ಅಕ್ರಮ ಪಂಪ್‌ಸೆಟ್ ಹಾವಳಿ ತಡೆಗೆ ಆಗ್ರಹ

 ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು, ಎ.ಎಂ.ಮಂಜುನಾಥ್, ಎ.ಬಿ. ಕರಿಬಸಪ್ಪ ಶಿರಮಗೊಂಡನಹಳ್ಳಿ, ಅಂತರವಳ್ಳಿ ಹಾಲೇಶಪ್ಪ, ಮೂರ್ತೆಪ್ಪ ಇದ್ದರು.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು, ಎ.ಎಂ.ಮಂಜುನಾಥ್, ಎ.ಬಿ. ಕರಿಬಸಪ್ಪ ಶಿರಮಗೊಂಡನಹಳ್ಳಿ, ಅಂತರವಳ್ಳಿ ಹಾಲೇಶಪ್ಪ, ಮೂರ್ತೆಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ನಿಲುಗಡೆ ಜತೆಗೆ ಕೇಸ್ ದಾಖಲಿಸಿ
  • ನೀರಾವರಿ ಅಧಿಕಾರಿಗಳು ನಾಲೆ ಮೇಲೆ ಸಂಚರಿಸಲಿ
  • ಭಾರತೀಯ ರೈತ ಒಕ್ಕೂಟದ ಒತ್ತಾಯ
ದಾವಣಗೆರೆ: ಜಿಲ್ಲೆಯ ಭದ್ರಾ ನಾಲಾ ವ್ಯಾಪ್ತಿಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಹೆಚ್ಚಿದೆ. ಜಿಲ್ಲಾಡಳಿತ, ನೀರಾವರಿ ಇಲಾಖೆ ಅಧಿಕಾರಿಗಳು ಇಂಥ ಪಂಪ್‌ಸೆಟ್‌ಗಳ ವಿದ್ಯುತ್ ನಿಲುಗಡೆ ಮಾಡುವ ಜತೆಗೆ ಪ್ರಕರಣ ದಾಖಲಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು ಆಗ್ರಹಿಸಿದರು.
ಜನವರಿ 10ರಿಂದ ಭದ್ರಾ ನಾಲೆಗೆ ನೀರು ಹರಿಸಲಾಗಿದ್ದು ವೇಳಾಪಟ್ಟಿಯಂತೆ ಮೇ 10ರವರೆಗೆ ಬೆಳೆಗಳಿಗೆ ನೀರು ಸಿಗಬೇಕಿದೆ. ಆದರೆ ಅಕ್ರಮ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಗಳಿಗೆ ನೀರು ತಲುಪದ ಸ್ಥಿತಿ ಇದೆ. ನೀರು ಸಿಗದಿದ್ದಲ್ಲಿ ಹೂವಾಡುವ ಹಂತದಲ್ಲಿರುವ ಬೆಳೆಗಳು ಕೂಡ ಬಾಡಿ ಹೋಗುವ ಆತಂಕವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೀರಾವರಿ ಇಲಾಖೆ ಅಧಿಕಾರಿಗಳು ಭದ್ರಾವತಿ, ದಾವಣಗೆರೆ, ತ್ಯಾವಣಗಿ ಹಾಗೂ ಮಲೇಬೆನ್ನೂರು ವಿಭಾಗಗಳಲ್ಲಿ ಕಾರ್ಯ ನಿರತರಾಗಿದ್ದಾರೆ. ಆದರೆ ಕೊಳವೆಬಾವಿ ಹೆಸರಲ್ಲಿ ಅಕ್ರಮ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆಯಲಾಗುತ್ತಿದೆ. ಇದನ್ನು ತಡೆಯಬೇಕು. ಪಂಪ್‌ಸೆಟ್‌ಗಳ ತೆರವಿನ ವಿಚಾರದಲ್ಲಿ ಜನಪ್ರತಿನಿಧಿಗಳು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 2.65 ಲಕ್ಷ ಎಕರೆ ಕೃಷಿ ಚಟುವಟಿಕೆಗೆ ನೀರಿನ ಅಗತ್ಯವಿದೆ. ಪ್ರತಿ ಸಾರಿ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಕೊನೆ ಭಾಗದ ರೈತರಿಗೆ ನೀರಿನ ಸಮಸ್ಯೆ ಕಾಡಲಿದೆ. ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಅವರು ಪೊಲೀಸರ ಬೆಂಗಾವಲಿನೊಂದಿಗೆ ನಾಲೆಗಳ ಮೇಲೆ ಸಂಚರಿಸಬೇಕು. ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಇನ್ನು 25 ದಿನದ ನೀರಿನ ನಿರೀಕ್ಷೆ ಇದೆ. ಈಗಲೇ ಅಕ್ರಮ ಪಂಪ್‌ಸೆಟ್‌ಗಳ ಬಗ್ಗೆ ನಿಗಾ ವಹಿಸಬೇಕು. ಇಲ್ಲವಾದಲ್ಲಿ 3ರಿಂದ 4 ಕಿಮೀ ವ್ಯಾಪ್ತಿಯಲ್ಲಿರುವ ಪಂಪ್‌ಸೆಟ್‌ಗಳ ಹಾವಳಿ 10 ಕಿ.ಮೀ.ವರೆಗೂ ಹಿಗ್ಗಬಹುದು. ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ವರದಿಯೊಂದಿಗೆ ಅಕ್ರಮವಾಗಿ ನೀರು ಪಡೆಯುವವರ ವಿರುದ್ಧ ಕೇಸ್ ದಾಖಲಿಸಬೇಕು ಎಂದರು.
ನಾಲೆಗೆ ಅಕ್ರಮ ಪಂಪ್‌ಸೆಟ್ ಅಳವಡಿಸದಂತೆ ಕೋರ್ಟ್ ತೀರ್ಪು ಇದೆ. ಆದರೂ ಅಕ್ರಮ ಪಂಪ್‌ಸೆಟ್‌ದಾರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಜಿಲ್ಲಾಧಿಕಾರಿಗೆ ಅನೇಕ ಬಾರಿ ಕಂಡು ಮನವಿ ಮಾಡಿದ್ದೇವೆ. ಅವರೂ ಕೂಡ ರೈತರ ವಿಚಾರದಲ್ಲಿ ಗಮನ ಹರಿಸಬೇಕು. ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎಂ.ಮಂಜುನಾಥ್, ಎ.ಬಿ. ಕರಿಬಸಪ್ಪ ಶಿರಮಗೊಂಡನಹಳ್ಳಿ, ಅಂತರವಳ್ಳಿ ಹಾಲೇಶಪ್ಪ, ಮೂರ್ತೆಪ್ಪ, ಗುಂಡಗಟ್ಟಿ ರಾಜಣ್ಣ, ಪ್ರಕಾಶ್ ಕೊಂಡಜ್ಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net