನು 4 ವರ್ಷದ ಹಿಂದೆ ನಾಟಿ ಮಾಡಿದ್ದಾರೆ. ಇದರ ಮಿಶ್ರ ಬೆಳೆಯಾಗಿ ಸೇವಂತಿ, ಚೆಂಡು ಹೂ, ಗುಲಾಬಿ, ಹಸುಗಳಿಗೆ ನೇಪಿಯರ್ ಸಪ್ಪೆ ಸೇರಿ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೂವಿನ ಮಾರಾಟದಿಂದ ಉತ್ತಮ ಆದಾಯ ಬರುತ್ತಿದೆ.
ಆದಾಯ-ಖರ್ಚು ಚಿತ್ರಣ
ಹೈನುಗಾರಿಕೆ ಯಿಂದ ತಿಂಗಳಿಗೆ 1,82,900 ರೂ ಆದಾಯ ಬರುತ್ತಿದ್ದು, ಹಸುಗಳಿಗೆ ಶೇಂಗಾ ಹಿಂಡಿ, ಗೋಧಿ ಬೂಸಾ, ಮೆಕ್ಕೆಜೋಳದ ರಸಮೇವು, ಭತ್ತ, ರಾಗಿ, ಒಣ ಹುಲ್ಲು ಸೇರಿ ತಿಂಗಳಿಗೆ ಸರಾಸರಿ 90 ಸಾವಿರ ರೂ. ಖರ್ಚು ಬರುತ್ತಿದೆ. ಹಸುಗಳಿಂದ ಪ್ರತಿ ವರ್ಷ 40 ಲೋಡು ಸಗಣಿ ಗೊಬ್ಬರ ಉತ್ಪಾದನೆ ಯಾಗುತ್ತಿದ್ದು, ಪ್ರತಿ ಲೋಡಿಗೆ 7 ಸಾವಿರ ದರದಲ್ಲಿ ಮಾರಾಟ ಮಾಡಿ 2.8 ಲಕ್ಷ ರೂ. ಗಳಿಸುತ್ತಿದ್ದಾರೆ. 30 ನಾಟಿ ಕೋಳಿ ಮತ್ತು 30 ಕುರಿಗಳನ್ನು ಸಾಕುತ್ತಿದ್ದು ಇವುಗಳ ಮಾರಾಟ ದಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ರೈತರು ಕೃಷಿ ಒಂದಕ್ಕೆ ಅವಲಂಬಿತ ವಾಗದೆ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಹೂವು, ಹಣ್ಣು, ತರಕಾರಿಗಳನ್ನು ಬೆಳೆಯುವುದರೊಂದಿಗೆ ಆರ್ಥಿಕವಾಗಿ ಸದೃಢರಾಗಬಹುದು.

ಮಿಶ್ರತಳಿ ಹಸುಗಳನ್ನು ಸೂಕ್ಷ್ಮವಾಗಿ ಸಾಕಣೆ ಮಾಡಬೇಕು. ಕೊಟ್ಟಿಗೆ ಸ್ವಚ್ಛತೆ ಕಾಪಾಡಿ, ಕಾಲುಬಾಯಿ, ಚಪ್ಪೆ, ಗಂಟಲು ಬೇನೆ, ಚರ್ಮಗಂಟು ಮುಂತಾದ ಕಾಯಿಲೆಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು. ಹಸುಗಳಿಗೆ ಕೆಚ್ಚಲು ಬೇನೆ ಕಾಣಿಸಿಕೊಂಡರೆ ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net