ಆಗಸ್ಟ್‌ನಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ

ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ, ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ, ಜಯಮ್ಮ ನೀಲಗುಂದ, ಸತ್ಯಭಾಮಾ ಮಂಜುನಾಥ್,  ಆಶಾ ನಾವುಡ, ಬಿ.ದಿಳ್ಯಪ್ಪ, ಕೆ.ರಾಘವೇಂದ್ರ ನಾಯರಿ, ಎನ್.ಎಸ್. ರಾಜು ಇತರರಿದ್ದರು.
ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ, ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ, ಜಯಮ್ಮ ನೀಲಗುಂದ, ಸತ್ಯಭಾಮಾ ಮಂಜುನಾಥ್, ಆಶಾ ನಾವುಡ, ಬಿ.ದಿಳ್ಯಪ್ಪ, ಕೆ.ರಾಘವೇಂದ್ರ ನಾಯರಿ, ಎನ್.ಎಸ್. ರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಸಾಪ ನಿರ್ಧಾರ
  • ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ
  • ಸ್ವಾಗತ ಸಮಿತಿಗೆ ಮಹಾಪೋಷಕರಾಗಿ ಡಾ.ಪ್ರಭಾ ಆಯ್ಕೆ
ದಾವಣಗೆರೆ: ದಾವಣಗೆರೆ ಜಿಲ್ಲೆಯಾಗಿ 28 ವರ್ಷದ ಬಳಿಕ, ಚೊಚ್ಚಲ ಬಾರಿಗೆ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಗಸ್ಟ್ 8, 9ರಂದು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಅಧ್ಯಕ್ಷತೆಯಲ್ಲಿ ಶನಿವಾರ, ವಿವಿಧ ಮಹಿಳಾ ಸಂಘಟನೆಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.
ವೇದಿಕೆ, ಆಹಾರ, ಹಣಕಾಸು, ಸ್ಮರಣ ಸಂಚಿಕೆ ಸೇರಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ತಲಾ ಸಮಿತಿಗೆ 9ರಿಂದ 15 ಜನ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಲಾಯಿತು. ಸ್ವಾಗತ ಸಮಿತಿಗೆ ಮಹಾಪೋಷಕರಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಆಖೈರುಗೊಳಿಸಲಾಯಿತು.
ಸಮ್ಮೇಳನಾಧ್ಯಕ್ಷತೆಗೆ ಲೇಖಕಿ, ಮಹಿಳಾ ಸಾಹಿತಿಗಳ ಪರಿಚಯವನ್ನು ಕಸಾಪ ಜಿಲ್ಲಾಧ್ಯಕ್ಷರ ವಾಟ್ಸಾೃಪ್‌ಗೆ ಸಲ್ಲಿಸಿದಲ್ಲಿ, ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಅಂತಿಮಗೊಳಿಸುವ ಬಗ್ಗೆಯೂ ಸೂಚಿಸಲಾಯಿತು.
ಮೊದಲ ದಿನದ ಕಾರ್ಯಕ್ರಮದಲ್ಲಿ ಮಹಿಳಾ ವಿಚಾರಗೋಷ್ಠಿ, ಮಹಿಳಾ ಕವಿಗೋಷ್ಠಿ ನಡೆಸಲು, ಎರಡನೇ ದಿನದಂದು ಸೋಬಾನೆ, ಭಜನಾ ಪದಗಳು, ಕೋಲಾಟ, ವೀರಗಾಸೆ ಮೊದಲಾದ ಗ್ರಾಮೀಣ ಕಲಾ ತಂಡಗಳಿಗೆ ಮೀಸಲಿಡಲು ನಿಶ್ಚಯಿಸಲಾಯಿತು.
ಸಮ್ಮೇಳನದ ಹಿನ್ನೆಲೆಯಲ್ಲಿ ಊಟ, ಉಪಹಾರ ಇತರೆ ವೆಚ್ಚಕ್ಕಾಗಿ ದಾನಿಗಳ ಮೂಲಕ ಸಂಪನ್ಮೂಲ ಕ್ರೋಡೀಕರಣ ಮಾಡಲು ಹಾಗೂ ವಸ್ತು ಪ್ರದರ್ಶನ, ಪುಸ್ತಕ ಮಳಿಗೆ ಅಯೋಜಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಲೇಖಕಿಯರು, ಕನ್ನಡಪರ ಸಂಘಟನೆಗಳ ಮಹಿಳಾ ಹೋರಾಟಗಾರರು ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡುವುದಾಗಿ ಹೇಳಿದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಯಮ್ಮ ನೀಲಗುಂದ, ಹೇಮಾ ಶಾಂತಪ್ಪ ಪೂಜಾರಿ, ಸುವರ್ಣಮ್ಮ, ನಿರ್ಮಲಾ ಶಿವಕುಮಾರ್, ಮಮತಾ ನಾಗರಾಜ್, ಪತ್ರಕರ್ತೆ ಎ.ಬಿ. ರುದ್ರಮ್ಮ, ಛಾಯಾಗ್ರಾಹಕಿ ಮಂಗಳಾ, ಓಂಕಾರಮ್ಮ ರುದ್ರಮುನಿಸ್ವಾಮಿ, ಸತ್ಯಭಾಮಾ ಮಂಜುನಾಥ್, ಆಶಾ ನಾವುಡ, ಮಲ್ಲಮ್ಮ ನಾಗರಾಜ್, ಉಮಾ ಇತರರಿದ್ದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಲಂಬಿ, ಸ್ಪೂರ್ತಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್. ರಾಜು ಇತರರು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಮಹಿಳಾ ಸಾಹಿತಿ, ಲೇಖಕಿಯರು ಸಾಕಷ್ಟು ಜನರಿದ್ದಾರೆ. ಅವರನ್ನು ಮುಂಚೂಣಿಗೆ ತರುವ ಜತೆಗೆ ಅವರಿಗೇ ಆದ್ಯತೆ ನೀಡುವ ಉದ್ದೇಶದಿಂದ ಈ ಬಾರಿ ಮಹಿಳೆಯರಿಗೇ ಮೀಸಲಾದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸ್ಮರಣಸಂಚಿಕೆಯಲ್ಲೂ ಲೇಖಕಿಯರಿಗೇ ಆದ್ಯತೆ ನೀಡಲಾಗುತ್ತಿದೆ. ಇದು ಜಿಲ್ಲೆಯ 15ನೇ ಸಮ್ಮೇಳನ ಆಗಿದೆ.

— ಬಿ. ವಾಮದೇವಪ್ಪ ತೊಲಗೇರಿ, ಕಸಾಪ ಜಿಲ್ಲಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net