

ಹರಿಹರ: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಹೆಚ್ಚುವರಿ ಒಂದು ಟಿಎಂಸಿ ನೀರು ಬಿಡುಗಡೆ ಮಾಡಬಾರದು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಪುಷ್ಪಾವತಿಗೆ ಮನವಿ ಸಲ್ಲಿಸಿದರು.
ಭದ್ರಾ ಮೇಲ್ದಂಡೆಗೆ 1 ಟಿಎಂಸಿ ನೀರು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಹಂಗಾಮಿಗೆ ನೀರು ಕೊಡಲು ನೀರಾವರಿ ಸಲಹಾ ಸಮಿತಿ ಸಭೆ ಕರೆದು ವೇಳಾಪಟ್ಟಿ ಪ್ರಕಟಿಸಬೇಕೆಂದು ಸಂಘದ ಅಧ್ಯಕ್ಷ ಜಿ. ಪ್ರಭುಗೌಡ ಆಗ್ರಹಿಸಿದರು.
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಬ್ಯಾಂಕ್ಗಳಲ್ಲಿ ಇತರೆ ಸಾಲಗಳಿಗೆ ಕಡಿತ ಮಾಡಿಕೊಳ್ಳುತ್ತಿದ್ದು. ಸರ್ಕಾರ ಕಡಿತ ಮಾಡಿಕೊಳ್ಳದಂತೆ ಬ್ಯಾಂಕ್ಗಳಿಗೆ ಎಚ್ಚರಿಕೆ ನೀಡಬೇಕು. ಕರ್ನಾಟಕದಲ್ಲಿ ಸುಮಾರು 90 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲ. ಇದನ್ನು ಕೂಡಲೇ ಬಿಡುಗಡೆ ಮಾಡಿಸಬೇಕು. ರೈತರು ಸಾಲ ರಿನಿವಲ್ ಮಾಡುವಂತೆ ಬ್ಯಾಂಕ್ ಮತ್ತು ಸೊಸೈಟಿ ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ. ರೈತರು ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಕಾರಣ ಸಂಬಂದಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು.
ಬರಗಾಲದಿಂದಾಗಿ ರೈತರು ಸಾಲದ ಮರು ಪಾವತಿಸಲಾಗದೇ, ಆತ್ಮಹತ್ಯೆ ಪ್ರಕರಣ ನಡೆದಿರುವುದರಿಂದ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ರೈತರಿಗೆ ಒತ್ತಡ ಹಾಕದಂತೆ ಸೂಚಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕದ ದಲ್ಲಾಲರು ಹೊರ ರಾಜ್ಯದಿಂದ ಭತ್ತ ಖರೀದಿ ಮಾಡುತ್ತಿರುವುದರಿಂದ ರಾಜ್ಯದ ರೈತರ ಭತ್ತ ಖರೀದಿ ಕಡಿಮೆಯಾಗಿದೆ. ಸರ್ಕಾರ ಹೊರ ರಾಜ್ಯಗಳಿಂದ ಭತ್ತ ಖರೀದಿಗೆ ನಿಷೇದ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ರೈತರು ಬೆಳೆದ ಭತ್ತವನ್ನು ಕಡಿಮೆ ದರಕ್ಕೆ ಖರೀದಿ ಮಾಡಿ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರುವ ಪರಿಪಾಠ ಹೆಚ್ಚುತ್ತಿದೆ ಎಂದು ಆರೋಪಿಸಿದರು. ಗೊಬ್ಬರದ ಅಂಗಡಿ ಮಾಲೀಕರು ಹೆಚ್ಚುವರಿ ಮೊತ್ತಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಅಧಿಕಾರಿಗಳು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗರಡಿಮನೆ ಬಸಪ್ಪ, ನಿಂಗೋಜಿರಾವ್, ಎಸ್. ಮಾರುತಿರಾವ್, ಎಸ್. ಬಸವರಾಜ್, ಹನುಮಂತಪ್ಪ, ಗಡಿಗೆ ಆನಂದಪ್ಪ, ಆನಂದ್ರಾವ್, ಪರುಶುರಾಮ್, ಸುರೇಶ್, ಮಂಜುನಾಥ್ ಡಿ.ಬಿ. ಹಾಲವಾಣ ನಾಗರಾಜ್, ರಾಮಚಂದ್ರಪ್ಪ, ಲೋಕೇಶ್, ಶಿವರಾಜ್ ಕೊಕ್ಕನೂರು, ಕರಿಯಪ್ಪ, ಕೆ. ಮಂಜುನಾಥ್, ವೀರಭದ್ರಪ್ಪ, ನಾಗರಾಜ್, ಅಂಜಿನಪ್ಪ ಇದ್ದರು.