ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಬೇಡಿ

ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು. ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.Politics
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು. ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.Politics
Published on

ಪ್ರಮುಖ ಮುಖ್ಯಾಂಶಗಳು

  • ಬಾಳೆಹೊನ್ನೂರು ರಂಭಾಪುರಿ ಶ್ರೀ ಕಿವಿಮಾತು
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು
ಹೊನ್ನಾಳಿ: ಶಿಕ್ಷಣ, ಆರೋಗ್ಯ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು. ಕೈಗೊಂಡ ಸತ್ಕಾರ್ಯಗಳು ವೇಗವಾಗಿ ನಡೆದು ಜನಬಳಕೆಗೆ ಲೋಕಾರ್ಪಣೆಗೊಳ್ಳಲಿ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಿವಿಮಾತು ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಬುಧವಾರ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ 91ನೇ ವರ್ಷದ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಹೈಟೆಕ್ ಆಸ್ಪತ್ರೆ, ಫಾರ್ಮಸಿ ಕಾಲೇಜು, ಸೈನಿಕ ಶಾಲೆ, ಗೋ ಸಂವರ್ಧನ ಕೇಂದ್ರದ ಶಂಕುಸ್ಥಾಪನೆ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವೀರಶೈವ ದರ್ಶನ ಶಾಸ್ತ್ರ ಅಧ್ಯಯನ ವಿಭಾಗದ ಫಲಕ ಅನಾವರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನ ವ್ಯಕ್ತಿತ್ವ ಎತ್ತರಕ್ಕೆ ಏರಬೇಕಾದರೆ ಆದರ್ಶ ಗುಣಗಳು ಮುಖ್ಯ. ಸದ್ಗುಣ, ಸಚ್ಚಾರಿತ್ರ್ಯದಿಂದ ಮಾನವನ ಬದುಕು ಸಮೃದ್ಧಗೊಳ್ಳುತ್ತದೆ. ಹಣದ ಜತೆ ಜನ ಇರಬಹುದು, ಆದರೆ ಒಳ್ಳೆಯ ಗುಣಗಳ ಜತೆ ಭಗವಂತ ಸದಾ ಇರುತ್ತಾನೆ ಎಂದರು.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಹಿರೇಕಲ್ಮಠವು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ಕಾಲದಲ್ಲಿ 50-60 ವಟುಗಳಿಗೆ ಆಶ್ರಯ ನೀಡಿ ಧಾರ್ಮಿಕ ಸಂಸ್ಕಾರ ನೀಡಿದ್ದರು. ಅವರು ಅಂದು ಬೆಳೆಸಿದ ವಟುಗಳು ಇಂದು ನಾಡಿನ ವಿವಿಧ ಮಠಗಳಲ್ಲಿ ಮಠಾಧಿಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹಾದಿಯಲ್ಲೇ ಪ್ರಸ್ತುತ ಶ್ರೀಗಳು ಸಾಗುತ್ತಿದ್ದು, ಮಠದ ಸಾಮಾಜಿಕ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ನೂಣವಿನಕೆರೆ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಮಾತನಾಡಿದರು. ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಸಮರ್ಥ, ಸ್ವಾಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಜಿ.ಬಿ. ವಿನಯ್‌ಕುಮಾರ್, ಉಮಾಪತಿ ಹಾಗೂ 25ಕ್ಕೂ ಹೆಚ್ಚು ವಿವಿಧ ಮಠಾಧೀಶರು, ರಾಜಕೀಯ ಧುರೀಣರು ಪಾಲ್ಗೊಂಡಿದ್ದರು.

ಜ್ಞಾನದ ದೀವಿಗೆ ಬೆಳಗಿದ ಮಠಗಳು

ರಾಜ್ಯದ ವಿವಿಧ ಮಠಗಳು ಎಲ್ಲ ಜಾತಿ, ಧರ್ಮದವರಿಗೂ ಆಶ್ರಯ ನೀಡುವ ಜತೆಗೆ ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಜ್ಞಾನದ ದೀವಿಗೆ ಬೆಳಗಿವೆ. ಈ ಮೂಲಕ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಪವಾಡಪುರುಷರಾಗಿದ್ದ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ಈ ಭಾಗದಲ್ಲಿ ಮೂಡಿಸಿದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜಾಗೃತಿಯನ್ನು ಈಗಿನ ಸ್ವಾಮೀಜಿಯವರು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ತಪ್ಪು ತಿದ್ದುವ ಮತ್ತು ಜನಾಭಿಪ್ರಾಯ ಮೂಡಿಸುವ ಮಾಧ್ಯಮಗಳು ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿ, ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ರಾಜ್ಯದಲ್ಲಿ ಎಲ್ ನಿನೋ ಪ್ರಭಾವದಿಂದ ಶೇ. 42ರಷ್ಟು ಮಳೆಯ ಕೊರತೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಪೂರೈಕೆ ಮೇಲೆ ಒತ್ತಡವಿದೆ. ಆದಾಗ್ಯೂ ಕುಡಿಯುವ ನೀರು ಪೂರೈಸಲು ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ಎಲ್ಲೇ ನೀರಿನ ಸಮಸ್ಯೆ ಇದ್ದರೂ 24 ಗಂಟೆಯೊಳಗೆ ಪರಿಹರಿಸುವಂತೆ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಸೂಚಿಸಲಾಗಿದೆ ಎಂದರು. ಮನರೇಗಾ ಯೋಜನೆಯ ಪರಿವರ್ತಿತ ರೂಪ ವಿಬಿಜಿ ರಾಮ್ ಜಿಯಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಶೇ. 90ರ ಬದಲಿಗೆ ಶೇ. 60ಕ್ಕೆ ಇಳಿಸಿ, ರಾಜ್ಯಗಳ ಪಾಲನ್ನು ಶೇ. 40ಕ್ಕೆ ಹೆಚ್ಚಿಸಿರುವುದರಿಂದ ರಾಜ್ಯಗಳ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಿದೆ ಎಂದು ತಿಳಿಸಿದರು.

ಸಂಘರ್ಷಕ್ಕೆ ಎಡೆ ಮಾಡಿಕೊಡದಿರಲಿ

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಶ್ರಿಗಳು ಹೇಳಿದರು. ಶಾಶ್ವತವಲ್ಲದ ಯೋಜನೆಗಳನ್ನು ಕೈಬಿಟ್ಟು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಉಚಿತ ಯೋಜನೆಗಳ ಬದಲಿಗೆ ಎಲ್ಲ ವರ್ಗದ ಜನರ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಎಂದು ಸಲಹೆ ನೀಡಿದರು. ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಕೆಲವು ಬಿಟ್ಟಿ ಯೋಜನೆಗಳನ್ನು ಪರಾಮರ್ಶೆ ಮಾಡುತ್ತಿರುವುದು ಮತ್ತು ಆಡಳಿತಕ್ಕೆ ಚುರುಕು ಮುಟ್ಟಿಸಿರುವುದು ಒಳ್ಳೆಯ ಬೆಳವಣಿಗೆ. ಅವರಿಗೆ ರಂಭಾಪುರಿ ಪೀಠದ ವೀರಗಂಗಾಧರ ಜಗದ್ಗುರುಗಳ ಬಗ್ಗೆ ಅಪಾರ ಭಕ್ತಿ- ಗೌರವವಿದೆ. ಅದೇ ಧರ್ಮದ ಹಾದಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಂಡು ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲಿ ಎಂದು ಆಶೀರ್ವದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net