ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಚನ್ನಗಿರಿ ತಾಲೂಕು ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಚಂದ್ರಪ್ಪ ಇತರರಿದ್ದರು. ----
ದಾವಣಗೆರೆ:ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಗುರುವಾರ ಜಿಲ್ಲೆಯ ವಿವಿಧೆಡೆ ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿ-ಸಿಬ್ಬಂದಿ ವಹಿಸಬೇಕಾದ ಸೂಚನೆಗಳ ಬಗ್ಗೆ ಮನವರಿಕೆ ಮಾಡಿದರು.
ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ವಿವಿಧ ವಾರ್ಡ್, ಔಷಧ ವಿತರಣೆ ಸ್ಥಳ, ವಿವಿಧ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲಿನ ರೋಗಿಗಳ ಕ್ಷೇಮ ವಿಚಾರಿಸಿ ವೈದ್ಯಕೀಯ ಸೌಲಭ್ಯಗಳ ಬಗೆ ಮಾಹಿತಿ ಪಡೆದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚು ಕಾಯಿಸದೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ಔಷಧ ದಾಸ್ತಾನು ಇಲ್ಲವೆಂದು ಹೇಳುವಂತಿಲ್ಲ. ಆಸ್ಪತ್ರೆಯಿಂದ ಹೊರಗಡೆ ಚೀಟಿ ಬರೆದು ಕೊಡುವಂತಿಲ್ಲ. ದಾಸ್ತಾನಿಲ್ಲದ ಔಷಧದ ಬಗ್ಗೆ ನನಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಪೂರೈಸಬೇಕು. ಪ್ರತಿಯೊಬ್ಬರಿಗೂ ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದು ಎಚ್ಚರಿಕೆ ನೀಡಿದರು.
ಮಾಧ್ಯಮದಲ್ಲಿ ವರದಿಯಾದಂತೆ ಬಿಇಒ ಕಚೇರಿ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಾಣ ಆಗುತ್ತಿದೆ ಎನ್ನಲಾದ ಗುರುಭವನ ಕಟ್ಟಡ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂದುವಾಡ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಡಿಸಿ, ಅಡುಗೆ ಕೋಣೆ, ಭೋಜನಾಲಯ ಸೇರಿ ವಿವಿಧ ಕೊಠಡಿಗಳಲ್ಲಿನ ಸ್ವಚ್ಛತೆ, ತರಕಾರಿ, ಮೊಟ್ಟೆ, ಧಾನ್ಯ ವಹಿ ಬಗ್ಗೆ ಪರಿಶೀಲನೆ ನಡೆಸಿದರು.
ನಿಲಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಮಯಕ್ಕೆ ಸರಿಯಾದ ಊಟೋಪಚಾರ, ಕುಡಿವ ನೀರು, ಇನ್ನಿತರೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಶುಚಿ ಮತ್ತು ರುಚಿಯಾದ ಆಹಾರ ನೀಡುವುದರ ಜತೆಗೆ ಸ್ವಚ್ಛತೆ ಕಾಪಾಡಬೇಕು. ವಿದ್ಯಾರ್ಥಿಗಳಿಗೆ ತಾಜಾ ತರಕಾರಿ, ಕಾಳು ಮುಂತಾದ ಪೌಷ್ಟಿಕಾಂಶದ ಉತ್ಪನ್ನಗಳೊಂದಿಗೆ ಗುಣಮಟ್ಟದ ಆಹಾರ ನೀಡಬೇಕು ಎಂದು ಸೂಚನೆ ನೀಡಿದರು.