ಜಿಲ್ಲಾ ಸಚಿವರು ಬೆಳೆಹಾನಿ ಸ್ಥಳ ಪರಿಶೀಲಿಸಲಿ

ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್, ಎಚ್.ಸಿ. ಜಯಮ್ಮ,  ಜಿ.ಬಿ. ಗಂಗಾಧರ್,  ಎಸ್.ಟಿ. ವೀರೇಶ್ ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್, ಎಚ್.ಸಿ. ಜಯಮ್ಮ, ಜಿ.ಬಿ. ಗಂಗಾಧರ್, ಎಸ್.ಟಿ. ವೀರೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಆಗ್ರಹ
  • ಪರಿಹಾರ ವಿತರಣೆಯತ್ತ ಗಮನಿಸಲಿ ಕಾಂಗ್ರೆಸ್
  • ಸಮಗ್ರ ಬೆಳೆಹಾನಿ ಸಮೀಕ್ಷೆ ಮಾಡಲು ಒತ್ತಾಯ
ದಾವಣಗೆರೆ: ಜಿಲ್ಲೆಯಲ್ಲಿ ಮಳೆ-ಗಾಳಿಯಿಂದಾಗಿ ಹೆಚ್ಚಿನ ಬೆಳೆಹಾನಿಯಾಗಿದೆ. ತೋಟಗಾರಿಕಾ ಇಲಾಖೆ ವಹಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್. ಮಲ್ಲಿಕಾರ್ಜುನ್ ಅವರು ಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಆಗ್ರಹಿಸಿದರು.
ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡುವಷ್ಟರಲ್ಲಿ ಆಲಿಕಲ್ಲು ಮಳೆ ಹಾಗೂ ಭಾರೀ ಬಿರುಗಾಳಿ ಬೀಸಿ ಬೆಳೆ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲಾ ಸಚಿವರು ಹಾನಿಯಾದ ತೋಟ, ಗದ್ದೆಗಳಿಗೆ ಭೇಟಿ ನೀಡದೆ ನಾಪತ್ತೆಯಾಗಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಬಹುವಾರ್ಷಿಕ ಬೆಳೆಗಳಾದ ಅಡಿಕೆ, ಬಾಳೆ ಗಿಡಗಳು ನೆಲಕ್ಕುರುಳಿವೆ. ರೈತರು ಆರ್ಥಿಕ ನಷ್ಟದಲ್ಲಿದ್ದಾರೆ. ಈವರೆಗೆ ತೋಟಗಾರಿಕಾ ಸಚಿವರು ಭೇಟಿ ನೀಡಿ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಿಲ್ಲ. ಪ್ರತಿ ಮರದ ಲೆಕ್ಕ ಹಾಕಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹರಿಹರ ಇತರೆಡೆ ಹುಲುಸಾಗಿ ಬೆಳೆದ ಭತ್ತದ ಬೆಳೆ ನೆಲಕ್ಕೆ ಬಿದ್ದು ಚಾಪೆ ಹಾಸಿದಂತಾಗಿದೆ. ಕಾಳು ನೆಲಕ್ಕೆ ಸುರಿದಿದೆ. ಭತ್ತದ ಹುಲ್ಲು ಕೈಗೆ ಸಿಗುವುದಿಲ್ಲ. ಹಾಗಾಗಿ ರೈತರು ಕಂಗಾಲಾಗಿದ್ದಾರೆ. ಶಾಸಕ ಕೆ.ಎಸ್. ಬಸವಂತಪ್ಪ ಒಂದೆರಡು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.
ನಷ್ಟ ಸಮೀಕ್ಷೆಗೆ ಅಧಿಕಾರಿಗಳಿಗೆ ಸೂಚಿಸಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪರಿಹಾರದ ಬಗ್ಗೆ ಚಕಾರ ಎತ್ತಿಲ್ಲ. ಕೇವಲ ಸಮೀಕ್ಷೆಯಿಂದ ರೈತರ ಹೊಟ್ಟೆ ತುಂಬುವುದಿಲ್ಲ. ಸಚಿವ ಎಸ್ಸೆಸ್ಸೆಂ ಅವರಿಗೆ ತಿಳಿಸಿ ಸಮರ್ಪಕ ಪರಿಹಾರ ಒದಗಿಸಬೇಕು. ಸಮಗ್ರ ಬೆಳೆ ಹಾನಿ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಹೋರಾಟಕ್ಕೆ ಅಸಮಾಧಾನ
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಿ.ಬಿ. ಗಂಗಾಧರ್ ಮಾತನಾಡಿ ಯುದ್ಧದಿಂದಾಗಿ ತೈಲದ ಬಿಕ್ಕಟ್ಟು ಎದುರಾಗಿದ್ದು, ದೇಶದ ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಶೇ. 3 ರಷ್ಟು ತೈಲ ಬೆಲೆ ಏರಿಕೆ ಆಗಲಿದ್ದು, ಜನರು ಮಿತವಾಗಿ ಬಳಸಿ ಎಂದು ಕರೆ ನೀಡಿದ್ದಾರೆ. ಇದನ್ನು ಟೀಕಿಸಿ ಕಾಂಗ್ರೆಸಿಗರು ಬೀದಿಗಿಳಿದು ಹೋರಾಟ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಯುದ್ಧದ ಬಿಕ್ಕಟ್ಟಿನ ಪರಿಣಾಮ ಅಮೆರಿಕದಲ್ಲೇ ಶೇ. 42, ಚೀನಾದಲ್ಲಿ ಶೇ. 22ರಷ್ಟು ತೈಲ ಬೆಲೆ ಹೆಚ್ಚಳವಾಗಿದೆ. ನೈಸರ್ಗಿಕ ಸಂಪನ್ಮೂಲಗಳಿಲ್ಲದ ಭಾರತದಲ್ಲಿ ಶೇ. 85 ರಷ್ಟು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗಿದೆ. ಇದನ್ನು ಅರಿಯದೆ ಕಾಂಗ್ರೆಸ್ ಟೀಕಿಸುವುದು ಖಂಡನೀಯ ಎಂದು ತಿಳಿಸಿದರು.
ತೈಲ ಮಿತವ್ಯಯಕ್ಕೆ ಪ್ರಧಾನಿ ಕರೆ ನೀಡಿದ್ದಕ್ಕೆ ದೇಶದ ಪರಿಸ್ಥಿತಿಯ ಗಂಧಗಾಳಿಯಹೇ ಗೊತ್ತಿಲ್ಲದ ಕಾಂಗ್ರೆಸಿಗರು ಮೋದಿ ಅವರ ರಾಜೀನಾಮೆ ಕೇಳುತ್ತಿರುವುದು ಮೂರ್ಖತನದ ಪರಮಾವಧಿ ಎಂದರು.
ಪಕ್ಷದ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ. ಜಯಮ್ಮ ಮಾತನಾಡಿ, ಕಾಂಗ್ರೆಸ್‌ನ ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಅವರು ಯುದ್ಧದ ಸಂದರ್ಭದಲ್ಲಿ ಒಂದ್ಹೊತ್ತಿನ ಊಟದ ತ್ಯಜಿಸಲು, ಚಿನ್ನ ಖರೀದಿಸಬೇಡಿ ಎಂದು ದೇಶದ ಜನರಿಗೆ ಮನವಿ ಮಾಡಿದ್ದ ಇತಿಹಾಸವನ್ನೇ ಮರೆತ ಕಾಂಗ್ರೆಸಿಗರು ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಿ. ಲೋಹಿತ್‌ಕುಮಾರ್, ರಘು, ಗೋವಿಂದಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net