ಬೀದಿ ದೀಪ ಮತ್ತು ಸಿಸಿ ಕ್ಯಾಮರಾ ಅಳವಡಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಮಂಗಳವಾರ ಪಿಎಸ್‌ಐ ಶ್ರೀಪತಿ ಗಿನ್ನಿಯವರಿಗೆ ಮನವಿ ಸಲ್ಲಿಸಿತು. ಎಸ್. ಗೋವಿಂದ, ಎಂ.ಆರ್.ಆನಂದ್, ಸಿ.ಎಚ್.ಸುನಿಲ್ ಕುಮಾರ್ ಇದ್ದರು.Appeal
Published on:
Copied
Follow Us
ಹರಿಹರ:ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪ ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಮಂಗಳವಾರ ನಗರಸಭೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿತು.
ಈ ವೇಳೆ ಸಂಘಟನೆಯ ತಾಲೂಕಾಧ್ಯಕ್ಷ ಎಸ್. ಗೋವಿಂದ, ಮುಖಂಡರು ಮಾತನಾಡಿ, ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳು ಇಲ್ಲದ್ದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ ಎಂದರು.
ತುಂಗಭದ್ರಾ ಸೇತುವೆಯ ಮೇಲೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀದಿ ದೀಪಗಳ ವ್ಯವಸ್ಥೆ ಮಾಡಿದ್ದರೂ, ಮಂತ್ರಿಗಳು ಆಗಮಿಸುತ್ತಿರುವ ಸಮಯದಲ್ಲಿ ಮಾತ್ರ ಅವು ಬೆಳಗುತ್ತವೆ. ರಾತ್ರಿ ವೇಳೆ ಆತಂಕದಲ್ಲಿ ಸೇತುವೆ ದಾಟಬೇಕಿದೆ ಎಂದು ದೂರಿದರು.
ಇದೇ ರೀತಿ, ನಗರದಲ್ಲಿ ಬೈಕ್‌ಗಳ ಕಳ್ಳತನ ಪ್ರಕರಣಗಳು ತುಂಬ ಹೆಚ್ಚಾಗುತ್ತಿವೆ. ಸಿಸಿ ಕ್ಯಾಮೆರಾ ಇಲ್ಲದೆ ಇರುವ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಬೇಗ ಕಳ್ಳರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ದಾವಣಗೆರೆ ರಸ್ತೆಯ ರೈಲ್ವೆ ಪ್ಲೈಓವರ್, ಅಕ್ಕಪಕ್ಕದ ಸರ್ವೀಸ್ ರಸ್ತೆಗಳು, ತುಂಗಭದ್ರಾ ಸೇತುವೆಯ ಮೇಲೆ, ಇಂಡಸ್ಟ್ರಿಯಲ್ ಏರಿಯಾದಿಂದ ಸೆಂಟ್ ಮೇರಿಸ್ ಶಾಲೆವರೆಗೆ, ಎಪಿಎಂಸಿಯಿಂದ ಬೈಪಾಸ್‌ಗೆ ಹೋಗುವ ರಸ್ತೆ, ಹರಪನಹಳ್ಳಿ ವೃತ್ತದಿಂದ ನಾಲ್ಕು ದಿಕ್ಕುಗಳಲ್ಲಿ ಬೀದಿ ದೀಪಗಳನ್ನು ಮತ್ತು ಆಯಕಟ್ಟಿನ ಜಾಗದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ನಗರಸಭೆ ಎಇಇ ವಿನಯ್ ಮತ್ತು ಹರಿಹರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಪತಿ ಗಿನ್ನಿ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಜಯ ಕರ್ನಾಟಕ ಸಂಘಟನೆಯ ನಗರಾಧ್ಯಕ್ಷ ಎಂ.ಆರ್. ಆನಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಸುನಿಲ್ ಕುಮಾರ್, ವಿಜಯ್ ಅರುಣ್, ಜೀವನ್, ಸುನಿಲ್ ಬಿಲ್ಲ, ಅನಿಲ್, ದುರ್ಗಪ್ಪ, ಶಮಿವುಲ್ಲಾ, ಕರಿಬಸ್ಯಾ ಮತ್ತಿತರರಿದ್ದರು.