ಜಿಗಳಿ ರಸ್ತೆ ಡಾಂಬರೀಕರಣ ನಿಧಾನಗತಿಯಲ್ಲಿದ್ದು ತುರ್ತಾಗಿ ಕೆಲಸ ಮಾಡುವಂತೆ ಆಗ್ರಹಿಸಿ ನಾಗರಿಕರು, ಶಾಲಾ ಮಕ್ಕಳು ಸೋಮವಾರ ಮಲೇಬೆನ್ನೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ನೌಫಲ್, ಚಿಟ್ಟಕ್ಕಿ ನಾಗರಾಜ್, ಒ.ಜಿ. ರುದ್ರಗೌಡ, ನಯಾಜ್, ನ್ಯಾಮತಿ ಚಂದ್ರಣ್ಣ ಕೊಪ್ಪದ ಗಿರೀಶ್ ಇತರರಿದ್ದರು.
ಮಲೇಬೆನ್ನೂರು: ಜಿಗಳಿ ರಸ್ತೆ ಡಾಂಬರೀಕರಣ ನಿಧಾನಗತಿಯಲ್ಲಿದ್ದು ತುರ್ತಾಗಿ ಕೆಲಸ ಮಾಡುವಂತೆ ಆಗ್ರಹಿಸಿ ನಾಗರಿಕರು, ಶಾಲಾ ಮಕ್ಕಳು ಸೋಮವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ರಸ್ತೆಯುದ್ದಕ್ಕೂ ಶಾಲಾ ಕಾಲೇಜು, ಕೈಗಾರಿಕೆ, ಅಂಗಡಿ, ಆಸ್ಪತ್ರೆಗಳಿದ್ದು ರಸ್ತೆ ಧೂಳುಮುಕ್ತ ಮಾಡುವಂತೆ ಘೋಷಣೆ ಕೂಗಿದರು.
ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರಿನ ಸಮಸ್ಯೆ ಎದುರಾಗುತ್ತಿದೆ. ಸಮಸ್ಯೆ ಬಗೆಹರಿಸಲು ಇಂಜಿನಿಯರ್‌ಗಳು ಸಾಮಾನ್ಯ ಸಭೆಗೆ ಬರುತ್ತಿಲ್ಲ. ಗುತ್ತಿಗೆದಾರರು ಕೂಡ ನಾಪತ್ತೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನವಾರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮಕ್ಕಳ ತಜ್ಞ ವೈದ್ಯ ಶ್ರೀನಿವಾಸ್ ಮಾತನಾಡಿ, ರಸ್ತೆ ಧೂಳಿನಿಂದ ಕೆಮ್ಮು, ಸೋಂಕು, ಜ್ವರಬಾಧೆ ಹೆಚ್ಚಾಗಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ಆಗಮಿಸಿ ನಾಗರಿಕರ ಸಮಸ್ಯೆ ಆಲಿಸಿದರು. ಮುಂದಿನವಾರ ರಸ್ತೆ ಕಾಮಗಾರಿ ಆರಂಭ ಮಾಡುವುದಾಗಿ ಗುತ್ತಿಗೆದಾರರು ಭರವಸೆ ನೀಡಿರುವುದಾಗಿ ತಿಳಿಸಿದ ನಂತರ ಧರಣಿ ನಿಲ್ಲಿಸಲಾಯಿತು.
ಯೆಸ್ ಇಂಡಿಯಾ ಶಾಲೆ ಶಿಕ್ಷಕ ನೌಫಲ್, ಲಯನ್ಸ್ ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ನಿರ್ದೇಶಕ ಒ.ಜಿ. ರುದ್ರಗೌಡ, ಪುರಸಭೆ ಸದಸ್ಯ ನಯಾಜ್, ಪುರಸಭೆ ವ್ಯವಸ್ಥಾಪಕಿ ಜಯಲಕ್ಷ್ಮೀ ಇತರರಿದ್ದರು.