ಆಷಾಢ ಮಾಸದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ರಂಭಾಪುರಿ ಪೀಠದ ಶ್ರೀಗಳು ಸಂತೇಬೆನ್ನೂರಿನ ಉದ್ಯಮಿ ಜಾವಿದ್‌ಸಾಬ್ ಅವರಿಗೆ ವ್ಯವಹಾರ ಕಲಾ ಕೌಶಲ ಪ್ರಶಸ್ತಿ ನೀಡಿದರು. ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಓಂಕಾರ ಶ್ರೀಗಳು, ಶಿವಯೋಗಿ ಶ್ರೀಗಳು, ಎಚ್.ಎಸ್.ನಾಗರಾಜ್, ಡಾ.ಬಿ.ಇ. ರಂಗಸ್ವಾಮಿ, ದೇವರಮನೆ ಶಿವಕುಮಾರ್ ಇತರರಿದ್ದರು.
ದಾವಣಗೆರೆ: ಆರೋಗ್ಯಪೂರ್ಣ ಸಮಾಜಕ್ಕೆ ಆದರ್ಶವೇ ದಾರಿದೀಪ. ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ ಸಂಸ್ಕೃತಿ ಉಳಿಯಲಾರದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದಲ್ಲಿ ಶ್ರೀಮದ್ ವೀರಶೈವ ಸದ್ಬೋಧನಾ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡ ಆಷಾಢ ಮಾಸದ ಜನಜಾಗೃತಿ ಧರ್ಮ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರು ಬೋಧನೆಯಿಂದ ಮನ ಅರಳುತ್ತದೆ. ಭಾವ ಕುಸುಮ ವಿಕಾಸಗೊಳ್ಳುತ್ತದೆ. ಬಿರುಗಾಳಿಯಲ್ಲಿ ತಂಗಾಳಿಯಾದ ಗುರುವಿಗೆ ಎಲ್ಲ ಧರ್ಮಗಳಲ್ಲಿ ಪ್ರಥಮ ಸ್ಥಾನ ಕಲ್ಪಿಸಲಾಗಿದೆ ಎಂದರು.
ಸ್ವಾರ್ಥ ಗೆದ್ದವನು ಶಾಂತಿ ಪಡೆಯಲು ಸಾಧ್ಯ. ಸ್ವಾರ್ಥರಹಿತ ಬದುಕಿಗೆ ಜೀವನದಲ್ಲಿ ಬೆಲೆ ಮತ್ತು ಬಲವೂ ಇರಲಿದೆ. ಅನುಕೂಲ, ಪ್ರತಿಕೂಲ ಪರಿಸ್ಥಿತಿ ಎರಡರಲ್ಲೂ ಬದುಕುವುದು ಜೀವನಕಲೆ. ಮನಸ್ಸು, ಬುದ್ಧಿ ಮತ್ತು ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಜೀವನದಲ್ಲಿ ಶ್ರೇಯಸ್ಸು ನಿಶ್ಚಿತ ಎಂದು ತಿಳಿಸಿದರು.
ದಾವಣಗೆರೆ ವಿವಿ ಕುಲಪತಿ ಡಾ.ಬಿ.ಇ. ರಂಗಸ್ವಾಮಿ ಮಾತನಾಡಿ, ವಿಜ್ಞಾನವು ಸತ್ಯಾನ್ವೇಷಣೆ ಹಾಗೂ ಪ್ರಯೋಗ ನಡೆಸುತ್ತದೆ, ಹೊಸ ಸಾಧ್ಯತೆಗಳನ್ನು ತಿಳಿಸುತ್ತದೆ. ಅದನ್ನು ಮಾನವೀಯತೆ ಹಾಗೂ ನೈತಿಕತೆಯಿಂದ ಬಳಸಿ ಜಾಗೃತ ಸಮಾಜ ನಿರ್ಮಾಣ ಮಾಡುವುದೇ ಮಾನವ ಧರ್ಮ ಎಂದರು.
ವಿಜ್ಞಾನ ಹೊರ ಜಗತ್ತಿನ ಸತ್ಯ ತಿಳಿಸಿದರೆ, ಮಾನವ ಧರ್ಮ ಮಾನವೀಯ ಮೌಲ್ಯ ಕಲಿಸುತ್ತದೆ. ವಿಜ್ಞಾನದ ಆವಿಷ್ಕಾರಗಳನ್ನು ಸಮಾಜಮುಖಿಯಾಗಿ ಬಳಸುವುದನ್ನು ತಿಳಿಸುವುದೇ ಮಾನವ ಧರ್ಮ. ಹೀಗಾಗಿ ವಿಜ್ಞಾನ ಹಾಗೂ ಮಾನವ ಧರ್ಮ ಬೇರೆ ಬೇರೆ ಅಲ್ಲ ಎಂದು ತಿಳಿಸಿದರು.
ವೀರಶೈವ ಮುಖಂಡ ಎಚ್.ಎಸ್.ನಾಗರಾಜ್ ಮಾತನಾಡಿ, ಕೆಲವು ಸ್ವಾಮೀಜಿಗಳು ಪೂಜೆ, ಧಾರ್ಮಿಕ ಕಾರ್ಯಗಳನ್ನು ಮಾಡದೆ ರಾಜಕೀಯ, ಹಗರಣಗಳನ್ನು ಮಾಡುತ್ತ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುತ್ತಿದ್ದಾರೆ. ಜಾತಿಗೊಂದು ಮಠ ನಿರ್ಮಾಣವಾಗಿ ಸಮಾಜ ಕಲುಷಿತ ಆಗುತ್ತಿದೆ ಎಂದು ವಿಷಾದಿಸಿದರು.
ರಂಭಾಪುರಿ ಪೀಠವು ಎಲ್ಲ ಸಮಾಜವನ್ನೂ ಪ್ರೀತಿಸಲಿದೆ. ಪಂಚಪೀಠಗಳು ಸಮಾಜವನ್ನು ಸರಿದಾರಿಯಲ್ಲಿ ನಡೆಸುತ್ತ ಬಂದಿವೆ ಎಂದ ಅವರು ದಾವಣಗೆರೆಯಲ್ಲಿ ಪಂಚ ಪೀಠಾಧೀಶ್ವರರು ಒಂದೆಡೆ ಸೇರಿದ್ದರು. ಆದರೆ ಅಡ್ಡಪಲ್ಲಕ್ಕಿ ಉತ್ಸವ ನಡೆಸಬೇಕಿದೆ ಎಂದು ಆಶಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ಪಂಚಪೀಠಗಳು ಭೌತಿಕ ಆಸ್ತಿ ಮಾಡದೆ ಶಿಷ್ಯವರ್ಗವನ್ನೇ ಸಂಪಾದಿಸಿದೆ. ಎಲ್ಲ ವರ್ಗದವರಿಗೂ ಜ್ಞಾನ, ಅನ್ನದಾಸೋಹ ನೀಡುತ್ತ ಬಂದಿವೆ. ಪೀಠಗಳು ಅಂದು ಗುರುಕುಲ, ಶಾಲೆಗಳನ್ನು ತೆರೆಯದೇ ಹೋಗಿದ್ದರೆ ಅನೇಕರು ಶಿಕ್ಷಣವಂಚಿತರಾಗುತ್ತಿದ್ದರು ಎಂದರು.
ಸಂತೇಬೆನ್ನೂರಿನ ಉದ್ಯಮಿ ಜಾವಿದ್‌ಸಾಬ್ ಅವರಿಗೆ ವ್ಯವಹಾರ ಕಲಾ ಕೌಶಲ ಪ್ರಶಸ್ತಿ ನೀಡಲಾಯಿತು.
ನೇತೃತ್ವ ವಹಿಸಿದ ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಧರ್ಮ ಮತ್ತು ವಿಜ್ಞಾನದಲ್ಲಿ ಸಮನ್ವಯ ಇದ್ದಾಗ ಮಾನವನ ಬದುಕು ಎತ್ತರಕ್ಕೆ ತಲುಪಲಿದೆ ಎಂದರು.
ಕಾಂಗ್ರೆಸ್‌ಗೆ ಬರುವಂತೆ ಡಿ.ಕೆ. ಶಿವಕುಮಾರ್ ಅವರು ನನಗೆ ಆಹ್ವಾನ ನೀಡಿದ್ದರು. ನನ್ನ ಜತೆ ಬಂದರೆ ಒಂದು ಸ್ಥಾನಕ್ಕೆ ಹೋಗುತ್ತೀಯ ಎಂದು ಹೇಳಿ ಕರೆದಿದ್ದರು. ನಾನದಕ್ಕೆ ಒಪ್ಪಿರಲಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರು ತಮ್ಮ ಮೊಬೈಲಿನಲ್ಲಿ ವೀರಗಂಗಾಧರ ಅಜ್ಜಯ್ಯನವರ ಚಿತ್ರ ಹಾಕಿಕೊಂಡಿದ್ದನ್ನು ಒಮ್ಮೆ ನನಗೆ ತೋರಿಸಿದ್ದರು. ನೀವು ವೀರಶೈವ ಲಿಂಗಾಯತರು ಅಜ್ಜಯ್ಯನವರ ಫೋಟೋ ಮೊಬೈಲಿಗೆ ಹಾಕಿಕೊಂಡಿಲ್ಲ. ನಾನು ಹಾಕಿಕೊಂಡಿದ್ದೇನೆ. ಅವರ ಆಶೀರ್ವಾದದಿಂದ ಕಾಂಗ್ರೆಸ್‌ಗೆ 136 ಸೀಟು ಬಂದಿವೆ ಎಂದಿದ್ದರು ಎಂದು ಹೇಳಿದರು.