ಠಾಣೆ ಸಮೀಪವೇ ಮಾರಣಾಂತಿಕ ದಾಳಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೇಮವಿವಾಹವಾದ ಸಿಟ್ಟಿಗೆ ಯುವಕನ ಕೊಲೆ ಯತ್ನ
  • ರಕ್ಷಣೆ ಕೋರಿ ತೆರಳಿದ್ದಾಗಲೇ ನಡೆದ ಘಟನೆ
  • ಬಸವಾಪಟ್ಟಣ ಠಾಣೆಯಲ್ಲಿ ದೂರು
ದಾವಣಗೆರೆ: ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಠಾಣೆ ಸಮೀಪವೇ ನವವಿವಾಹಿತನ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಐದು ದಿನದ ಹಿಂದಷ್ಟೇ ಪ್ರೇಮವಿವಾಹವಾಗಿದ್ದ ಯುವಜೋಡಿ ರಕ್ಷಣೆ ಕೋರಿ ಭಾನುವಾರ ಸಂಜೆ ಠಾಣೆಗೆ ತೆರಳಿದ್ದಾಗಲೇ ಈ ದಾಳಿ ನಡೆದಿದ್ದು ಯುವತಿ ಚೀರಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ.
ದಾಳಿಯಲ್ಲಿ ಚನ್ನಗಿರಿ ತಾಲೂಕು ಕಂಚುಗಾರನಹಳ್ಳಿ ಗ್ರಾಮದ ಎಚ್. ಸಿದ್ದೇಶ್ ಬಲ ಮುಂಗೈನ ಮಣಿಕಣ್ಣಿಗೆ ತೀವ್ರ ಗಾಯವಾಗಿದ್ದು ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆ ಬಳಿಕ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಘಟನೆಯ ವಿವರ:

ದಾವಣಗೆರೆ ಜಿಲ್ಲೆ ಕಂಚುಗಾರನಹಳ್ಳಿ ಗ್ರಾಮ ಮೂಲದ ಎಚ್. ಸಿದ್ದೇಶ್, ಮೈಸೂರು ಜಿಲ್ಲೆಯ ತರಣಿಮಡ್ಡಿ ಗ್ರಾಮದ ಫಾರ್ಮ್‌ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದೇ ಗ್ರಾಮದ ನಾಗರಾಜ ಎಂಬುವರ ಮಗಳನ್ನು ಪ್ರೀತಿಸಿದ್ದ. ಒಂದೇ ಸಮುದಾಯವದವರಿದ್ದರೂ ಮದುವೆಗೆ ಯುವತಿ ಕುಟುಂಬದಲ್ಲಿ ವಿರೋಧವಿತ್ತು.
ಜೂ. 30ರಂದು ಈ ಜೋಡಿ ಮನೆ ಬಿಟ್ಟು ತೆರಳಿದ್ದಾಗ ಠಾಣೆಯಲ್ಲಿ ಯುವತಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದೇ ದಿನ ಲೋಕಿಕೆರೆ ಗ್ರಾಮದ ಉಚ್ಚೆಂಗಮ್ಮ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ನಮಗೆ ಜೀವಬೆದರಿಕೆ ಇರುವುದಾಗಿ ಎಸ್ಪಿ ಅವರ ಬಳಿ ಅಹವಾಲು ಸಲ್ಲಿಸಿದ್ದರು.
ನಂತರ ಭಾನುವಾರ ಸಂಜೆ ಬಸವಾಪಟ್ಟಣ ಠಾಣೆಗೆ ಬಂದ ಜೋಡಿ ಪೊಲೀಸರ ಬಳಿ, ತಾವು ಮದುವೆಯಾಗಿದ್ದ ವಿವರ ಹಂಚಿಕೊಂಡಿದ್ದು ರಕ್ಷಣೆ ಕೋರಿದೆ. ಅಲ್ಲಿಗೇ ಧಾವಿಸಿದ ಯುವತಿಯ ಸೋದರ ಮಾವ ನಾಗರಾಜ ಏಕಾಏಕಿ ಚಾಕುವಿವಿಂದ ದಾಳಿ ನಡೆಸಿದ್ದಾನೆ.
ಕೈ ಅಡ್ಡಲಾಗಿ ಹಿಡಿದಿದ್ದರಿಂದ ಸಿದ್ದೇಶ್ ಮುಂಗೈಗೆ ತಾಗಿ ರಕ್ತಗಾಯಗಳಾದವು. ಇದೇ ವೇಳೆ ಯುವತಿ ಚೀರಿದ್ದು ಪೊಲೀಸರು, ಸಾರ್ವಜನಿಕರು ಪ್ರವೇಶಿಸಿದರು. ಆಗ ಆರೋಪಿ ನಾಗರಾಜ ಅಲ್ಲಿಂದ ಪರಾರಿಯಾಗಿದ್ದಾನೆ. ತನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಗಾಯಾಳು ಸಿದ್ದೇಶ್ ಠಾಣೆಗೆ ದೂರು ನೀಡಿದ್ದಾರೆ.
ಠಾಣೆ ಒಳಗೇ ಕೊಲೆ ಯತ್ನ ನಡೆದಿದೆ. ಘಟನೆ ನಡೆದಾಗ ಪೋಲೀಸರು ಇರಲಿಲ್ಲ. ಘಟನೆಯ ಎಲ್ಲ ದೃಶ್ಯಾವಳಿಯು ವಕೀಲರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿವೆ ಎಂದು ತಿಳಿಸಿರುವ ಸಿದ್ದೇಶ್‌ನ ಸಹೋದರ ರಾಕೇಶ್, ನವಜೋಡಿ ಜೀವಕ್ಕೆ ಅಪಾಯವಿದ್ದು ಪೊಲೀಸರು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net