ನಿರಾಶ್ರಿತರಿಗೆ ನೀಡಿದ ಜಾಗ ರದ್ದತಿಗೆ ಆಗ್ರಹ

ಎಸ್‌ಒಜಿ ಕಾಲನಿ ಎ ಬ್ಲಾಕ್‌ನ ಮುಖ್ಯರಸ್ತೆಯಲ್ಲಿ, ನಿರಾಶ್ರಿತರಿಗೆ ನೀಡಿದ ನಿವೇಶನ ಹಂಚಿಕೆ ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ದಾವಣಗೆರೆ ನಗರಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಎಸ್‌ಒಜಿ ಕಾಲನಿ ನಿವಾಸಿಗಳು.
ಎಸ್‌ಒಜಿ ಕಾಲನಿ ಎ ಬ್ಲಾಕ್‌ನ ಮುಖ್ಯರಸ್ತೆಯಲ್ಲಿ, ನಿರಾಶ್ರಿತರಿಗೆ ನೀಡಿದ ನಿವೇಶನ ಹಂಚಿಕೆ ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ದಾವಣಗೆರೆ ನಗರಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಎಸ್‌ಒಜಿ ಕಾಲನಿ ನಿವಾಸಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆಗೆ ಎಸ್‌ಒಜಿ ಕಾಲನಿ ನಿವಾಸಿಗಳ ಮುತ್ತಿಗೆ
  • 5 ವರ್ಷದ ನೀರಿನ ಕರ ಭರಿಸಲು ಅನುಮತಿಸಿ
  • ಬಾಡಿಗೆದಾರ ಜನರಿಗೂ ಸೂರು ಕಲ್ಪಿಸಲು ಒತ್ತಡ
ದಾವಣಗೆರೆ: ಎಸ್‌ಒಜಿ ಕಾಲನಿ ಎ ಬ್ಲಾಕ್‌ನ ಮುಖ್ಯರಸ್ತೆಯಲ್ಲಿ, ರವೀಂದ್ರನಾಥ್ ಬಡಾವಣೆಯ ನಿರಾಶ್ರಿತರಿಗೆ ನೀಡಿದ ನಿವೇಶನ ಹಂಚಿಕೆ ರದ್ದುಗೊಳಿಸುವಂತೆ ಆಗ್ರಹಿಸಿ ಎಸ್‌ಒಜಿ ಕಾಲನಿ ನಿವಾಸಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಎಸ್‌ಒಜಿ ಕಾಲನಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಯದೇವ ವೃತ್ತದ ಮೂಲಕ ನಗರಪಾಲಿಕೆಗೆ ಮುತ್ತಿಗೆ ಹಾಕಿದ ನಿವಾಸಿಗಳು ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ರವೀಂದ್ರನಾಥ್ ಬಡಾವಣೆಯ ಪಾರ್ಕ್ ಜಾಗದಲ್ಲಿ ವಾಸವಿದ್ದ ನಿರಾಶ್ರಿತರನ್ನು ತೆರವುಗೊಳಿಸಿದ್ದ ದಾವಣಗೆರೆ ತಹಸೀಲ್ದಾರ್, ಪಾಲಿಕೆ ಆಯುಕ್ತರು ಎಸ್‌ಒಜಿ ಕಾಲನಿಯಲ್ಲಿ ತಲಾ 15-40 ಅಡಿ ವಿಸ್ತೀರ್ಣದ ಜಾಗ ಕಲ್ಪಿಸಿದ್ದಾರೆ.
ಕಾಲನಿಯ ಮೊದಲನೇ ಮುಖ್ಯರಸ್ತೆಯಲ್ಲಿ 40 ಅಡಿ ರಸ್ತೆಯನ್ನು 25 ಅಡಿಗೆ ಸೀಮಿತಗೊಳಿಸಿ ಉಳಿದ ರಸ್ತೆ ಜಾಗವನ್ನು ನಿರಾಶ್ರಿತರಿಗೆ ನೀಡಲಾಗಿದೆ. ರಸ್ತೆ ಮಾರ್ಗದಲ್ಲೇ ಅಡುಗೆ ಅನಿಲದ ಸಂಪರ್ಕ ಮಾರ್ಗ, ವಿದ್ಯುತ್ ಲೈನ್, ಕುಡಿವ ನೀರಿನ ಪೈಪ್‌ಲೈನ್, ಯುಜಿಡಿ ಲೈನ್ ಇದೆ. ಇದನ್ನು ಪರಿಗಣಿಸದೆ ನಿವೇಶನ ಕಲ್ಪಿಸಲಾಗಿದೆ.
25 ವರ್ಷದ ಹಿಂದಿನ ಜಿಲ್ಲಾಧಿಕಾರಿ ಕೆ. ಶಿವರಾಂ ಅವಧಿಯಲ್ಲಿ ಈ ಕಾಲನಿಯ ಲೇಔಟ್ ಪ್ಲಾೃನ್ ತಯಾರಿಸಲಾಗಿ, ಎ, ಬಿ. ಸಿ ಬ್ಲಾಕ್‌ನ ಮುಖ್ಯರಸ್ತೆಗಳು 40 ಅಡಿ ರಸ್ತೆಗಳೇ ಆಗಿವೆ. ಎ ಬ್ಲಾಕ್ ಮುಖ್ಯರಸ್ತೆ ಮಾರ್ಗದಲ್ಲಿ ಚಕ್ರಶಾಲಿ ಬಡಾವಣೆ ಕೂಡ ಇರುತ್ತದೆ. ದೂಡಾದಿಂದ 40 ಅಡಿ ರಸ್ತೆ ಮಂಜೂರು ಮಾಡಿದ್ದರು.
ಅಲ್ಲದೆ 40 ಅಡಿ ರಸ್ತೆ ಉಳಿಸಿಕೊಡುವಂತೆ ಕಾಲನಿ ನಿವಾಸಿಗಳಾದ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಇದರ ನಡುವೆಯೂ ಈಗ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡಿದ್ದು ಸರಿಯಲ್ಲ ಎಂದು ದೂರಿದರು.
ಹಿಂದಿದ್ದ ಶಾಸಕ ಶಿವಶಂಕರಪ್ಪ, ಜಿಲ್ಲಾಧಿಕಾರಿ ಅಂಜನ್‌ಕುಮಾರ್ ಅವರು ಇಲ್ಲಿನವರು ಬಡವರು. ನೀರಿನ ಕಂದಾಯ ಕಟ್ಟಬೇಡಿ. ಮುಂದೆ ನಾವೇ ಹೇಳುತ್ತೇವೆ ಎಂದಿದ್ದರು. ಈಗಿನ ಆಯುಕ್ತರು ಎಸ್‌ಒಜಿ ಕಾಲನಿ ನಿವಾಸಿಗಳು 25 ವರ್ಷದ ನೀರಿನ ಕಂದಾಯ ಕಟ್ಟುವಂತೆ ಪಾಲಿಕೆ ವತಿಯಿಂದ ಪ್ರತಿ ಮನೆಗೆ ನೋಟಿಸ್ ಕಳುಹಿಸಿದ್ದಾರೆ. 5 ವರ್ಷಾವಧಿಗೆ ಮಾತ್ರವೇ ನೀರಿನ ಕಂದಾಯ ಕಟ್ಟಲು ಅನುವು ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ಕಾಲನಿಯಲ್ಲೂ ಬಡವರಿದ್ದಾರೆ. 300 ಆಶ್ರಯ ಮನೆಗಳಲ್ಲಿ ಬಾಡಿಗೆದಾರರಿದ್ದಾರೆ. ಅವರಿಗೂ ಪಾಲಿಕೆ ವತಿಯಿಂದ ನಿವೇಶನ/ ಮನೆ ಕಲ್ಪಿಸಬೇಕು. ನಿರಾಶ್ರಿತರಿಗೆ ನೀಡಿದ ನಿವೇಶನ ಹಂಚಿಕೆ ಕೈಬಿಡಬೇಕು. ಅವರಿಗೆ ಸರ್ಕಾರ ನಗರದಲ್ಲಿ ಖರೀದಿಸಿದ ಜಾಗದಲ್ಲಿ ಮನೆ ಕಟ್ಟಿಸಿಕೊಡಲಿ ಎಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆಯುಕ್ತೆ ರೇಣುಕಾ, ರವೀಂದ್ರನಾಥ್ ಬಡಾವಣೆಯಿಂದ ತೆರವುಗೊಂಡಿದ್ದ ನಿರಾಶ್ರಿತರಿಗೆ ತುರ್ಚಘಟ್ಟದ ನಿರಾಶ್ರಿತರ ಕೇಂದ್ರದಲ್ಲಿ 2.5 ತಿಂಗಳ ಕಾಲ ಊಟ-ವಸತಿ ಕಲ್ಪಿಸಲಾಗಿತ್ತು. ಜಿಲ್ಲಾ ಸಚಿವರ ಸೂಚನೆಯಂತೆ ಎಸ್‌ಒಜಿ ಕಾಲನಿಯಲ್ಲಿ ಜಾಗ ನೀಡಿದ್ದೇವೆ ಎಂದರು.
ದೂಡಾ ನಕಾಶೆಯಲ್ಲಿ 25 ಅಡಿ ಮಾತ್ರವೇ ರಸ್ತೆ ಇದೆ. ಆದಾಗ್ಯೂ ನಿರಾಶ್ರಿತರಿಗೆ ನೀಡಿದ ಜಾಗದಲ್ಲಿ ಇನ್ನೂ 5 ಅಡಿ ಸೇರಿಸಿ 30 ಅಡಿ ಹೊರತಾಗಿಸಿ ಜಾಗ ಕಲ್ಪಿಸಿದ್ದೇವೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕಾಲನಿ ನಿವಾಸಿಗಳು ಕುಡಿವ ನೀರಿನ ಕಂದಾಯವನ್ನು ಭರಿಸಲು ಮನೆಯ ಮಾಲೀಕರಿಗೆ ತಿಳಿಸಬೇಕು ಎಂದರು.
ಎಸ್‌ಒಜಿ ಕಾಲನಿಯಲ್ಲಿ ಮನೆ ಇಲ್ಲದವರ ಪಟ್ಟಿ ನೀಡಿದರೆ ಪರಿಶೀಲನೆ ನಡೆಸಲಾಗುವುದು. ಕೆಲವರು ಸ್ವಂತ ಮನೆಗಳನ್ನು ಬಾಡಿಗೆ ನೀಡಿ ನಿರಾಶ್ರಿತರು ಎಂದು ಹೇಳುತ್ತಿದ್ದಾರೆ. ಅಂಥವರ ಬಗ್ಗೆ ನಿಗಾವಹಿಸಿ ಆಶ್ರಯ ಸಮಿತಿ ಸಭೆಯಲ್ಲಿ ಮಂಡಿಸಿ ನಿರ್ಣಯಹಿಸಲಾಗುವುದು. ಜನರ ಪಟ್ಟಿ ನೀಡಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ, ಮುಖಂಡರಾದ ಎಲ್. ಜಯಪ್ಪ, ಎನ್. ಮಹಾಂತೇಶ್, ಮಂಜುನಾಥ್, ಕೆ.ಜಿ. ಪ್ರಕಾಶ್, ಕವಿತಮ್ಮ, ಸಿದ್ದಮ್ಮ, ಲಕ್ಷ್ಮಮ್ಮ, ಕೋಮಲಮ್ಮ ಹಾಗೂ ನಿವಾಸಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net