ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆ (ಮಹಾತ್ಮ ಗಾಂಧಿ ಶಾಲೆ) ಜಾಗ ಉಳಿಸಬೇಕು. ಇಲ್ಲಿ ನಡೆಯುತ್ತಿರುವ ಅನುದಾನ ದುರ್ಬಳಕೆ ತಡೆಯಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ಸಮಿತಿ ಹೆಸರಲ್ಲಿ ಜು.1ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಸಂಸ್ಥೆಯು ಮಾದಿಗ ಸಮಾಜದ ಆಸ್ತಿಯಾಗಿದೆ. ಐದು ಮನೆತನಗಳು ಮಾತ್ರವೇ ಆಡಳಿತ ಮಂಡಳಿ ರಚಿಸಿಕೊಂಡು ಗೂಂಡಾಗಿರಿ ಮೂಲಕ ಆಡಳಿತ ನಡೆಸುತ್ತಿವೆ. ಅವರಿಂದ ಈ ಸಂಸ್ಥೆಯನ್ನು ಮುಕ್ತಗೊಳಿಸಬೇಕು. ಶಾಲಾ ಜಾಗದ ದುರುಪಯೋಗ ಹಾಗೂ ಅಕ್ರಮ ಕಟ್ಟಡ ಕಾಮಗಾರಿ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾದಿಗ ಸಮಾಜದ ಮುಖಂಡ, ತಾಪಂ ಮಾಜಿ ಸದಸ್ಯ ಆಲೂರು ನಿಂಗರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾದಿಗ ಸಮಾಜದ ಬಡ ಹಾಗೂ ಗ್ರಾಮೀಣ ಮಕ್ಕಳ ಶಿಕ್ಷಣದ ಉದ್ದೇಶಕ್ಕೆ 1932ರಲ್ಲಿ ಸ್ಥಾಪಿತ ವಿದ್ಯಾಸಂಸ್ಥೆಯಲ್ಲಿ ಓದಿದವರು ಇಂದು ದೊಡ್ಡ ಅಧಿಕಾರಿಗಳಾರಿ ಸೇವೆ ಸಲ್ಲಿಸಿದ್ದಾರೆ. ಇದೀಗ ಸಂಸ್ಥೆಯ ವಿಶೇಷ ಆಹ್ವಾನಿತರಾಗಿದ್ದ ವೀರಭದ್ರಪ್ಪ, ಹನುಮಂತಪ್ಪ ಮೊದಲಾದವರು ಕಾರ್ಯದರ್ಶಿಗಳಾಗಿ ದಿಢೀರನೇ ನೇಮಕಗೊಂಡು ಆಡಳಿತವನ್ನೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದರು.
ಈ ಸಂಸ್ಥೆಯ ಹೆಸರಲ್ಲಿ ಸಂಸದರು, ಶಾಸಕರ ನಿಧಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅನುದಾನ ಪಡೆದು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪಾಲಿಕೆಯ ಲೈಸೆನ್ಸ್ ಹಾಗೂ ಕೆಇಬಿಯ ಎನ್‌ಒಸಿ ಪಡೆಯದೆ ಅಕ್ರಮವಾಗಿ ಮಳಿಗೆ ನಿರ್ಮಿಸಲಾಗುತ್ತಿದೆ. ಇದರ ಬಗ್ಗೆ ಹೋರಾಟ ಮಾಡಿದ ಚೇತನ್ ಎಂಬ ಯುವಕನಿಗೆ ಬೆದರಿಕೆ ಕರೆ ಬಂದಿವೆ, ಆತನ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲಾಗಿದೆ ಎಂದು ಕಿಡಿ ಕಾರಿದರು.
ಮಾದಿಗ ಸಮಾಜವೇ ಈಗ ಒಂದಾಗಿದ್ದು, ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿ ಬದಲಾವಣೆಯ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. ಜೂ. 27ರಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನೊಂದಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಪ್ರತ್ಯೇಕವಾಗಿ ಕಾನೂನು ಹೋರಾಟ ಕೂಡ ನಡೆಯಲಿದೆ ಎಂದು ಹೇಳಿದರು.
ಮುಖಂಡ ಎಂ. ಹಾಲೇಶ್ ಮಾತನಾಡಿ ಕಣ್ಮುಂದೆಯೇ ಕೋಟ್ಯಂತರ ರೂ.ಗಳ ಅಕ್ರಮ ನಡೆಯುತ್ತಿದೆ. ಇದು ಗೊತ್ತಿದ್ದೂ ನಗರಪಾಲಿಕೆ ಹಾಗೂ ಇತರೆ ಅಧಿಕಾರಿಗಳು ಕ್ರಮ ವಹಿಸದೆ ಇದರಲ್ಲಿ ಶಾಮೀಲಾಗಿದ್ದಾರೆ. ಅಂಥವರ ವಿರುದ್ಧವೂ ಕ್ರಮ ಆಗಬೇಕು ಎಂದು ಹೇಳಿದರು.
ತಮಗೆ ಬೇಕಾದವರಿಗೆ ಸಂಸ್ಥೆಯಲ್ಲಿ ಸದಸ್ಯತ್ವ ನೀಡಲಾಗಿದೆ. ಇಲ್ಲಿ ಗುರುತಿಸಿದ 5 ಸಾವಿರ ರೂ.ಗಳ ಸದಸ್ಯತ್ವ ಶುಲ್ಕವನ್ನು 500 ರೂ.ಗೆ ಇಳಿಸಿ ಸಮಾಜದವರಿಗೆ ಮುಕ್ತ ಸದಸ್ಯತ್ವ ನೀಡಬೇಕು. ಕೂಡಲೆ ಮಳಿಗೆ ಕಾಮಗಾರಿ ತಡೆಹಿಡಿಯಬೇಕು. ಸಂಸ್ಥೆಗೆ ತಾತ್ಕಾಲಿಕ ಆಡಳಿತಾಧಿಕಾರಿ ನೇಮಿಸಬೇಕು. ಡಿಸಿ ಮೇಲ್ವಿಚಾರಣೆಯಲ್ಲೇ ಪಾರದರ್ಶಕ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು.
ಮೊದಲೆಲ್ಲ 1680 ವಿದ್ಯಾರ್ಥಿಗಳ ದಾಖಲಾತಿ ಇರುತ್ತಿದ್ದ ಈ ಸಂಸ್ಥೆಯಲ್ಲಿ ಇಂದು ಕೇವಲ 65 ಮಕ್ಕಳಿದ್ದಾರೆ. ಆದರೂ ಸ್ಕಾಲರ್‌ಶಿಪ್‌ಗೆ ಅನೇಕ ಮಕ್ಕಳಿಂದ ಅರ್ಜಿ ಹಾಕಿಸಲಾಗುತ್ತಿದೆ. ಮಾದಿಗ ಸಮಾಜಕ್ಕೆ ಕೆಟ್ಟ ಹೆಸರು ತರುವ ಐದು ಮನೆತನದವರಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಮರ್ಥ್ ಅವರು ಬುದ್ದಿಮಾತು ಹೇಳುತ್ತಿಲ್ಲ. ಮಾಜಿ ಸಚಿವ ಎಚ್. ಆಂಜನೇಯ ಹಾಗೂ ಬಸವಂತಪ್ಪ ಅವರಾದರೂ ಸಮಸ್ಯೆಗೆ ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.