ಬಸವಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗೊಬ್ಬರವನ್ನು ಮುಂಗಡವಾಗಿ ಕಾಯ್ದಿರಿಸಿ ಖರೀದಿಸುತ್ತಿದ್ದಾರೆ. 15-20 ಕೆಜಿ ಚೀಲ ಗೊಬ್ಬರಕ್ಕೆ 120-130ರೂ. ಇದೆ. ಬೆಲೆ ಹೆಚ್ಚಾದರೂ ಗುಣಮಟ್ಟ, ಜಮೀನುಗಳಲ್ಲಿ ಉತ್ತಮ ಫಲಿತಾಂಶ ಬಂದಿರುವುದು ರೈತರ ವಿಶ್ವಾಸಕ್ಕೆ ಕಾರಣ. ಕುರಿ ಗೊಬ್ಬರದಲ್ಲಿ ನೈಸರ್ಗಿಕ ಪೋಷಕಾಂಶಗಳಿದ್ದು, ಅಡಿಕೆ ಗಿಡಗಳ ಬೆಳವಣಿಗೆಗೆ ಸಹಕಾರಿ ಎಂಬುದು ರೈತರ ಅಭಿಪ್ರಾಯ. ಒಂದು ಬಾರಿ ಅಡಿಕೆ ಗಿಡಗಳಿಗೆ ಕುರಿ ಗೊಬ್ಬರ ಹಾಕಿದರೆ ಸುಮಾರು 2 ವರ್ಷಗಳವರೆಗೆ ಹೆಚ್ಚುವರಿ ಗೊಬ್ಬರದ ಅವಶ್ಯಕತೆ ಇಲ್ಲ ಎನ್ನಲಾಗುತ್ತದೆ. ಇದರಿಂದ ಅಡಿಕೆ ಗಿಡಗಳು ದಷ್ಟಪುಷ್ಟವಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತವೆ. ಈಗ ಮಳೆಗಾಲ ಆರಂಭವಾಗಿದ್ದು ರೈತರು ನೈಸರ್ಗಿಕ ಗೊಬ್ಬರದ ಮೊರೆ ಹೋಗುತ್ತಿದ್ದಾರೆ.