ಪ್ರತಿ ಹೋಬಳಿ ಹಂತದಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಬಿಜೆಪಿ ಸೋಮವಾರ ಆನಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿತು. ಸಿ. ಅನಿಲ್‌ಕುಮಾರ್ ನಾಯ್ಕ, ಎಂ. ಬಸವರಾಜ್ ನಾಯ್ಕ, ಬಿ.ಜಿ. ಸಚಿನ್, ಶಿವಪ್ರಕಾಶ್, ತ್ಯಾವಣಿಗೆ ಕೃಷ್ಣಕುಮಾರ್ ಇತರರಿದ್ದರು. protest
ಮಾಯಕೊಂಡ: ಮೆಕ್ಕೆಜೋಳ ಮತ್ತು ಭತ್ತಕ್ಕೆ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸುವ ಮೂಲಕ ಪ್ರತಿ ಹೋಬಳಿ ಹಂತದಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಸೋಮವಾರ ಆನಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಅನಿಲ್‌ಕುಮಾರ್ ನಾಯ್ಕ ಮಾತನಾಡಿ, ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಹೊನ್ನಾಳಿ- ನ್ಯಾಮತಿಯಲ್ಲಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದಕ್ಕೆ ಮಣಿದ ಸರ್ಕಾರ ಕೇವಲ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗಷ್ಟೇ ಒಪ್ಪಿಗೆ ನೀಡಿದೆ. ಆದರೆ ರಾಜ್ಯದಲ್ಲಿ ಈ ಬಾರಿ ಅಧಿಕ ಇಳುವರಿ ಬಂದಿದ್ದು, ಸುಮಾರು 60 ಲಕ್ಷ ಮೆಟ್ರಿಕ್ ಟನ್‌ನಷ್ಟು ಉತ್ಪಾದನೆ ಜಾಸ್ತಿ ಇದೆ. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಹಾಗಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಮಾಯಕೊಂಡ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಗ್ರಾಮೀಣ ಸಂಪರ್ಕ ರಸ್ತೆಗಳು ಹಾಳಾಗಿದ್ದು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುವ ಶಾಸಕರು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ತಿರುಗಾಡುತ್ತಾರೆ. ಶಿಕ್ಷಕರನ್ನು ಗಣತಿ ಸೇರಿ ಹಲವಾರು ಕಾರ್ಯಕ್ಕೆ ನೇಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಎರಡೂವರೆ ವರ್ಷಗಳಿಂದ ರೈತರು ತೀವ್ರ ಅತಿವೃಷ್ಟಿ- ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರಸಕ್ತ ವರ್ಷ ಉತ್ತಮ ಮೆಕ್ಕೆಜೋಳ ಮತ್ತು ಭತ್ತ ಬೆಳೆದಿದ್ದಾರೆ. ಆದರೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಪ್ರಾರಂಭಿಸಲು ಮೀನಮೇಷ ಎಣಿಸುತ್ತಿದೆ ಎಂದು ತಿಳಿಸಿದರು.
ಮಾಯಕೊಂಡ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ಜಿ. ಸಚಿನ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ತ್ಯಾವಣಿಗೆ ಕೃಷ್ಣಕುಮಾರ್, ಮಂಡಲ ಉಪಾಧ್ಯಕ್ಷ ಗಂಗಾಧರ್ ಮಾತನಾಡಿದರು.
ಮಾಯಕೊಂಡ ಮಂಡಲ ಪ್ರಧಾನ ಕಾರ್ಯದರ್ಶಿ ಕರಿಲಕ್ಕೇನಹಳ್ಳಿ ಓಂಕಾರಪ್ಪ, ಸಂಡೂರು ರಾಜಶೇಖರ್, ಮುಖಂಡರಾದ ಸೇವನಾಯ್ಕ ಗಂಗಾಧರ್, ವಸಂತ್ ಕುಮಾರ್, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ನೇರ್ಲಿಗೆ ಕರಿಯಪ್ಪ, ಸಿದ್ದನೂರು ಮಂಜುನಾಥ್ ಇತರರಿದ್ದರು.