ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಶಾಸನ ಮತ್ತು ಸ್ಮಾರಕಗಳ ಸಂರಕ್ಷಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಾಳೆಗರಿಯನ್ನು ವೀಕ್ಷಿಸಿದರು. ಶೀಲವಂತ ಶಿವಕುಮಾರ, ಪರಮೇಶ್ವರ ಹೆಗಡೆ ಇದ್ದರು.
ದಾವಣಗೆರೆ :ಜಿಲ್ಲೆಯ ಅಪರೂಪದ ಶಿಲಾ ಶಾಸನಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಿ, ಅವುಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚುರುಕುಗೊಳಿಸಿ, ಮೇ 15ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ, ಜಿಲ್ಲೆಯ ಶಾಸನ ಮತ್ತು ಸ್ಮಾರಕಗಳ ಸಂರಕ್ಷಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜ್ಞಾನ ಭಾರತಂ ಮಿಷನ್’ ಯೋಜನೆಯಡಿ ರಾಜ್ಯಾದ್ಯಂತ ಲಭ್ಯವಿರುವ ಅಮೂಲ್ಯ ಹಸ್ತಪ್ರತಿಗಳ ಸಮೀಕ್ಷೆ, ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶತಮಾನಗಳ ಇತಿಹಾಸವಿರುವ ಹಳೆಯ ಹಸ್ತಪ್ರತಿಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಜ್ಞಾನದ ಸಂಪತ್ತನ್ನು ಹಸ್ತಾಂತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ದೇಶಾದ್ಯಂತ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ಸಂಗ್ರಹಿಸಿ ‘ರಾಷ್ಟ್ರೀಯ ಭಂಡಾರ’ ನಿರ್ಮಿಸಲಾಗುವುದು. ಕರ್ನಾಟಕದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಗ್ರಂಥಾಲಯಗಳು, ದೇವಾಲಯಗಳು, ಮಠಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಖಾಸಗಿ ಸಂಗ್ರಹದ ಹಸ್ತಪ್ರತಿಗಳನ್ನು ಗುರುತಿಸಿ ದಾಖಲಿಸುವುದು. ಸಮೀಕ್ಷಾ ತಂಡಗಳಿಗೆ ಅಗತ್ಯ ಸಹಕಾರ ನೀಡುವುದು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಈ ಸಮಿತಿಗಳ ಕರ್ತವ್ಯವಾಗಿದೆ.
ರಾಜ್ಯದ 17 ಜಿಲ್ಲೆಗಳಲ್ಲಿ ಈಗಾಗಲೆ ಸಮೀಕ್ಷೆ ಆರಂಭವಾಗಿದ್ದು, ಏ. 27ರ ವೇಳೆಗೆ ಸುಮಾರು 2,13,255 ಹಸ್ತಪ್ರತಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಹಸ್ತಪ್ರತಿಗಳ ಮಾಹಿತಿ ಹಂಚಿಕೊಳ್ಳುವ ಕಾರ್ಯವು ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಈ ಯೋಜನೆಯ ಮೂಲಕ ರಾಜ್ಯವಾರು ಸಮಗ್ರ ದತ್ತಾಂಶ ಭಂಡಾರ ನಿರ್ಮಾಣವಾಗಲಿದೆ. ಜಿ.ಐ.ಎಸ್ ಆಧಾರಿತ ರಾಷ್ಟ್ರೀಯ ಹಸ್ತಪ್ರತಿ ಸಂಗ್ರಹ ನಕ್ಷೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಕಡ್ಡಾಯವಾಗಿ ಕ್ಷೇತ್ರ ಕಾರ್ಯ ಕೈಗೊಳ್ಳಬೇಕು. ತಹಸೀಲ್ದಾರ್ ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಈ ಎಲ್ಲ ಸಮೀಕ್ಷಾ ಕಾರ್ಯಗಳನ್ನು ಮೇ 15ರ ಒಳಗಾಗಿ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು ಎಂದು ಸೂಚನೆ ನೀಡಿದರು.
ಸಮೀಕ್ಷಾ ಕಾರ್ಯದಲ್ಲಿ ಹರಿಹರೇಶ್ವರ ದೇವಸ್ಥಾನ, ತಾವರೆಕೆರೆಯ ಶಿಲಾಮಠ, ಚನ್ನಗಿರಿಯ ಎರಡು ಶಿಲಾಮಠ, ಜಗಳೂರಿನ ಪುರಾತನ ಮಠಗಳು, ಹದಡಿ ಮತ್ತು ಅಣಬೇರುವಿನ ಹಳೆಯ ಕೋಟೆಗಳು, ಹೊನ್ನಾಳಿಯ ಹಿರೇಕಲ್ಲು ಮಠ ಹಾಗೂ ಕಲ್ಲೇಶ್ವರ ಮತ್ತು ಭೀಮೇಶ್ವರ ದೇವಸ್ಥಾನಗಳಲ್ಲಿರುವ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಲು ತಿಳಿಸಿದರು.
ಸ್ಮಾರಕಗಳ ಫೋಟೋಗಳನ್ನು ವಿರೂಪಗೊಳಿಸುವುದು ಅಥವಾ ಅವುಗಳನ್ನು ಬಳಸಿಕೊಂಡು ಸಮಾಜದಲ್ಲಿ ತಪ್ಪು ಸಂದೇಶ ರವಾನಿಸುವ ವ್ಯಕ್ತಿಗಳ ವಿರುದ್ಧ ತಕ್ಷಣವೆ ಎಫ್.ಐ.ಆರ್ ದಾಖಲಿಸಲು ಸೂಚಿಸಲಾಗಿದೆ. ರಾಷ್ಟ್ರೀಯ ಪರಂಪರೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು. ಸಾರ್ವಜನಿಕರು ಮತ್ತು ಪ್ರವಾಸಿಗರು ಸ್ಮಾರಕಗಳ ಬಳಿ ಫೋಟೋ ತೆಗೆಯುವಾಗ ಆ ಸ್ಥಳದ ಪಾವಿತ್ರ್ಯ ಮತ್ತು ಐತಿಹಾಸಿಕ ಮಹತ್ವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಹವ್ಯಾಸಿ ಸಂಶೋಧಕ ಹಿ.ಗು.ದುಂಡೆಪ್ಪ ಸಂರಕ್ಷಿಸಿರುವ ತಾಳೆಗರಿಯನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತೆ ಮಮತಾ ಹೊಸಗೌಡರ್, ಸಿಪಿಒ ಮಲ್ಲಾನಾಯಕ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಕಾವ್ಯ, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು, ಶಾಸನ ಸಂರಕ್ಷಣೆಯ ಸಮಿತಿಯ ಸದಸ್ಯರು ಇದ್ದರು.