ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯಲು ಆಗ್ರಹ

ವಿಕಸಿತ ಭಾರತ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆ ಜಿಲ್ಲಾ ಘಟಕದಿಂದ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಎ.ಕೆ. ಗುಡ್ಡದಯ್ಯ, ವೀರಮ್ಮ, ನೇತ್ರಾವತಿ, ಬಲ್ಲೂರು ರವಿಕುಮಾರ್, ಅನೀಸ್‌ಪಾಷಾ,ಹೇಮಮ್ಮ, ಭುವನೇಶ್ವರಿ, ತಾರಾ ಇತರರಿದ್ದರು.  --
ವಿಕಸಿತ ಭಾರತ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆ ಜಿಲ್ಲಾ ಘಟಕದಿಂದ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಎ.ಕೆ. ಗುಡ್ಡದಯ್ಯ, ವೀರಮ್ಮ, ನೇತ್ರಾವತಿ, ಬಲ್ಲೂರು ರವಿಕುಮಾರ್, ಅನೀಸ್‌ಪಾಷಾ,ಹೇಮಮ್ಮ, ಭುವನೇಶ್ವರಿ, ತಾರಾ ಇತರರಿದ್ದರು. --
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆ ಪ್ರತಿಭಟನೆ
  • ಕೇಂದ್ರ ಬಜೆಟ್‌ನಲ್ಲಿ 2 ಲಕ್ಷ ಕೋಟಿ ರೂ. ತೆಗೆದಿಡಿ
  • ವಿಧಾನಸಭೆ ಉಪಸಭಾಧ್ಯಕ್ಷರಿಗೆ ಮನವಿ ಸಲ್ಲಿಕೆ
ದಾವಣಗೆರೆ: ದೇಶದ ಬಡ ಮಧ್ಯಮ ವರ್ಗದ ಜನರ ಉದ್ಯೋಗದ ಹಕ್ಕನ್ನು ಕಸಿಯುವ ವಿಕಸಿತ ಭಾರತ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕ ಸಂಘಟನೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ನಡೆಸಿದ ಕೂಲಿಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಅಲ್ಲಿನ ಸಭೆಯಲ್ಲಿ ಭಾಗಿಯಾಗಿದ್ದ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಮನರೇಗಾ ಯೋಜನೆ ಬಡವರು, ಮಧ್ಯಮ ವರ್ಗದವರಿಗೆ ಆಸರೆಯಾಗಿತ್ತು. ಇದನ್ನು ತೆಗೆದುಹಾಕಿ ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ಗದಾಪ್ರಹಾರ ಮಾಡಲಾಗುತ್ತಿದೆ. ಉದ್ಯೋಗ ಮಾಡುವ ಕೈಗಳನ್ನೇ ಕಟ್ಟಿ ಹಾಕಲಾಗಿದೆ. ಕೂಡಲೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ ತೀರ್ಮಾನಿಸಿದ ಹೊಸ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹೊಸ ಕಾಯ್ದೆಯ ಪರಿಶ್ಚೇದ 5(1)ರಲ್ಲಿ ತಿಳಿಸಿದಂತೆ ಕೇಂದ್ರ ಸರ್ಕಾರದಿಂದ ದೃಢೀಕರಿಸದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗದ ಹಕ್ಕು ಸಿಗದು. ಹೊಸ ಕಾಯ್ದೆಯಡಿ ಆಯ್ದ ಪ್ರದೇಶದ ಜನರಿಗೆ ಮಾತ್ರವೇ ಉದ್ಯೋಗ ಸಿಗಲಿದೆ. ನೀಡಿದ ಬಜೆಟ್ ಮೀರಿ ಹೆಚ್ಚಿನ ಖರ್ಚನ್ನು ರಾಜ್ಯ ಸರ್ಕಾರ ವ್ಯಯಿಸಿದ್ದರೆ ಆಯಾ ಸರ್ಕಾರವೇ ಅದನ್ನು ನಿಭಾಯಿಸಬೇಕು ಎಂಬುದು ಕೇಂದ್ರದ ಸರ್ವಾಧಿಕಾರದ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದುರುದ್ದೇಶದಿಂದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದು ಕಾಯ್ದೆ ಸ್ವರೂಪವನ್ನೇ ಬದಲಿಸಿದೆ. ಕೂಡಲೆ ಈ ನಿರ್ಧಾರ ಹಿಂಪಡೆದು ಮೊದಲಿನ ಹೆಸರಲ್ಲಿಯೇ ಮುಂದುವರಿಸಬೇಕು. 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 86 ಸಾವಿರ ಕೋಟಿ ರೂ.ಗಳನ್ನು ಮನರೇಗಾದಡಿ ನಿಗದಿಪಡಿಸಲಾಗಿತ್ತು. ಮುಂಬರುವ ಬಜೆಟ್‌ನಲ್ಲಿ 2 ಲಕ್ಷ ಕೋಟಿ ರೂ. ತೆಗೆದಿಡಬೇಕು.
ಪ್ರತಿ ವ್ಯಕ್ತಿಗೂ ಕನಿಷ್ಠ 100 ಮಾನವ ದಿನಗಳನ್ನು ನೀಡಬೇಕು. ಕನಿಷ್ಠ ಕೂಲಿ ಮೊತ್ತವನ್ನು 500ರಿಂದ 800 ರೂ.ಗೆ ಹೆಚ್ಚಿಸಬೇಕು. ಕೇಂದ್ರ-ರಾಜ್ಯ ಸರ್ಕಾರಗಳ ವೆಚ್ಚ 90: 10ರ ಅನುಪಾತದಲ್ಲಿರಬೇಕು. ಕಾಮಗಾರಿಗಳನ್ನು ಸ್ಥಳೀಯವಾಗಿ ಗ್ರಾಮಸಭೆ ನಿರ್ಣಯದಡಿ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷ ಎ.ಕೆ. ಗುಡ್ಡದಯ್ಯ, ವೀರಮ್ಮ, ನೇತ್ರಾವತಿ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಅನೀಸ್‌ಪಾಷಾ, ಹೇಮಮ್ಮ, ತಿಪ್ಪೇಸ್ವಾಮಿ, ಭುವನೇಶ್ವರಿ, ತಾರಾ, ನಾಗಮ್ಮ, ಭಾಗ್ಯಾ, ರೇಖಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net