ಪ್ರಾಮಾಣಿಕ ಸೇವೆ ಮಾಡುವವರನ್ನು ಗೆಲ್ಲಿಸಿದರೆ ಪ್ರಜಾಪ್ರಭುತ್ವಕ್ಕೆ ಅರ್ಥ

ಚನ್ನಗಿರಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾಡಾಳು ಮಲ್ಲಿಕಾರ್ಜುನ, ಧನಂಜಯ ಕಡ್ಲೆಬಾಳು, ಮಂಗೇನಹಳ್ಳಿ ಪಿ. ಲೋಹಿತ್‌ಕುಮಾರ್, ಅಣ್ಣೇಶ್ ಐರಾಣಿ, ಶಶಿಕಲಾ ನಾಗರಾಜ್ ಇತರರಿದ್ದರು.democracy
ಚನ್ನಗಿರಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾಡಾಳು ಮಲ್ಲಿಕಾರ್ಜುನ, ಧನಂಜಯ ಕಡ್ಲೆಬಾಳು, ಮಂಗೇನಹಳ್ಳಿ ಪಿ. ಲೋಹಿತ್‌ಕುಮಾರ್, ಅಣ್ಣೇಶ್ ಐರಾಣಿ, ಶಶಿಕಲಾ ನಾಗರಾಜ್ ಇತರರಿದ್ದರು.democracy
Published on

ಪ್ರಮುಖ ಮುಖ್ಯಾಂಶಗಳು

  • ಮಾಡಾಳು ಮಲ್ಲಿಕಾರ್ಜುನ ಹೇಳಿಕೆ
  • ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ
ಚನ್ನಗಿರಿ: ನೇರ, ನಿಷ್ಠುರ ಹಾಗೂ ಪ್ರಾಮಾಣಿಕವಾಗಿ ಸೇವೆ ಮಾಡುವವರನ್ನು ಗುರುತಿಸಿ ಆಶೀರ್ವದಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ಅರ್ಥ ಬರಲಿದೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಅಹಿಂದ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಬದಲಿಗೆ ಸೋಮಾರಿಗಳನ್ನಾಗಿ ಮಾಡುತ್ತಿದೆ. ಗ್ಯಾರಂಟಿಗಳನ್ನು ನೀಡುವ ನೆಪದಲ್ಲಿ ಮಹಿಳೆಯರು ದುಡಿಮೆ ಹಾಗೂ ಕೂಲಿ ಕೆಲಸಕ್ಕೆ ಹೋಗದಂತೆ ಮಾಡಲಾಗಿದೆ. ಈ ಸರ್ಕಾರಕ್ಕೆ ಜನಪರ ಕಾಳಜಿ ಮತ್ತು ಬದ್ಧತೆಯೇ ಇಲ್ಲ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಮತದಾರರೇ ನಿಜವಾದ ಪ್ರಭುಗಳು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ನಾಯಕರನ್ನು ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಆಯ್ಕೆಯಾದ ನಾಯಕ ಕ್ಷೇತ್ರದ ಜನರ ನಿಜವಾದ ಸೇವಕನಾಗಬೇಕು. ಆಗ ಮಾತ್ರ ನೀವು ಹಾಕಿದ ಮತಕ್ಕೆ ಸೂಕ್ತ ಗೌರವ ಸಿಗುತ್ತದೆ ಎಂದರು.
ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ನಾಗರಾಜ್ ಮಾತನಾಡಿ, ಜಿಲ್ಲೆಯ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸಲಾಗುವುದು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ನಾವೆಲ್ಲ ಸಿದ್ಧರಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಮಂಗೇನಹಳ್ಳಿ ಪಿ. ಲೋಹಿತ್‌ಕುಮಾರ್, ಉಪಾಧ್ಯಕ್ಷ ಸಂತೇಬೆನ್ನೂರು ಬಸವರಾಜ್ ಹಾಗೂ ಕಾರ್ಯದರ್ಶಿ ಕಮಲಮ್ಮ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಬಿಜೆಪಿ ಮುಖಂಡರಾದ ಧನಂಜಯ ಕಡ್ಲೆಬಾಳು, ಅಣ್ಣೇಶ್ ಐರಾಣಿ, ಲಕ್ಷ್ಮಣ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರಾಕೇಶ್, ವಿಶ್ವಾಸ್, ಎಂ.ಯು. ಚನ್ನಬಸಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ನಾಗರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ, ಕಾಯಿ ಮಂಜುನಾಥ್, ಬಿ.ಪಿ. ನಾಯಕ್ ಇತರರಿದ್ದರು.

ಸಾಮಾಜಿಕ ನ್ಯಾಯ ಸಾಧ್ಯವಾಗಿಲ್ಲ

ಕೇವಲ ಸಮಸಮಾಜದ ಕಲ್ಪನೆ ಇದ್ದರೆ ಸಾಲದು, ಅದನ್ನು ಜಾರಿಗೆ ತರಲು ಎಲ್ಲ ಸಮುದಾಯಗಳನ್ನು ಪ್ರತಿನಿಧಿಸುವ ಮೋರ್ಚಾಗಳನ್ನು ರಚಿಸಿರುವುದು ಬಿಜೆಪಿ. ದೇಶಕ್ಕೆ ಸ್ವಾತಂತ್ರೃ ಬಂದು ದಶಕಗಳು ಕಳೆದರೂ ಕಾಂಗ್ರೆಸ್‌ನಿಂದ ಮತದಾರರಿಗೆ ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಎಸ್‌ಟಿ ಮೋರ್ಚಾ ನೂತನ ಅಧ್ಯಕ್ಷ ಮಂಗೇನಹಳ್ಳಿ ಪಿ. ಲೋಹಿತ್‌ಕುಮಾರ್ ಆರೋಪಿಸಿದರು.
ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಚನ್ನಗಿರಿ ಕ್ಷೇತ್ರದ ಶಾಸಕರು ಕುತಂತ್ರ ಮಾಡಿರುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಆದರೆ ಚನ್ನಗಿರಿ ತಾಲೂಕಿನಲ್ಲಿರುವ ಒಬ್ಬ ಅಹಿಂದ ನಾಯಕನೂ ಈ ಬಗ್ಗೆ ತುಟಿಬಿಚ್ಚದೆ ಇರುವುದು ವಿಪರ್ಯಾಸ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net