ಚನ್ನಗಿರಿ ತಾಲೂಕು ದೊಂದರಘಟ್ಟ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರಾಜ್ಯ ಜೀವ ವೈವಿಧ್ಯಮಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್ ಉದ್ಘಾಟಿಸಿದರು. ಡಾ.ಸಿದ್ದಲಿಂಗಯ್ಯ, ಸುರೇಶ್ ಹನಗವಾಡಿ, ಡಿ.ಸಿ. ಪೃಥ್ವಿ ಇತರರು ಇದ್ದರು.Blood donation camp
ಚನ್ನಗಿರಿ:ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಆರೋಗ್ಯವಂತರು ಮುಂದೆ ಬಂದು ರಕ್ತದಾನದಲ್ಲಿ ಭಾಗಿಯಾಗಿ ಇನ್ನೊಬ್ಬರ ಜೀವ ಉಳಿಸಬೇಕು ಎಂದು ರಾಜ್ಯ ಜೀವ ವೈವಿಧ್ಯಮಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್ ತಿಳಿಸಿದರು.
ತಾಲೂಕು ದೊಂದರಘಟ್ಟ ಗ್ರಾಮದಲ್ಲಿ ಸೋಮವಾರ ಪರಂ ಪಿಯು ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ದಾವಣಗೆರೆ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಮತ್ತು ಲೈಫ್ ಲೈನ್ ಬ್ಲಡ್ ಸೆಂಟರ್‌ನಿಂದ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಪಾಲಕರನ್ನು ಆಕರ್ಷಿಸಲು ವಾರ್ಷಿಕೋತ್ಸವದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ಸಂಗ್ರಹಿಸಿ ದುಂದುವೆಚ್ಚ ಮಾಡುತ್ತಿದ್ದಾರೆ. ಬದಲಿಗೆ ಸಂಗ್ರಹ ಮಾಡಿದ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ಬಳಕೆ ಮಾಡಬೇಕು. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸವಾಗಬೇಕಿದೆ ಎಂದರು.
ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು. ಹೆಚ್ಚು ಅಂಕ ಪಡೆಯುವುದು ಅನಿವಾರ್ಯವಾಗಿದ್ದರೂ ಜೀವನ ಕಟ್ಟಿಕೊಳ್ಳುವ ಶಿಕ್ಷಣ ಕಲಿಸಬೇಕು. ಕಲಿತವರಿಗೆ ಸಕಾರಿ ನೌಕರಿ ಸಿಗುತ್ತದೆ ಎನ್ನುವುದು ಕಷ್ಟ. ಕಲಿತಿರುವುದನ್ನು ಸಮಾಜದ ಉತ್ತಮ ಕಾರ್ಯಗಳಿಗೆ ಬಳಕೆ ಮಾಡಿಕೊಂಡು ಉತ್ತಮ ಪ್ರಜೆಯಾದರೆ ಸಾಕು. ಜತೆಗೆ ಮಾನವೀಯ ಮೌಲ್ಯ, ಜೀವನದ ಮೌಲ್ಯಗಳನ್ನು ತಿಳಿಸುವ ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸುರೇಶಾಚಾರ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಡಾ. ಸಿದ್ದಲಿಂಗಯ್ಯ, ಸುರೇಶ್ ಹನಗವಾಡಿ, ಪ್ರಾಚಾರ್ಯ ಡಿ.ಸಿ. ಪೃಥ್ವಿ, ಉಪನ್ಯಾಸಕರಾದ ಚಿದಾನಂದ, ಸಿ.ಎಂ. ಮನು, ಮೀರಾ, ನಾಗರಾಜ್, ನಟರಾಜ್ ಇತರರು ಇದ್ದರು.