ನಾಲ್ಕು ಚುಕ್ಕೆ ಜಿಂಕೆಗಳ ಸಾವು

 ಆನಗೋಡಿನ ಕಿರು ಪ್ರಾಣಿ ಸಂಗ್ರಹಾಲಯ.
ಆನಗೋಡಿನ ಕಿರು ಪ್ರಾಣಿ ಸಂಗ್ರಹಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಹೆಮರಾಜಿಕ್ ಸೆಪ್ಟಿಸೆಮಿಯಾ ರೋಗ ಶಂಕೆ
  • ರೋಗ ತಡೆಗೆ ಅರಣ್ಯಾಧಿಕಾರಿಗಳ ಪ್ರಯತ್ನ
  • ಆನಗೋಡು ಮೃಗಾಲಯದಲ್ಲಿ ಪ್ರವೇಶ ಬಂದ್
ದಾವಣಗೆರೆ: ದಾವಣಗೆರೆ ತಾಲೂಕು ಆನಗೋಡು ಬಳಿಯ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯವನ್ನು ಮುಂದಿನ ಆದೇಶದವರೆಗೆ ಸಾರ್ವಜನಿಕರ ವೀಕ್ಷಣೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಕಿರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.
ಜ.16ರಂದು ಮೊದಲ ಚುಕ್ಕೆ ಜಿಂಕೆ ಸಾವು ದಾಖಲಾಗಿ, ತಕ್ಷಣವೇ ವಿಭಾಗೀಯ ಅಧಿಕಾರಿಗಳು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಜಾರಿಗೆ ತಂದರು.
ಮರುದಿನ ಮತ್ತೆರಡು ಜಿಂಕೆಗಳು ಮೃತಪಟ್ಟವು. ತಕ್ಷಣವೇ ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರನ್ನು ಸ್ಥಳಕ್ಕೆ ಭೇಟಿ ನೀಡಲು ಕೋರಲಾಯಿತು. ಜ.18 ರಂದು ಮತ್ತೊಂದು ಜಿಂಕೆ ಮೃತಪಟ್ಟಿರುವುದು ಕಂಡುಬಂದಿದೆ.
ಸಮಿತಿಯ ಸದಸ್ಯರು ಸ್ಥಳ ಪರಿಶೀಲನೆ ನಡೆಸಿ, ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಪ್ರಾಥಮಿಕ ಲಕ್ಷಣಗಳ ಪರಿಶೀಲನೆ ನಂತರ, ಇದು ‘ಹೆಮರಾಜಿಕ್ ಸೆಪ್ಟಿಸೆಮಿಯಾ’ (ಏಖ) ಎಂಬ ಸಾಂಕ್ರಾಮಿಕ ರೋಗವಿರಬಹುದು ಎಂದು ಸಮಿತಿಯು ಶಂಕಿಸಿದ್ದು, ರೋಗ ಹರಡುವಿಕೆ ತಡೆಗೆ ಕ್ರಮ ವಹಿಸಲಾಗಿದೆ.
ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂಭಿಸಲಾಗಿದ್ದು, ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮೃಗಾಲಯದಾದ್ಯಂತ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ಮೃಗಾಲಯದಲ್ಲಿ ಒಟ್ಟು 170 ಚುಕ್ಕೆ ಜಿಂಕೆಗಳಿದ್ದು (94 ಹೆಣ್ಣು, 58 ಗಂಡು ಹಾಗೂ 18 ಮರಿಗಳು), ಉಳಿದಂತೆ ಮೃಗಾಲಯದಲ್ಲಿರುವ ಕೃಷ್ಣಮೃಗ, ಕರಡಿಗಳು, ಪಕ್ಷಿಗಳ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿ ಹರ್ಷವರ್ಧನ ಮನವಿ ಮಾಡಿದ್ದಾರೆ.
----
ಆನಗೋಡಿನ ಕಿರು ಪ್ರಾಣಿ ಸಂಗ್ರಹಾಲಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net