ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಭಾನುವಾರ ದಾವಣಗೆರೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ವಾಸುದೇವ ರಾಯ್ಕರ್, ವೀರಕಪುತ್ರ ಶ್ರೀನಿವಾಸ್ , ಡಿಡಿಪಿಐ ಜಿ.ಕೊಟ್ರೇಶ್, ಎಸ್.ಎಸ್.ಮಂಜುನಾಥ್ ಇತರರಿದ್ದರು.
ದಾವಣಗೆರೆ: ಹಣಕ್ಕಾಗಿ ಆಡುವ ಕ್ರಿಕೆಟಿಗರು, ದುಡ್ಡಿಗಾಗಿ ಸಿನಿಮಾ ನೆಚ್ಚಿಕೊಂಡ ಚಿತ್ರನಟರನ್ನು ಅನುಕರಿಸಬೇಡಿ. ನಿಮ್ಮನ್ನು ಸಲಹುವ ಪಾಲಕರು ಹಾಗೂ ಶಿಕ್ಷಕರಿಗೆ ಗೌರವ ತರುವಂತೆ ಸಾಧನೆ ಮಾಡಿ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದಿಂದ ಭಾನುವಾರ ಇಲ್ಲಿನ ಜಿಲ್ಲಾ ಗುರುಭವನದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಹೊರತಾಗಿ ಪ್ರೀತಿ-ಪ್ರೇಮ ಹಾಗೂ ಇತರೆ ಅನವಶ್ಯಕ ವಿಷಯಗಳತ್ತ ಗಮನ ಹರಿಸಬೇಡಿ. ಆರ್‌ಸಿಬಿ ಪಂದ್ಯ ನೋಡಲು ತೆರಳಿದ್ದ 11 ಮಂದಿ ಕಾಲ್ತುಳಿತದಲ್ಲಿ ಮೃತರಾದರು. ಇದರಲ್ಲಿ ಪಾಲಕರಿಗೆ ತಿಳಿಸದೆ ಹೋದ ವಿದ್ಯಾರ್ಥಿಗಳೂ ಇದ್ದರು. ನಿಮ್ಮನ್ನು ನಂಬಿದ ಪಾಲಕರು, ಶಿಕ್ಷಕರಿಗೆ ಬೇಸರ ತರುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದರೂ ಕೆಲಸ ಸಿಗುವ ನಿರೀಕ್ಷೆ ಇವೆ ಎಂದ ಅವರು, ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದ್ದರೂ ಸರ್ಕಾರಿ ಉದ್ಯೋಗಾವಕಾಶ ಸಿಗುತ್ತಿಲ್ಲ. ಉದ್ಯೋಗ ಕಲ್ಪಿಸುವಲ್ಲಿ ಉಭಯ ಸರ್ಕಾರಗಳೂ ಎಡವಿವೆ. ಈಗಿನ ಸಿಎಂ ಡಿ.ಕೆ. ಶಿವಕುಮಾರ್ 35 ಸಾವಿರ ಹುದ್ದೆ ತುಂಬುವ ಭರವಸೆ ನೀಡಿದ್ದಾರೆ. ಇದನ್ನು ಈಡೇರಿಸಿದರೆ ಕರವೇ ರಾಜ್ಯಾಧ್ಯಕ್ಷರೇ ಅವರನ್ನು ಗೌರವಿಸಲಿದ್ದಾರೆ ಎಂದರು.
ಕರವೇ ಹೋರಾಟದ ಫಲವಾಗಿ 3800 ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ದಕ್ಕಿವೆ. ಹೀಗಾಗಿ ಕನ್ನಡ ಪರ ಹೋರಾಟಗಾರರ ಬಗ್ಗೆ ಉಡಾಫೆ ಮಾತಿನ ಬದಲಾಗಿ ನಮ್ಮ ಹೋರಾಟಕ್ಕೆ ಬಲ ನೀಡಿ ಎಂದು ಮನವಿ ಮಾಡಿದರು.
ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂದಿನ ಸಿಎಂ ಸಿದ್ದರಾಮಯ್ಯ ತೆಗೆಸಲಿಲ್ಲ. ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾದರೂ ಕಾರ್ಯೋನ್ಮುಖರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಜೆ.ಎಚ್.ಪಟೇಲ್ ಕಾಲೇಜಿನ ಕಾರ್ಯದರ್ಶಿ ಮುಸ್ತಾಫ ಮಾತನಾಡಿ ಮಕ್ಕಳ ಓದಿಗೆ ಪಾಲಕರು ಒತ್ತಡ ಹೇರಬಾರದು. ಅವರಲ್ಲಿ ಧೈರ್ಯ, ವಿಶ್ವಾಸ ತುಂಬಬೇಕು ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ರತ್ನ ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿದರು. ನಿವೃತ್ತ ಡಿಡಿಪಿಐ ಜಿ.ಕೊಟ್ರೇಶ್, ಎಸ್.ಎಸ್.ಮಂಜುನಾಥ್, ಶಿವರಾಜ್ ಈಳಿಗೇರ್, ವಿನೋದ್ ರೆಡ್ಡಿ, ಎಚ್.ದಾದಾಪೀರ್, ಹೆಗ್ಗೆರೆ ರಂಗಪ್ಪ ಇತರರನ್ನು ಸನ್ಮಾನಿಸಲಾಯಿತು.