ಚನ್ನಗಿರಿ:ಕೃತಕವಾಗಿ ರಕ್ತ ತಯಾರಿಸಲು ಆಗುವುದಿಲ್ಲ. ದಾನಿಗಳು ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ತುಮ್‌ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಹೇಳಿದರು.
ಇಲ್ಲಿನ ತುಮ್‌ಕೋಸ್ ಸಭಾಂಗಣದಲ್ಲಿ ತುಮ್‌ಕೋಸ್ ಹಾಗೂ ಶಿವಮೊಗ್ಗ ಮಿಡ್‌ಟೌನ್ ಫೌಂಡೇಷನ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ಉದ್ಘಾಟಿಸಿ ಮಾತನಾಡಿದರು.
ಅಪಘಾತ ಹಾಗೂ ಜೀವ ಹೋಗುವಂಥ ಸಮಯದಲ್ಲಿ ತುರ್ತಾಗಿ ರಕ್ತ ಸಿಗದೆ ಜನರು ಸಾವಿಗೆ ಶರಣಾಗಿದ್ದಾರೆ. ರಕ್ತವನ್ನು ಕೃತಕವಾಗಿ ತಯಾರು ಮಾಡುವಂಥ ವಿಜ್ಞಾನ ಇನ್ನೂ ಬಂದಿಲ್ಲ. ಜನರು ದಾನ ಮಾಡುವಂತಹ ರಕ್ತವನ್ನು ಬೇರೆಯವರಿಗೆ ನೀಡುವ ಮೂಲಕ ಜೀವವನ್ನು ಉಳಿಸ ಬೇಕಾಗುತ್ತದೆ ಎಂದರು. ಆರೋಗ್ಯವಂತರಾಗಿ ಇರು ವಂತಹ 18 ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ರಕ್ತವನ್ನು ನೀಡಬಹುದಾಗಿದೆ. ರಕ್ತ ದಾನ ಮಾಡುವ ಮೂಲಕ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿ ಹಲವು ರೋಗಗಳನ್ನು ತಡೆಯಬಹುದು ಮತ್ತು ಹೊಸ ರಕ್ತ ದೇಹದಲ್ಲಿ ಉತ್ಪತ್ತಿಯಾಗುವುದರಿಂದ ಆರೋಗ್ಯದ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.
ಹಣ ಮತ್ತು ಸಂಪತ್ತನ್ನು ಸಂಗ್ರಹಿಸುವ ಯೋಚನೆಯಲ್ಲಿ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಂಡು ದಿನನಿತ್ಯ ಹಲವು ರೋಗಗಳನ್ನು ಆಹ್ವಾನಿ ಸುತ್ತಿದ್ದೇವೆ. ಒತ್ತಡದ ಬದುಕಿನಿಂದ ಸ್ವಾಸ್ಥೃ ಹಾಳಾಗುತ್ತಿದೆ. ಶ್ರೀಮಂತಿಕೆ ಆರೋಗ್ಯವನ್ನು ನೀಡುವುದಿಲ್ಲ. ಅದರ ಬದಲು ನೆಮ್ಮದಿಯಿಂದ ಬದುಕಲು ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂದರು.
ಶಿಬಿರದಲ್ಲಿ 28 ಯೂನಿಟ್ ರಕ್ತ ಶೇಖರಿಸಲಾಯಿತು. ಡಾ.ಬಿನೇಶ್, ಡಾ.ಆನಂದ್ ಕಮ್ಮತ್ತಹಳ್ಳಿ, ಮಂಜಪ್ಪ, ಪೂರ್ಣಿಮಾ, ಸುನೀಲ್ ಇದ್ದರು.