ದಾವಣಗೆರೆಯಲ್ಲಿ ಬುಧವಾರ, ಪಿಂಚಣಿ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಿ.ಎಸ್.ಎನ್.ಎಲ್ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು. ಆರ್. ಆನಂದ, ಈರಣ್ಣ, ಕೆ.ಸಿ. ಚನ್ನಪ್ಪ, ಹನುಮಂತಪ್ಪ ಬಜಾರಿ, ಎಂ.ವಿ. ಸ್ವಾಮಿ, ಎಚ್.ಎಸ್. ನಾಗರಾಜ, ಜಯಪ್ಪ ನಾಯ್ಕ, ಶಿವಲಿಂಗಪ್ಪ, ಮಲ್ಲಿಕಾರ್ಜುನ ರೆಡ್ಡಿ, ಟಿ. ಷಣ್ಮುಖಪ್ಪ ಇದ್ದರು.
ದಾವಣಗೆರೆ :ಪಿಂಚಣಿ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಿ.ಎಸ್.ಎನ್.ಎಲ್ ನಿವೃತ್ತ ನೌಕರರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಬಿ.ಎಸ್.ಎನ್.ಎಲ್ ಜನರಲ್ ಮ್ಯಾನೇಜರ್ ಕಚೇರಿ ಬಳಿ ಧರಣಿ ನಡೆಸಿದ ನಿವೃತ್ತ ನೌಕರರು ಘೋಷಣೆ ಕೂಗಿ ತಮ್ಮ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.
ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ 2025ರ ಹಣಕಾಸು ಬಿಲ್‌ನಲ್ಲಿ ಕೇಂದ್ರ ಸರ್ಕಾರ ವ್ಯಾಲಿಡಿಟಿ ಕಾಯ್ದೆ-2025ನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ವಯ ಮುಂದಿನ ವೇತನ ಆಯೋಗದಲ್ಲಿ ಪಿಂಚಣಿ ಪರಿಷ್ಕರಣೆ ಮತ್ತು ಡಿ.ಎ.ಗಳನ್ನು ನಿಲ್ಲಿಸಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪಿಂಚಣಿ ನಿಲುಗಡೆ ಬಿ.ಎಸ್.ಎನ್.ಎಲ್/ಎಂಟಿಎನ್‌ಎಲ್ ಪಿಂಚಣಿದಾರರಿಗೆ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಪಿಂಚಣಿದಾರರಿಗೆ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಪಿಂಚಣಿದಾರರಿಗೂ ಮಾರಕವಾಗಿದೆ ಎಂದು ತಿಳಿಸಿದರು.
ಇದರ ವಿರುದ್ಧ ಕೇಂದ್ರ ಸರ್ಕಾರಿ ನಿವೃತ್ತ ನೌಕರರ, ಪಿಂಚಣಿದಾರರ ಒಕ್ಕೂಟ ಹೋರಾಟ ಮಾಡುತ್ತಿದೆ. ಕಾನೂನು ಹೋರಾಟವನ್ನೂ ನಡೆಸಿದೆ.
ಪಿಂಚಣಿ ಪರಿಷ್ಕರಣೆ ವ್ಯಾಲಿಡಿಟಿ ಕಾಯ್ದೆಯನ್ನು ರದ್ದುಪಡಿಸದಿದ್ದರೆ ಮುಂದಿನ ದಿನಗಳಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ, ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಸೇರಿ ಕೇಂದ್ರ ಸರ್ಕಾರದ ಎಲ್ಲ ನಿವೃತ್ತ ನೌಕರ, ಪಿಂಚಣಿದಾರರು ಅನಿರ್ದಿಷ್ಟಾವಧಿಗೆ ಧರಣಿ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಆರ್. ಆನಂದ, ಈರಣ್ಣ, ಕೆ.ಸಿ. ಚನ್ನಪ್ಪ, ಹನುಮಂತಪ್ಪ ಬಜಾರಿ, ಎಂ.ವಿ. ಸ್ವಾಮಿ, ಎಚ್.ಎಸ್. ನಾಗರಾಜ, ಜಯಪ್ಪ ನಾಯ್ಕ, ಶಿವಲಿಂಗಪ್ಪ, ಮಲ್ಲಿಕಾರ್ಜುನ ರೆಡ್ಡಿ, ಟಿ. ಷಣ್ಮುಖಪ್ಪ ಇದ್ದರು.