ದಾವಣಗೆರೆ: ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಡಿಕೆ ಶಿವಕುಮಾರ್ ಅವರು ಸಿಎಂ ಆಗಲು ಯಾರ ವಿರೋಧವೂ ಇಲ್ಲ. ಅವರಿಗೆ ಸಿದ್ದರಾಮಯ್ಯ ಅವರೇ ಬೆಂಬಲ ಸೂಚಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಸಿ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕಾಂಗ ಸಭೆಯಲ್ಲಿ ಡಿಕೆಶಿ ಅಧಿಕೃತ ಸಿಎಂ ಆಗಲಿದ್ದಾರೆ. ಇದಕ್ಕೆ ಯಾವುದೇ ಅಡ್ಡಿ ಅತಂಕವಿಲ್ಲ ಎಂದು ಹೇಳಿದರು.
ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕಾಗಿ ಸಾಕಷ್ಟು ದುಡಿದಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಈ ಬಾರಿ ಅವಕಾಶ ನೀಡಿದೆ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ. 2028ರಲ್ಲಿ ಒಟ್ಟಾಗಿ ಶ್ರಮಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಂದಾಗಲಿದ್ದೇವೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಲು ಸತೀಶ್ ಜಾರಕಿಹೊಳಿಗೆ ಸಾಮರ್ಥ್ಯ ಮತ್ತು ಯೋಗ್ಯತೆ ಇದೆ. ಅವರೇ ಸಾರಥ್ಯ ವಹಿಸುವುದಾಗಿ ಹೇಳಿದ್ದಾರೆ. ಉಪಚುನಾವಣೆ ಜವಾಬ್ದಾರಿ ವಹಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮೌನದಿಂದಲೇ ಸಂಘಟನೆ ಮಾಡಿ ಯಶಸ್ವಿಯಾಗಲಿದ್ದಾರೆ. ಅವರು ಅಧ್ಯಕ್ಷರಾದರೆ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.
ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಒಬ್ಬ ರಾಜಕಾರಣಿ ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಇದರಿಂದ ಕಾಂಗ್ರೆಸ್ ವರ್ಚಸ್ಸು ವೃದ್ಧಿಸಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಅವರ ಅನುಭವದ ಪಾಠ ಹೇಳಿದೆ ಎಂದು ಹೇಳಿದರು
ಸಿಎಂ ರಾಜೀನಾಮೆ ನೀಡಿದ್ದು ನಾವೀಗ ಸಧ್ಯ ಮಾಜಿ ಸಚಿವರು. ಇಡೀ ಸಂಪುಟ ಈ ಅಸ್ತಿತ್ವದಲ್ಲಿಲ್ಲ. ಯಾರು ಸಚಿವರು ಆಗುತ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಅಪಮಾನಿಸಿಲ್ಲ. ಕೆಟ್ಟದ್ದಾಗಿಯೂ ನಡೆಸಿಕೊಂಡಿಲ್ಲ. ರಾಜಕೀಯ ಕಾರಣಕ್ಕಾಗಿ ಅವರ ಬಗ್ಗೆ ಪ್ರಲ್ಹಾದ ಜೋಶಿ ಅನುಕಂಪ, ಕರುಣೆ ತೋರಿಸುತ್ತಿದ್ದಾರೆ. ಬಿಜೆಪಿಯವರ ಕನಸು ನುಚ್ಚು ನೂರಾಗಿದ್ದಕ್ಕೆ ಹತಾಷರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ರಾಹುಲ್ಗಾಂಧಿ ಹೇಳಿದ್ದಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಆರೇಳು ತಿಂಗಳಿಂದ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿತ್ತು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುವಾಗ ಬಿಜೆಪಿಯವರು ಯಾವ ರೀತಿ ಒತ್ತಡ ಹಾಕಿದ್ದರು ಎಂಬುದು ಗೊತ್ತಿದೆ. ಯಡಿಯೂರಪ್ಪ ಕಣ್ಣೀರು ಹಾಕುತ್ತಲೇ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರು. ಆ ರೀತಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ನಡೆಸಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡರು.