ನೇಮಕಾತಿ ಅಧಿಸೂಚನೆ ಹಿಂಪಡೆಯಲು ಆಗ್ರಹ

ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಎ. ರವಿಕುಮಾರ್, ಎಂ. ಮಂಜುನಾಥ್, ಆರ್.ರೇಖಾ, ಕೆ.ಎಂ. ಅಶೋಕ್,  ಆರ್. ಸಲ್ಮಾಬಾನು ಇತರರಿದ್ದರು.
ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಎ. ರವಿಕುಮಾರ್, ಎಂ. ಮಂಜುನಾಥ್, ಆರ್.ರೇಖಾ, ಕೆ.ಎಂ. ಅಶೋಕ್, ಆರ್. ಸಲ್ಮಾಬಾನು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ರಕ್ಷಣಾ ಆಯೋಗದಡಿ ನಿಯಮ ಉಲ್ಲಂಘನೆ
  • ಉನ್ನತ ಅಧಿಕಾರಿಗಳ ವಜಾಗೊಳಿಸಲು ಒತ್ತಡ
  • ದಾವಣಗೆರೆ ಜಿಲ್ಲಾಧಿಕಾರಿಗೆ ಸಂಘಟನೆಗಳ ಮನವಿ
ದಾವಣಗೆರೆ: ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಈಗಾಗಲೆ ಹೊರಡಿಸಲಾದ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಫೆವಾರ್ಡ್-ಕೆ ಮತ್ತು ಒಂದುಗೂಡು ಫೌಂಡೇಷನ್ ಜಿಲ್ಲಾಧ್ಯಕ್ಷ ಎ. ರವಿಕುಮಾರ್ ಮಾತನಾಡಿ , ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ ಅಡಿಯಲ್ಲಿ ಸ್ಥಾಪಿತವಾದ ಈ ಆಯೋಗದ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳುವವರು ಮಕ್ಕಳ ಕಲ್ಯಾಣ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ವೃತ್ತಿಪರ ಹಾಗೂ ಅಸಾಧಾರಣ ಅನುಭವ ಹೊಂದಿರಬೇಕೆಂಬ ನಿಯಮವಿದೆ. ಆದರೆ, ಇತ್ತೀಚೆಗೆ ಹೊರಡಿಸಲಾದ ಅಧಿಸೂಚನೆಯಲ್ಲಿ ನೇಮಕಗೊಂಡವರು ನಿಗದಿತ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಯೋಗದ ಅಧ್ಯಕ್ಷರಾಗಿ ನೇಮಿತ ಕಲಬುರಗಿಯ ಸಂತೋಷ ಕುಮಾರ್ ಅವರು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರಾಗಿದ್ದಾರೆ. ಸದಸ್ಯರಾದವರು ಕೂಡ ನಿಯಮ ಉಲ್ಲಂಘನೆ ಮಾಡಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಜಾತಿ ರಾಜಕಾರಣದ ವಾಸನೆ ಇದೆ. ಮುಖ್ಯಮಂತ್ರಿ ಹಾಗೂ ಇಲಾಖೆ ಸಚಿವರು ಇಲ್ಲದ ಸಂದರ್ಭದಲ್ಲಿ ಈ ಅಧಿಸೂಚನೆ ಹೊರಡಿಸಿರುವುದು ಅನುಮಾನಕ್ಕೆಡೆ ಮಾಡಿದೆ.
ಪ್ರಸ್ತುತ ಹೊರಡಿಸಲಾದ ನೇಮಕಾತಿ ಅಧಿಸೂಚನೆ ತಕ್ಷಣವೇ ಹಿಂಪಡೆಯಬೇಕು.ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ನೈಜ ಅನುಭವ ಮತ್ತು ಅರ್ಹತೆ ಹೊಂದಿರುವ ಸಮರ್ಥ ವ್ಯಕ್ತಿಗಳನ್ನು ಕಾನೂನುಬದ್ಧವಾಗಿ ನೇಮಿಸಬೇಕು. ವಿವಾದಾತ್ಮಕ ಆಯ್ಕೆ ಪ್ರಕ್ರಿಯೆಯ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪಾತ್ರದ ತನಿಖೆ ಮುಗಿಯುವವರೆಗೆ ಅವರನ್ನು ಹುದ್ದೆಯಿಂದ ಸ್ಥಗಿತಗೊಳಿಸಬೇಕು. ಇಲಾಖೆಯ ಉನ್ನತ ಅಧಿಕಾರಿಗಳಾದ ಶಮ್ಲ್ಲಾ ಇಕ್ಬಾಲ್, ಮಹೇಶ್ ಬಾಬು ಹಾಗೂ ಬಿ. ಎಚ್.ನಿಶ್ಚಲ್ ಅವರನ್ನು ವಜಾಗೊಳಿಸಬೇಕು. ನಿಯಮಬಾಹಿರ ನೇಮಕಾತಿಗೆ ಕುಮ್ಮಕ್ಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ಮತ್ತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಎ.ರವಿಕುಮಾರ್, ಎಂ. ಮಂಜುನಾಥ್, ಆರ್.ರೇಖಾ, ಕೆ.ಎಂ. ಅಶೋಕ್, ಮೀನಾ, ಡಾ.ಡಿ.ಆಂಜಿನಪ್ಪ, ಆರ್. ಸಲ್ಮಾಬಾನು, ಗಂಗಮ್ಮ, ಎಸ್. ಪ್ರವೀಣ್‌ಕುಮಾರ್, ಬಿ. ಎಚ್. ಅಶೋಕ್, ರವಿ, ಕೃಷ್ಣಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net