ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ, ಎಸ್.ಎಸ್. ಮಲ್ಲಿಕಾರ್ಜುನ್, ಸಮರ್ಥ್ ಶಾಮನೂರು, ದಿನೇಶ್ ಕೆ. ಶೆಟ್ಟಿ, ಎಸ್. ರಾಮಪ್ಪ, ಜಿ.ಎಂ. ಗಂಗಾಧರ ಸ್ವಾಮಿ, ಡಾ.ಎನ್. ಮಹಾಂತೇಶ್, ರೇಣುಕಾ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭರವಸೆ
ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ : ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆಗೆ ಅನುಮೋದನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಇದಕ್ಕೂ ಮೊದಲು ದಾವಣಗೆರೆ ಉತ್ತರ ಶಾಸಕ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಸಿಡಿಪಿ (ಮಾಸ್ಟರ್ ಪ್ಲ್ಯಾನ್) ಸೇರಿ ಕೆಲವು ವಿಷಯಗಳಿಗೆ ಅನುಮೋದನೆ ವಿಳಂಬವಾಗುತ್ತಿದ್ದು ಆದಷ್ಟು ಬೇಗನೆ ಒಪ್ಪಿಗೆ ನೀಡುವಂತೆ ಆಗ್ರಹಿಸಿದರು. ಹರಿಹರ ಶಾಸಕ ಬಿ.ಪಿ. ಹರೀಶ್ ಕೂಡಾ ಹರಿಹರ ನಗರದ ಸಿಡಿಪಿ ಅನುಮೋದನೆಗೆ ಬಾಕಿ ಇದೆ ಎಂದು ಗಮನ ಸೆಳೆದರು.
ಕುಂದುವಾಡದ ರೈತರು ನನ್ನನ್ನು ಭೇಟಿ ಮಾಡಿದ್ದರು. ಜಮೀನು ಕೊಡಲು ಅವರಿಗೆ ಇಷ್ಟವಿಲ್ಲ ಎಂದಾಗ ಅದನ್ನು ಕೈಬಿಟ್ಟು ಬೇರೆ ಕಡೆ ಬಡಾವಣೆ ಅಭಿವೃದ್ಧಿಪಡಿಸುವಂತೆ ಸಚಿವ ಯತೀಂದ್ರ ಸೂಚನೆ ನೀಡಿದರು.
ದೂಡಾ ಆಯುಕ್ತೆ ರೇಣುಕಾ ಮಾತನಾಡಿ, ಕೆಲವು ಕಡೆ ಜಮೀನು ನೀಡಲು ರೈತರು ಮುಂದೆ ಬಂದಿದ್ದಾರೆ. ನಿವೇಶನಗಳಿಗೆ 22 ಸಾವಿರ ಅರ್ಜಿಗಳು ಬಂದಿದ್ದು ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಮಾಹಿತಿ ನೀಡಿದರು.
ಎತ್ತರದ ಕಟ್ಟಡಕ್ಕೆ ಅವಕಾಶ
ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡಬೇಕು. ಇದರಿಂದ ನಗರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ. 100ರಷ್ಟು ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಮುಂದಿನ 15 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕು. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗಬೇಕು ಎಂದು ಸೂಚನೆ ನೀಡಿದರು.
ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಹಣವನ್ನು ಅನಗತ್ಯ ವೆಚ್ಚ ಮಾಡದೇ ಶಿಕ್ಷಣ ಮತ್ತು ಆರೋಗ್ಯ ಉದ್ದೇಶಕ್ಕೆ ಬಳಸಬೇಕು. ಆಸ್ತಿ ತೆರಿಗೆ ಬಗ್ಗೆ ಗಮನ ಹರಿಸಬೇಕು. ಇ-ಖಾತೆಗಳನ್ನು ಶೇ. 100ರಷ್ಟು ಮಾಡಬೇಕು. ಇದನ್ನು ಅಭಿಯಾನದ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು. ುಟ್‌ಪಾತ್‌ಗಳನ್ನು ತೆರವುಗೊಳಿಸಿ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಪಾರ್ಕ್‌ಗಳನ್ನು ಮಹಿಳೆಯರ, ಮಕ್ಕಳ ಸ್ನೇಹಿಯಾಗಿರುವಂತೆ ಅಭಿವೃದ್ಧಿಪಡಿಸಿ. ಅಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಬೇಕು. ಶೌಚಗೃಹ, ವಿದ್ಯುದ್ದೀಪಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಪೌರಕಾರ್ಮಿಕರ ನೇಮಕ
ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳುವಂತೆ ಯತೀಂದ್ರ ಸಿದ್ದರಾಮಯ್ಯ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ಎನ್. ಮಹಾಂತೇಶ್ ಮಾತನಾಡಿ, ಶೇ. 20ರಷ್ಟು ಪೌರಕಾರ್ಮಿಕ ಮತ್ತು ಲೋಡರ್ ಹುದ್ದೆಗಳು ಖಾಲಿ ಇವೆ. ಅವುಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ತುಂಗಭದ್ರಾ ನದಿ, ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡ ಕೆರೆಯಿಂದ ನೀರು ಪೂರೈಕೆ ವ್ಯವಸ್ಥೆಯ ಬಗ್ಗೆ ಸಚಿವರಿಗೆ ವಿವರಣೆ ನೀಡಿದ ಮಹಾಂತೇಶ್, ಮುಂದಿನ ಎರಡು ತಿಂಗಳು ನೀರಿನ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು. ಬರ ಪರಿಸ್ಥಿತಿ ಎದುರಾಗುವ ಭೀತಿ ಇರುವುದರಿಂದ ಮುಂದೆ ಸಮಸ್ಯೆ ಎದುರಾಗದಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ನಗರದ ಹಳೇ ಬಸ್ ನಿಲ್ದಾಣದ ಮಳಿಗೆಗಳು 5 ಬಾರಿ ಹರಾಜು ಮಾಡಿದರೂ ಯಾರೂ ಮುಂದೆ ಬಂದಿಲ್ಲ ಎಂದರು. ನೀರಿನ ತೆರಿಗೆಯ ಹಳೆಯ ಬಾಕಿ 26 ಕೋಟಿ ರೂ.ಗಳಿದ್ದು ಅದನ್ನು ಒಂದು ಬಾರಿ ಮನ್ನಾ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಶಾಸಕ ಸಮರ್ಥ್ ಶಾಮನೂರು, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ ಸಭೆಯಲ್ಲಿದ್ದರು.