ದಾವಣಗೆರೆ :ಹಿರಿಯ ಶಾಸಕ ದಿ. ಡಾ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮ ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಶುಕ್ರವಾರ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ.
ಪಂಚ ಪೀಠಾಧೀಶರು, ಸಿರಿಗೆರೆ, ಸುತ್ತೂರು, ಸಿದ್ಧಗಂಗಾ, ಆದಿಚುಂಚನಗಿರಿ, ಕನಕ ಗುರುಪೀಠ, ಕೋಡಿಮಠ ಸೇರಿ ನಾಡಿನ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸುವರು. ಹಲವಾರು ಗಣ್ಯರು, ಮುಖಂಡರು, ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮ ಬೆಳಗ್ಗೆ 10.15ಕ್ಕೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅಮೃತ ಪುರುಷ’ ಸಾಕ್ಷೃಚಿತ್ರ ಬಿಡುಗಡೆ ಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಗೊಳಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಾ. ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಮನೂರು ಅವರ ಜೀವನ ಕುರಿತ ಕಿರು ಹೊತ್ತಿಗೆ ಬಿಡುಗಡೆ ಗೊಳಿಸುವರು. ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಶಿವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸುವರು.
ನೂರು ಎಕರೆ ಪ್ರದೇಶದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ 200 ಜನ ಗಣ್ಯಾತಿಗಣ್ಯರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬಲ ಭಾಗದ ವೇದಿಕೆಯಲ್ಲಿ ಹರ ಗುರು ಚರ ಮೂರ್ತಿಗಳು, ಎಡಗಡೆ ಕುಟುಂಬದ ಸದಸ್ಯರು ಕುಳಿತುಕೊಳ್ಳಲಿದ್ದಾರೆ. ಮುಖ್ಯ ವೇದಿಕೆ ಮುಂಭಾಗದಲ್ಲಿ 25 ಸಾವಿರಕ್ಕೂ ಹೆಚ್ಚು ಆಸನಗಳನ್ನು ಹಾಕಲಾಗಿದೆ.
ಪುತ್ಥಳಿ ಸಿದ್ಧ
ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹವನ್ನು ನಿರ್ಮಿಸಿದ ಖ್ಯಾತಿಯ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್, ಡಾ. ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
ನುಡಿನಮನ ಕಾರ್ಯಕ್ರಮದಲ್ಲಿ ಈ ಪುತ್ಥಳಿಯನ್ನು ಅನಾವರಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಊಟದ ಮೆನು
ದೊಡ್ಡ ಮಟ್ಟದಲ್ಲಿ ಆಯೋಜಿಸಿರುವ ನುಡಿನಮನ ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟ ಸಿದ್ಧಪಡಿಸಲು 2 ಸಾವಿರ ಬಾಣಸಿಗರು ಆಗಮಿಸಿದ್ದಾರೆ.
ಎಲ್ಲರಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ತಿಂಡಿ ಕೇಸರಿಬಾತ್, ಖಾರಾಬಾತ್, ಇಡ್ಲಿ-ವಡೆ, ಟೀ-ಕಾಫಿ, ಊಟಕ್ಕೆ ಮೈಸೂರು ಪಾಕ್, ಪಾಯಸ, ಲಾಡು, ಅಕ್ಕಿರೊಟ್ಟಿ, ರುಮಾಲಿ ರೋಟಿ, ಕೋಸಂಬರಿ, ಪಲ್ಯ, ಮಿರ್ಚಿ, ಪಲಾವ್, ಅನ್ನ-ಸಾಂಬರ್, ಮೊಸರು ಇರಲಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.