ದೇವಿಯ ಎಡೆ ಜಾತ್ರೆಗೆ ಭಕ್ತರ ದಂಡು

ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಎಡೆ ಜಾತ್ರೆ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಎಡೆ ಜಾತ್ರೆ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರ ದೇವತೆಯ ದರ್ಶನ
  • ಮಳೆ-ಬೆಳೆಗಾಗಿ ಪ್ರಾರ್ಥನೆ
ದಾವಣಗೆರೆ : ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಎಡೆ ಜಾತ್ರೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದಾವಣಗೆರೆ ಹಾಗೂ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವಿಯ ದರ್ಶನಕ್ಕೆ ದೂರ ದೂರದ ವರೆಗೆ ಸಾಲುಗಟ್ಟಿ ನಿಂತಿದ್ದರು. ಮನೆಯಿಂದ ತಂದಿದ್ದ ಎಡೆಯನ್ನು ಭಕ್ತಿಯಿಂದ ದೇವಿಗೆ ಅರ್ಪಿಸಿ ಉತ್ತಮ ಮಳೆ-ಬೆಳೆ, ನೆಮ್ಮದಿ ಕರುಣಿಸುವಂತೆ ಪ್ರಾರ್ಥಿಸಿದರು.
ಹಿಂದಿನಿಂದಲೂ ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಮಳೆ, ಬೆಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಆವರಿಸಿದ ಸಂದರ್ಭದಲ್ಲಿ ರೈತರು, ದನಕರುಗಳು, ಪಶುಪಕ್ಷಿಗಳು, ವ್ಯಾಪಾರಸ್ಥರು, ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾದಾಗ ದುರ್ಗಾಂಬಿಕಾ ದೇವಿಯ ಮೊರೆ ಹೋಗಿ ಎಡೆ ಜಾತ್ರೆ ಮಾಡುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟ್ ಧರ್ಮದರ್ಶಿಗಳು ಒಟ್ಟಾಗಿ ಸೇರಿ ತೀರ್ಮಾನ ಕೈಗೊಂಡು ಎಡೆಜಾತ್ರೆ ನಡೆಸಲು ನಿರ್ಧರಿಸಿದ್ದರು.
ಬೆಳಗಿನ ಜಾವ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮೊಸರನ್ನ ನೈವೇದ್ಯ ಅರ್ಪಿಸಲಾಯಿತು. ದೇವಸ್ಥಾನದ ಧರ್ಮದರ್ಶಿಗಳು ತಾಯಿಗೆ ಪೂಜೆ ನೆರವೇರಿಸಿದರು.
ಭಕ್ತರು ಬೆಳಗ್ಗೆ 6 ಗಂಟೆಯಿಂದಲೇ ದೇವಸ್ಥಾನಕ್ಕೆ ಬರತೊಡಗಿದರು. ಬೇಳೆ, ಬೆಲ್ಲ, ಅಡುಗೆ ಎಣ್ಣೆ, ತೆಂಗಿನಕಾಯಿ, ಹಣ್ಣು ಮುಂತಾದ ಪದಾರ್ಥಗಳನ್ನು ತಂದು ದೇವಿಗೆ ಎಡೆ ಅರ್ಪಿಸಿದರು. ದರ್ಶನ ಪಡೆದ ನಂತರ ಭಕ್ತರಿಗೆ ದೇವಸ್ಥಾನದ ಎದುರಿನ ಪ್ರಸಾದ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಹಳೆಯ ಸಂಪ್ರದಾಯ

ಬರ ಬಂದಾಗ ಸಾರ್ವಜನಿಕರು ದೇವಿಯ ಕೃಪೆಗಾಗಿ ಎಡೆ ಅರ್ಪಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಬಂದಿದೆ. ಭಕ್ತರು ತಮ್ಮ ಶಕ್ತ್ಯಾನುಸಾರ ನೈವೇದ್ಯ ಸಲ್ಲಿಸುತ್ತಾರೆ. ವಿಶೇಷ ಪೂಜೆ ಮಾಡಲಾಗುತ್ತದೆ. ಬಿಸಿಲಿನ ಧಗೆ ಕಡಿಮೆಯಾಗಿ ಭೂಮಿ ತಂಪಾಗಲಿ ಎಂಬ ಕಾರಣಕ್ಕೆ ಮೊಸರನ್ನ ನೈವೇದ್ಯ ನೀಡಲಾಗುತ್ತದೆ ಎಂದು ದೇವಸ್ಥಾನದ ಪುರೋಹಿತರಾದ ನಾಗರಾಜ ಜೋಯಿಸ್ ಅವರು ತಿಳಿಸಿದರು.
ಉತ್ತಮ ಮಳೆಯಾಗಿ ಬೆಳೆಯೂ ಚೆನ್ನಾಗಿ ಬಂದರೆ ರೈತರು ಖುಷಿಯಿಂದ ಇರುತ್ತಾರೆ. ಅದರಿಂದ ಆರ್ಥಿಕತೆ ಸುಧಾರಣೆಯಾಗಿದೆ ದೇಶವೂ ಪ್ರಗತಿಯ ಕಡೆಗೆ ಸಾಗುತ್ತದೆ ಎಂದು ಎಡೆ ಜಾತ್ರೆಯ ಉದ್ದೇಶದ ಬಗ್ಗೆ ವಿವರಿಸಿದರು.
ಎಡೆ ಜಾತ್ರೆಗೆ ಬರುವ ಭಕ್ತರಿಗೆ ನೆರಳು ಒದಗಿಸಲು ದೇವಸ್ಥಾನದ ಬಳಿ ಶಾಮಯಾನ ವ್ಯವಸ್ಥೆ ಮಾಡಿದ್ದೇವೆ. ಬ್ಯಾರಿಕೇಡ್‌ಗಳನ್ನು ಹಾಕಿ ಭಕ್ತರು ದರ್ಶನಕ್ಕೆ ಬಂದು ಹೋಗಲು ಸುಗಮ ವ್ಯವಸ್ಥೆ ಮಾಡಲಾಗಿದೆ. ಬಾಳೆಕಂಬ, ತೆಂಗಿನ ಗರಿ ಕಟ್ಟಿ ಅಲಂಕಾರ ಮಾಡಲಾಗಿದೆ ಎಂದು ಅಲ್ಲಿನ ವ್ಯವಸ್ಥೆಯ ಬಗ್ಗೆ, ಬಾಬ್‌ದಾರರಾದ ಗುಡ್ಡಣ್ಣನವರ ಶಿವಶಂಕರಪ್ಪ ಮಾಹಿತಿ ನೀಡಿದರು.
ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಕಮಿಟಿಯವರೆಲ್ಲ ಸೇರಿ ಎಡೆಜಾತ್ರೆ ಮಾಡಲು ತೀರ್ಮಾನಿಸಿದೆವು. ಮಳೆಯಾಗದಿದ್ದರೆ ದನಕರುಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು. ಸಮೃದ್ಧ ಮಳೆ-ಬೆಳೆಯಾಗಲಿ, ಎಲ್ಲರೂ ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಲಾಯಿತು. ಮಳೆಯಾಗದಿದ್ದರೆ ಮುಂದಿನ ಹಂತದಲ್ಲಿ ದೇವಸ್ಥಾನದ ಬಳಿ ಸಂತೆ ನಡೆಸುವ ಪದ್ಧತಿ ಇದೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net