ಹೆಚ್ಚುತ್ತಿವೆ ಡಿಜಿಟಲ್ ಅರೆಸ್ಟ್ ಪ್ರಕರಣ

ಜಗಳೂರು ಪಟ್ಟಣದ ಪೊಲೀಸ್ ಠಾಣೆಗೆ ಸೋಮವಾರ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿದರು. ಡಿವೈಎಸ್ಪಿ ಬಸವರಾಜ್ ಇದ್ದರು.
ಜಗಳೂರು ಪಟ್ಟಣದ ಪೊಲೀಸ್ ಠಾಣೆಗೆ ಸೋಮವಾರ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿದರು. ಡಿವೈಎಸ್ಪಿ ಬಸವರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆದರಿಕೆ ಕರೆಗಳು ಬಂದರೆ ದೂರು ದಾಖಲಿಸಿ
  • ದಾವಣಗೆರೆ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿಕೆ
  • ಜಗಳೂರು ಪೊಲೀಸ್ ಠಾಣೆಗೆ ಭೇಟಿ
ಜಗಳೂರು: ಜನರು ಮತ್ತು ಆರಕ್ಷಕರ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಕೈಗೊಂಡಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ನಂಬಿಕೆ ಹೆಚ್ಚಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಗೆ ಸೋಮವಾರ ಭೇಟಿ ನೀಡಿ ಮಾತನಾಡಿ, ಪೊಲೀಸರು ನೇರವಾಗಿ ಮನೆಗಳಿಗೆ ತೆರಳಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದರಿಂದ ನಿತ್ಯ ಹತ್ತಾರು ಕರೆಗಳು ಬರುತ್ತಿದ್ದು, ಕೂಡಲೇ ಪೊಲೀಸರನ್ನು ಕಳಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. 112 ಪೊಲೀಸ್ ಸಹಾಯವಾಣಿ ಜನರಿಗೆ ತುಂಬ ಅನುಕೂಲವಾಗಿದೆ ಎಂದರು.
ಡಿಜಿಟಲ್ ಅರೆಸ್ಟ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ವಂಚಕರು ಪೊಲೀಸ್, ಸಿಬಿಐ ಅಥವಾ ಟೆಲಿಕಾಂ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ವ್ಯಕ್ತಿ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆದಿರುವ ಅಥವಾ ಹಣದ ಅಕ್ರಮ ವರ್ಗಾವಣೆ ನಡೆದಿದೆ ಎಂದು ಹೆದರಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿದ್ದು, ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಯಾವುದೇ ಬೆದರಿಕೆ ಕರೆಗಳು ಬಂದಾಗ ಪ್ರತಿಕ್ರಿಯಿಸದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಪೊಲೀಸ್ ಮಿತ್ರ ಪಡೆಯು ಮುಖ್ಯವಾಗಿ ಅಪರಾಧ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ. ಶಾಂತಿಯುತ ಸಮಾಜವನ್ನು ನಿರ್ಮಿಸುತ್ತದೆ. ಸಾರ್ವಜನಿಕ ಸುರಕ್ಷತೆ ಸುಧಾರಿಸುವ ಗುರಿ ಹೊಂದಿದೆ. ಈ ಸ್ವಯಂ ಸೇವಕ ಪಡೆ ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ಬೆಂಬಲ ನೀಡುವಲ್ಲಿ ತೊಡಗಿಸಿಕೊಂಡಿದೆ ಎಂದರು.
ಆರಕ್ಷಕರ ಇಲಾಖೆಗೆ ಸಂಬಂಧಿಸಿದ ಹಳೆ ವಸತಿಗೃಹಗಳನ್ನು ತೆರವುಗೊಳಿಸಿ, ಹೊಸದಾಗಿ 24 ವಸತಿ ಗೃಹಗಳ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಇನ್ನು ಪಟ್ಟಣದ ಹತ್ತಿರ ಮೂರ‌್ನಾಲ್ಕು ಎಕರೆ ಜಾಗ ಸಿಕ್ಕರೆ ಪೊಲೀಸ್‌ಠಾಣೆ, ಕ್ಯಾಂಪ್ ಮಾಡಲು ಉದ್ದೇಶಿಸಲಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಬಸವರಾಜ್, ಪಿಐ ಸಿದ್ರಾಮಯ್ಯ, ಪಿಎಸ್‌ಐ ಗಾದಿಲಿಂಗಪ್ಪ ಮತ್ತಿತರರಿದ್ದರು.

ಕೇಬಲ್ ಕಳ್ಳರ ಜಾಲ ಪತ್ತೆಗೆ ಸೂಚನೆ

ತಾಲೂಕಿನ ಜಮ್ಮಾಪುರ, ತೋರಣಗಟ್ಟೆ, ಗೊಲ್ಲರಹಟ್ಟಿ, ಕಟ್ಟಿಗೆಹಳ್ಳಿ, ಲಿಂಗಣ್ಣನಹಳ್ಳಿ, ಅರಿಶಿನಗುಂಡಿ ಸೇರಿ ವಿವಿಧ ಗ್ರಾಮಗಳಲ್ಲಿ ಮೋಟರ್ ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ಕೇಬಲ್ ವೈರ್‌ಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಕೇಬಲ್ ಕಳ್ಳತನಕ್ಕೆ ಹೊರಗಿನಿಂದ ಯಾರೂ ಬರುವುದಿಲ್ಲ. ಇಲ್ಲಿನ ಜನರೇ ಮಾಡಿರುತ್ತಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕಳ್ಳರ ಜಾಲ ಪತ್ತೆ ಮಾಡಬೇಕು ಎಂದು ಸಿದ್ರಾಮಯ್ಯ ಅವರಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಪಿಐ ಸಿದ್ರಾಮಯ್ಯ, ಈವರೆಗೂ ತಾಲೂಕಿನಲ್ಲಿ ಮೂರ‌್ನಾಲ್ಕು ರೈತರು ದೂರು ನೀಡಿದ್ದಾರೆ. ಪರಿಶೀಲನೆ ಮಾಡಿ ಕೆಲವರನ್ನು ಕರೆದು ಮಾಹಿತಿ ಪಡೆದು ಎಚ್ಚರಿಕೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಕ್ಲಬ್‌ಗಳಲ್ಲಿ ಜೂಜಾಟ ನಡೆದರೆ ಕ್ರಮ
ಪಟ್ಟಣದ ದಾವಣಗೆರೆ ಮತ್ತು ಚಳ್ಳಕೆರೆ ರಸ್ತೆಯಲ್ಲಿ ಎರಡು ಕಡೆ ತೆರೆದಿರುವ ಕ್ಲಬ್‌ಗಳಲ್ಲಿ ಜೂಜಾಟ ದಂಧೆ ಹೆಚ್ಚಾಗಿದೆ. ಹಗಲು ರಾತ್ರಿ ದೂರದ ನಗರ ಪ್ರದೇಶಗಳಿಂದ ಜನರು ಬಂದು ಆಟವಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್ಪಿ ಉಮಾ ಪ್ರಶಾಂತ್, ಮನರಂಜನೆಗಾಗಿ ಅವಕಾಶ ಪಡೆದಿದ್ದಾರೆ. ಆದರೆ ಜೂಜಾಟ ಇತರೆ ದಂಧೆಗಳು ನಡೆದರೆ ಕೂಡಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿದರು. ಈ ಹಿಂದೆ ಒಂದು ಕ್ಲಬ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೇನಾದರೂ ಅಕ್ರಮ ಕಾರ್ಯಗಳು ನಡೆದರೆ ವಿಡಿಯೋ ಅಥವಾ ಪೋಟೊ ಕಳಿಸಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net