ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ

 ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮುಖಂಡ ರಾಜು ವೀರಣ್ಣ ಮಾತನಾಡಿದರು. ಅವರೊಂದಿಗೆ ಆಲೂರು ನಿಂಗರಾಜ್, ಮಲ್ಲೇಶ್, ಪರಶುರಾಮ ನಡುಮನಿ ಇತರರಿದ್ದರು.
ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮುಖಂಡ ರಾಜು ವೀರಣ್ಣ ಮಾತನಾಡಿದರು. ಅವರೊಂದಿಗೆ ಆಲೂರು ನಿಂಗರಾಜ್, ಮಲ್ಲೇಶ್, ಪರಶುರಾಮ ನಡುಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 27ಕ್ಕೆ ದೇಶವ್ಯಾಪಿ ಮನವಿ ಸಲ್ಲಿಕೆಗೆ ನಿರ್ಧಾರ
  • ಮುಂದಿನ ಹಂತದಲ್ಲಿ ದೆಹಲಿ ಚಲೋ ಕಾರ್ಯಕ್ರಮ
  • ಹಿಂದೂ ರಾಷ್ಟ್ರ ಸಮಿತಿಯ ರಾಜು ವೀರಣ್ಣ ಹೇಳಿಕೆ
ದಾವಣಗೆರೆ: ಕೇಂದ್ರ ಸರ್ಕಾರ ಮುಂದಿನ ವರ್ಷದೊಳಗಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು. ಈ ಆಗ್ರಹ ಸಂಬಂಧಿಸಿದಂತೆ ಹೋರಾಟದ ಭಾಗವಾಗಿ ಗೋಮಾತೆಯ ಗೌರವದ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮುಖಂಡ ರಾಜು ವೀರಣ್ಣ ತಿಳಿಸಿದರು.
ಅಭಿಯಾನದ ಪ್ರಥಮ ಹಂತವಾಗಿ ಏ.27 ರಂದು ದಾವಣಗೆರೆ ಸೇರಿ ದೇಶದ 5 ಸಾವಿರ ಕಡೆಗಳಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಅಂದು ಬೆಳಗ್ಗೆ 10ಕ್ಕೆ ಜಯದೇವ ವೃತ್ತದಿಂದ ಉಪ ವಿಭಾಗಾಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಎಸಿ ಮೂಲಕ ಪ್ರಧಾನಮಂತ್ರಿ, ರಾಷ್ಟ್ರಪತಿ, ಎಲ್ಲ ರಾಜ್ಯಗಳ ಸಿಎಂ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಎಲ್ಲ ಪಕ್ಷ, ಜಾತಿ, ಸಮುದಾಯದವರು, ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಜೀವನದ ಪರಿಸರ ವ್ಯವಸ್ಥೆಯಲ್ಲಿ ಗೋಮಾತೆ ಪ್ರಮುಖ ಪಾತ್ರ ವಹಿಸುತ್ತಿದೆ. ಗೋಮಾತೆಯಲ್ಲಿ 33 ಕೋಟಿ ದೇವರ ಶಕ್ತಿ ಇದೆ ಎಂಬ ನಂಬಿಕೆ ಇದೆ. ಹಾಲನ್ನು ಅಮೃತಕ್ಕೆ ಸಮಾನ ಎಂದೇ ಕರೆಯಲ್ಪಡಲಾಗುತ್ತದೆ. ನೈಸರ್ಗಿಕ ಕೃಷಿ, ಭೂಮಿಯ ಆರೋಗ್ಯ, ಜನಾರೋಗ್ಯಕ್ಕೂ ಗೋಮಾತೆಯ ಉತ್ಪನ್ನಗಳು ಅತ್ಯಗತ್ಯ. ಹೀಗಾಗಿ ರಾಷ್ಟ್ರೀಯ ಪ್ರಾಣಿ ಎಂದು ಅಧಿಕೃತ ಪ್ರಕಟಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆ ಬಳಿಕ ನಂತರ ಎರಡನೇ ಹಂತದಲ್ಲಿ ದೆಹಲಿ ಚಲೋ ಕಾರ್ಯಕ್ರಮ ನಡೆಸಲಾಗುವುದು. ದೇಶದ ಎಲ್ಲ ಸಾಧು-ಸಂತರು, ಮಠಾಶರು, ಸ್ವಾಮೀಜಿಗಳು, ಹಿಂದೂ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಹಿಂದೂ ಧರ್ಮದ ಅಸಂಖ್ಯಾತ ಅನುಯಾಯಿಗಳು ಭಾಗವಹಿಸುವರು ಎಂದು ತಿಳಿಸಿದರು.
ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡುವವರೆಗೆ ಕಾಶಿಗೆ ಹಿಂತಿರುಗುವುದಿಲ್ಲ ಎಂದು ಸಾವಿರಾರು ಸಾಧು-ಸಂತರು ದೇಶದ ಎಲ್ಲೆಡೆ ಆಗಮಿಸಲಿದ್ದಾರೆ. ದಾವಣಗೆರೆಗೆ ಮೌನಿಬಾಬಾ.. ಎಂಬುವರು ಆಗಮಿಸಿ ಗೋಮಾತೆಯ ಗೌರವದ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲೆಡೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಅಭಿಯಾನದ ಅಂಗವಾಗಿ ಕೇಂದ್ರದ ಮೇಲೆ ಒತ್ತಡ ತರುವ ಉದ್ದೇಶದಿಂದ ದಾವಣಗೆರೆಯಲ್ಲಿ ಸಹಿ ಸಂಗ್ರಹ ನಡೆಸಲಾಗುತ್ತಿದೆ. ಈಗಾಗಲೇ 20-30 ಸಾವಿರದಷ್ಟು ಸಹಿ ಸಂಗ್ರಹಿಸಲಾಗಿದೆ. ಮನವಿ ಜತೆಗೆ ಸಂಗ್ರಹಿಸಿದ ಸಹಿಗಳ ಮಾಹಿತಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಪ್ರಮುಖರಾದ ಆಲೂರು ನಿಂಗರಾಜ್, ಮಲ್ಲೇಶ್, ಪರಶುರಾಮ ನಡುಮನಿ, ಪ್ರವೀಣ್ ಜಾಧವ್, ಪಂಜು ಪೈಲ್ವಾನ್, ರವಿಗೌಡ್ರು, ಚೇತನ್, ಚಂದ್ರಕಾಂತ್, ಮಂಜಣ್ಣ, ಅಜಯ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net