ಸೊಸೈಟಿ ಮೂಲಕವೇ ರಸಗೊಬ್ಬರ ವಿತರಿಸಿ

ಮುಂಗಾರು ಸಿದ್ಧತೆ ಕುರಿತು ದಾವಣಗೆರೆಯಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಜಂಟಿ ಕೃಷಿ ನಿರ್ದೇಶಕ ಕೆ.ಜಿಯಾವುಲ್ಲಾ, ಉಪನಿರ್ದೇಶಕಿ ಭಾರತಮ್ಮ, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಇತರರಿದ್ದರು.
ಮುಂಗಾರು ಸಿದ್ಧತೆ ಕುರಿತು ದಾವಣಗೆರೆಯಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಜಂಟಿ ಕೃಷಿ ನಿರ್ದೇಶಕ ಕೆ.ಜಿಯಾವುಲ್ಲಾ, ಉಪನಿರ್ದೇಶಕಿ ಭಾರತಮ್ಮ, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ತಡೆಗೆ ಜಾಗೃತದಳ ಗಮನ ಹರಿಸಲಿ ಜಾಗೃತದಳ
  • ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ
  • ದಾವಣಗೆರೆಯಲ್ಲಿ ಕೃಷಿ ಅಧಿಕಾರಿಗಳ ಜತೆ ಸಭೆ
ದಾವಣಗೆರೆ: ಸಹಕಾರ ಸಂಘಗಳ ಮುಖಾಂತರವೇ ರೈತರಿಗೆ ರಸಗೊಬ್ಬರ ವಿತರಣೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಗುರುವಾರ ಮುಂಗಾರು ಸಿದ್ಧತೆ ಕುರಿತು ಕೃಷಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಗೊಬ್ಬರ ವಿತರಣೆಗೆ ನಿರಾಕರಿಸುವ ಸೊಸೈಟಿಗಳನ್ನು ಸಹಕಾರ ಸಂಘಗಳ ಉಪ ನಿಬಂಧಕರು, ಸಹಾಯಕ ನಿಬಂಧಕರ ಮೂಲಕ ಭೇಟಿಯಾಗಿ ರಸಗೊಬ್ಬರ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಫೆಡರೇಷನ್ ಹಾಗೂ ಕೃಷಿ ಇಲಾಖೆಯ ದಾಸ್ತಾನು ಮಳಿಗೆಗಳಲ್ಲಿ ಕಡ್ಡಾಯವಾಗಿ ಅಗತ್ಯ ಪ್ರಮಾಣದ ಗೊಬ್ಬರ ಸಂಗ್ರಹ ಇರಬೇಕು ಎಂದು ಸೂಚಿಸಿದರು.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜಗಳಿಗೆ ಕೊರತೆ ಆಗದತಂತೆ ನಿಗಾ ವಹಿಸಿ, ನಿಗದಿತ ದರದಲ್ಲಿ ಪೂರೈಸಬೇಕು ಎಂದು ಹೇಳಿದರು.
ಆಗದಿರಲಿ ಯೂರಿಯಾ ಕೃತಕ ಅಭಾವ
ಮಳೆ ಅಭಾವವಾದಾಗ ರೈತರು ಒಮ್ಮೆಗೆ ಬಿತ್ತನೆಗಿಳಿದಾಗ ಯೂರಿಯಾಗೆ ಹೆಚ್ಚು ಬೇಡಿಕೆ ಬರಲಿದೆ. ಖಾಸಗಿ ಏಜೆನ್ಸಿಗಳು ಇದನ್ನೇ ಬಂಡವಾಳವಾಗಿಸಿ ಕೃತಕ ಅಭಾವ ಸೃಷ್ಟಿಸಬಹುದು. ಇಂಥ ಅಕ್ರಮಕ್ಕೆ ಅವಕಾಶ ಮಾಡಿಕೊಡಬಾರದು.
ಕೃಷಿ ಜಾಗೃತ ದಳ ಅಧಿಕಾರಿಗಳು ಇಂತಹ ಅಕ್ರಮಗಳನ್ನು ತಡೆಯಬೇಕು. ಬೇಜವಾಬ್ದಾರಿತನ ತೋರಿದರೆ, ದಂಧೆಕೋರರ ಜತೆ ಶಾಮೀಲಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಯಚೂರು ಮತ್ತು ಇತರೆಡೆಗಳಿಂದ ತಂದ ನಕಲಿ ಬಿಡಿ ಬಿತ್ತನೆ ಬೀಜವನ್ನು ರಸೀದಿರಹಿತವಾಗಿ ರೈತರು ಖರೀದಿಸುತ್ತಿದ್ದಾರೆ. ಇದರಿಂದ ಬೆಳೆ ನಷ್ಟಕ್ಕೀಡಾಗಿ ಮೋಸ ಹೋಗಬಹುದು. ಹೀಗಾಗಿ ಇದಕ್ಕೆ ಕಡಿವಾಣ ಹಾಕಬೇಕು.
ಬೆಳೆ ವಿಮೆ ಪಾವತಿಯಲ್ಲಿ ಕೆಲವೆಡೆ ನಡೆಯುತ್ತಿರುವ ಬೋಗಸ್ ದಂಧೆ ಬಗ್ಗೆಯೂ ದೂರುಗಳು ಕೇಳಿಬಂದಿವೆ. ಇಂತಹ ಯಾವುದೇ ಬೋಗಸ್ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾವಹಿಸಿ. ಅರ್ಹ ರೈತರಿಗೆ ವಿಮಾ ಸೌಲಭ್ಯ ಸಿಗುವಂತೆ ಪಾರದರ್ಶಕ ನಿರ್ವಹಣೆ ಮಾಡಬೇಕು ಎಂದೂ ಹೇಳಿದರು.
ಮುಂಗಾರು ಮಳೆ ಕ್ಷೀಣಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ನೀರು ಮತ್ತು ಮಳೆಯ ಕೊರತೆಯಿಂದ ಪ್ರದೇಶಗಳಲ್ಲಿ ಕಡಿಮೆ ನೀರು ಮತ್ತು ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ರಾಗಿ, ನವಣೆ, ಸಜ್ಜೆ, ಬರಗು ಮತ್ತು ಸಾಮೆ ಮುಂತಾದ ಸಿರಿಧಾನ್ಯಗಳನ್ನು ಬೆಳೆಯಲು ಆದ್ಯತೆ ನೀಡಿ ಎಂದರು.
ರೈತರು ಒಂದೇ ಬೆಳೆ ನಂಬಿಕೊಳ್ಳದೆ, ಮಳೆಯ ಲಭ್ಯತೆಗೆ ಅನುಗುಣವಾಗಿ ಮಿಶ್ರಬೆಳೆ ಅಥವಾ ಸಾಲು ಬೆಳೆ ಪದ್ಧತಿ ಅನುಸರಿಸಿದಲ್ಲಿ ನಷ್ಟವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ರೈತರು ಆಲೋಚನೆ ಮಾಡಬೇಕು. ಈ ಬಗ್ಗೆ ಕೃಷಿ ಇಲಾಖೆಯಿಂದ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು ಹೇಳಿದರು.
ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ರೈತಸಿರಿಯಂತಹ ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ರೈತರು ಪಡೆಯಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಕೆ.ಜಿಯಾವುಲ್ಲಾ, ಉಪನಿರ್ದೇಶಕಿ ಭಾರತಮ್ಮ, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಅಧಿಕಾರಿ ಚಂದ್ರಪ್ಪ, ಬೀರಪ್ಪ, ಎಂಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಣ್ಣ, ಆನಗೋಡು ಕರಿಬಸಪ್ಪ ಹಾಗೂ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net