ದಾವಣಗೆರೆ: ತ್ಯಾಗ ಹಾಗೂ ಸಮರ್ಪಣಾ ಭಾವ ಉಳಿಸಿಕೊಂಡಲ್ಲಿ ಸಹಕಾರ ಸಂಘಗಳು ಭವಿಷ್ಯದಲ್ಲಿ ದೊಡ್ಡ ಶಕ್ತಿ ಕೇಂದ್ರ ಆಗಲಿವೆ ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಇಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ, ದಾವಣಗೆರೆ ಎಸ್ಸಿ-ಎಸ್ಟಿ ವಕೀಲರ ಸಹಕಾರ ಸಂಘಕ್ಕೆ ಚಾಲನೆ ನೀಡಿ
ಮಾತನಾಡಿದರು.
ಸಹಕಾರ ತತ್ವವು ನಮಗೆ ಬದುಕುವ ಕೌಶಲ ಹಾಗೂ ನಮ್ಮನ್ನು ಪರ್ಯಾಯವಾಗಿ ಬಲಗೊಳಿಸಿಕೊಳ್ಳಲು ಉತ್ತಮ ಸಾಮಾಜಿಕ ಆರ್ಥಿಕ ಶಿಕ್ಷಣ ರೂಪಿಸುವ ಮಾರ್ಗವಾಗಿದೆ. ಇದು ಸರ್ಕಾರ ಅಥವಾ ಸಹಕಾರ ಸಂಘಗಳಿಂದ ಕಾರ್ಯಸಾಧುವಾಗಲಿದೆ ಎಂದ ಅವರು, ಸಮಾಜದಲ್ಲಿ ಧ್ವನಿ ಇಲ್ಲದವರು, ಆರ್ಥಿಕವಾಗಿ ಹಿಂದುಳಿದವರನ್ನು ಜೀವನದ ಮುಖ್ಯವಾಹಿನಿಗೆ ತರುವುದೇ ಸಹಕಾರ ಸಂಘಗಳ ಕಾಯ್ದೆಯ ಮೂಲ ಉದ್ದೇಶವಾಗಿದೆ ಎಂದರು.
ಬೆರಳೆಣಿಕೆಯ ಸದಸ್ಯರಿಂದ ಸಣ್ಣ ಹಂತದಲ್ಲಿ ಆರಂಭವಾದ ಆರ್ಥಿಕ ಚಟುವಟಿಕೆಗಳು ಇಂದು ಅಂತಾರಾಷ್ಟ್ರ ಮಟ್ಟದಲ್ಲಿ ಬಿಲಿಯನ್‌ಗಟ್ಟಲೇ ವಹಿವಾಟು ನಡೆಸುವ ಮಟ್ಟಿಗೆ ದೊಡ್ಡ ಬ್ಯಾಂಕ್‌ಗಳಾಗಿ ಪರಿವರ್ತನೆಯಾಗಿವೆ. ಬ್ಯಾಂಕಿಂಗ್ ವ್ಯವಸ್ಥೆ ಇಂದು ಸಮಗ್ರ ಸಮಾಜದ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದೆ. ಸಹಕಾರ ಸಂಘಗಳು ಹಣಕಾಸು ವಹಿವಾಟಿಗೆ ಸೀಮಿತವಾಗಿರದೆ ಸಮಾಜದ ಶೋಷಿತ ಮತ್ತು ದುರ್ಬಲ ವರ್ಗದವರಿಗೆ ಧ್ವನಿಯಾಗಿವೆ ಎಂದು ಹೇಳಿದರು.
ಸಹಕಾರ ಸಂಘದಿಂದ ವ್ಯಕ್ತಿಯೊಬ್ಬರು ಮನೆ ಕಟ್ಟಲು ಪಡೆದ ಸಾಲವನ್ನು ತೀರುವಳಿ ಮಾಡಿ, ಕೊನೆಯ ಕಂತು ಮುಗಿದ ದಿನದಂದು ಸಿಹಿಯೊಂದಿಗೆ ಬ್ಯಾಂಕಿಗೆ ಬಂದು ಅಲ್ಲಿನ ಸಿಬ್ಬಂದಿಗೆ ಕೃತಜ್‌ತೆ ಸಲ್ಲಿಸಿದರು. ಅವರ ಪ್ರಾಮಾಣಿಕತೆ ಗುರುತಿಸಿ ಬ್ಯಾಂಕ್‌ನವರು ಕೂಡ ಸನ್ಮಾನಿಸಿದರು ಎಂಬುದನ್ನು ಉದಾಹರಿಸಿದ ನಾರಾಯಣಮೂರ್ತಿ, ವ್ಯಕ್ತಿಗತ ಪ್ರಾಮಾಣಿಕತೆ ಬರದ ಹೊರತು ಸಹಕಾರ ಸಂಘಗಳೂ ವೃದ್ಧಿಯಾಗಲು ಸಾಧ್ಯವಿಲ್ಲ ಎಂದೂ ಸೂಕ್ಷ್ಮವಾಗಿ ಹೇಳಿದರು.
ಐದು ಸಾವಿರ ವರ್ಷಗಳ ಹಿಂದೆ ಶೋಷಣೆ ವಿರುದ್ಧ ದಲಿತ ಸಮೂಹ ತಲೆಎತ್ತಿತು. ಸಮಾಜದ ಸೇವೆಗಾಗಿ ಹುಟ್ಟಿಕೊಂಡಿತು. ನಾನಾ ರೀತಿಯ ಅಸ್ಪಋಶ್ಯತೆ ನಿರ್ಮೂಲನೆಗೆ ಬಸವಣ್ಣ, ಪೆರಿಯಾರ್, ನಾರಾಯಣಗುರು, ಅಂಬೇಡ್ಕರ್ ಮೊದಲಾದವರು ಶ್ರಮಿಸಿದರು. ಸಂವಿಧಾನ ನೀಡಿದ ಸಾಮಾಜಿಕ ನ್ಯಾಯ, ಶಿಕ್ಷಣ, ಸಂಘಟನೆಯ ಹಕ್ಕನ್ನು ಈ ವರ್ಗದವರು ಬಳಸಿಕೊಳ್ಳಬೇಕು. ಅಂಬೇಡ್ಕರ್ ಆಶಯದಂತೆ ಶಿಕ್ಷಣದಿಂದ ಅಧಿಕಾರ ದಕ್ಕಿಸಿಕೊಳ್ಳಬೇಕು ಎಂದೂ ಕಿವಿಮಾತು ಹೇಳಿದರು.
ಸಹಕಾರ ಸಂಘಗಳಿಂದ ನಾವು ಸೌಲಭ್ಯ ಪಡೆಯದಿದ್ದರೂ, ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಆಶಿಸಿದ ಅವರು, ನೂತನ ಎಸ್ಸಿ-ಎಸ್ಟಿ ವಕೀಲರ ಸಹಕಾರ ಸಂಘ ಅಭಿವೃದ್ಧಿ ಕಾಣಲಿ. ವಕೀಲರು ಮತ್ತು ಅವರ ಕುಟುಂಬ ವರ್ಗ ಇದರ ಅನುಕೂಲ ಪಡೆಯಲಿ ಎಂದೂ ಹಾರೈಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ದಾವಣಗೆರೆ ವಿವಿ ಸಹಕಾರದೊಂದಿಗೆ ಐಎಎಸ್ ಬಾಬಾ ಸಂಸ್ಥೆಯ ಮೂಲಕ ನಗರದ ದೃಶ್ಯಕಲಾ ಕಾಲೇಜಿನಲ್ಲಿ ಸ್ಟಡಿ ಸರ್ಕಲ್ ಆರಂಭಿಸಿ ತರಬೇತಿ ನೀಡಲಾಗುತ್ತಿದೆ. ಇದನ್ನು ಯುವ ವಕೀಲರು ಬಳಸಿಕೊಂಡಲ್ಲಿ ಅಗತ್ಯ ತರಬೇತಿ ಕೊಡಿಸಲಾಗುವುದು ಎಂದರು.
ಎಸ್ಸಿಎಸ್ಟಿ ವಕೀಲರ ಸಹಕಾರ ಸಂಘದ ಕಟ್ಟಡಕ್ಕಾಗಿ ನಿವೇಶನ ಬೇಡಿಕೆ ಸಂಬಂಧ ಜಿಲ್ಲಾಡಳಿತದಿಂದ ಈಗಾಗಲೆ 4-5 ಜಾಗ ಗುರುತಿಸಲಾಗಿದೆ. ಇವನ್ನು ಪರಿಶೀಲಿಸಿ ನಿಗದಿಪಡಿಸಿಕೊಂಡಲ್ಲಿ ನಗರಪಾಲಿಕೆ ರಿಯಾಯ್ತಿ ದರದಲ್ಲಿ ನೀಡಲಿದೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿ, ಸಂಘದ ಕಚೇರಿಗಾಗಿ ಸೂಕ್ತ ಸ್ಥಳದಲ್ಲಿ ನಿವೇಶನ ಮತ್ತು 10 ಲಕ್ಷ ರೂ. ಅನುದಾನ ಕಲ್ಪಿಸಬೇಕು. ಅನೇಕ ವಕೀಲರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಅವರಿಗೆ ಸೂಕ್ತ ನಿವೇಶನ ಕೊಡಿಸಬೇಕು ಎಂದು ಮನವಿ ಮಾಡಿದರು. ನೂತನ ಸಂಘವು ನಮ್ಮ ಉಳಿವಿಗೆ ಹೊರತಾಗಿ ಯಾರ ವಿರುದ್ಧವೂ ಅಲ್ಲ ಎಂದೂ ಸ್ಪಷ್ಟಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ ಎಸ್ಸಿ ಎಸ್ಟಿ ವಕೀಲರ ಸಹಕಾರ ಸಂಘವು ಜಾತಿ ಪಾರಮ್ಯದ ಬದಲಾಗಿ ಸ್ವಯಂ ರಕ್ಷಣೆಗೆ ನಿರ್ಮಿಸಿಕೊಂಡ ಸಂಸ್ಥೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ್, ಸಂಘದ ಉಪಾಧ್ಯಕ್ಷ ಆಂಜನೇಯ ಗುರೂಜಿ, ರಾಮಚಂದ್ರ ಕಲಾಲ್, ಲೋಕಿಕೆರೆ ಸಿದ್ದಪ್ಪ, ಎಲ್.ಎಚ್.ಅರುಣ್‌ಕುಮಾರ್, ಎ.ಎಂ.ಹೆಗಡೆ, ಎಲ್.ಶ್ಯಾಮ್, ಕೆ.ಎಸ್.ಜಯಪ್ಪ, ಎಚ್.ಎಚ್.ವನಮಾಲಾ, ವಿ.ಗೋಪಾಲ್ ಇತರರಿದ್ದರು.