ಕುಡಿವ ನೀರು ವಿತರಣೆ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ
ಜನಸಂಖ್ಯೆ, ನೀರಿನ ಹಂಚಿಕೆಗೆ ತಕ್ಕಂತೆ ಟ್ಯಾಂಕರ್ ಬಳಸಿ
ಟಾಸ್ಕ್‌ಫೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಎಚ್ಚರಿಕೆ
ದಾವಣಗೆರೆ: ವಾರದೊಳಗಾಗಿ ನಿರೀಕ್ಷಿತ ಮಳೆ ಆಗದಿದ್ದಲ್ಲಿ ಬರಪೀಡಿತ ಜಿಲ್ಲೆ ಘೋಷಣೆ ಆಗುವ ಸಾಧ್ಯತೆ ಇದೆ. ವಾಸ್ತವಿಕ ಮಳೆಯ ನಿಖರ ಮಾಹಿತಿಯೊಂದಿಗೆ ಅಧಿಕಾರಿಗಳು ಸನ್ನದ್ಧರಾಗಬೇಕು. ಜನ-ಜಾನುವಾರುಗಳಿಗೆ ಕುಡಿವ ನೀರು ವಿತರಣೆಯಲ್ಲಿ ನಿರ್ಲಕ್ಷಿಸಿದರೆ ಸಿಎಂ ಸೂಚನೆಯಂತೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಾಗದ್ದರಿಂದ ಕೆಲವು ಕೆರೆಗಳಲ್ಲಿ ನೀರಿನ ಕೊರತೆಯಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿವ ನೀರೊದಗಿಸುವಲ್ಲಿ ಜಿಪಂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗ, ತಹಸೀಲ್ದಾರ್, ಕಂದಾಯ ಅಧಿಕಾರಿಗಳು, ಪಿಡಿಒಗಳು ನಿಗಾ ವಹಿಸಬೇಕು ಎಂದು ಹೇಳಿದರು.
ಸದ್ಯಕ್ಕೆ ಸಮಸ್ಯಾತ್ಮಕ 13 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಹಾಗೂ ಉಚ್ಚಂಗಿಪುರ ಸೇರಿ ಎರಡು ಕಡೆ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಸಮಸ್ಯಾತ್ಮಕ ಸಂಭಾವ್ಯ 24 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಪಡೆಯುವ ಬಗ್ಗೆ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಆಯಾ ಗ್ರಾಮಗಳ ಜನಸಂಖ್ಯೆ ಆಧರಿಸಿ, ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಲೆಕ್ಕ ತಪ್ಪಿದ ಟ್ಯಾಂಕರ್‌ಗಳಿಗೆ ಒಂದು ರೂ. ಕೂಡ ಬಿಲ್ ಪಾವತಿಸುವುದಿಲ್ಲ ಎಂದು ಡಿಸಿ ಖಡಕ್ ಎಚ್ಚರಿಕೆ ನೀಡಿದರು. ಶಾಸಕರ ನೇತೃತ್ವದ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದೂ ತಾಕೀತು ಮಾಡಿದರು.
ಉಚ್ಚಂಗಿಪುರ ಸಮೀಪದ ಲಂಬಾಣಿ ಹಟ್ಟಿಯಲ್ಲಿ ಕೊಳವೆಬಾವಿ ಇದೆ. ಆದರೆ ಜನರು ಮೋಟರ್‌ಪಂಪ್ ಕೇಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದಾಗ ಡಿಸಿ ‘ಹೊಸ ಪಂಪ್ ಖರೀದಿಸಬೇಕಿಲ್ಲ. ದುರಸ್ತಿಯಾಗದೆ ಉಳಿದ ಹಳೆಯ ಮೋಟರ್ ಪಂಪ್‌ಗಳು ಎಲ್ಲಿ ಹೋದ್ವುರೀ. ನಾನು ಇದೇ ಇಲಾಖೆಯಲ್ಲೇ ಮಣ್ಣು ಹೊತ್ತು ಬಂದಿದ್ದೇನೆ’ ಎಂದು ಹೇಳಿದರು.
ಭಾನುವಳ್ಳಿ ಸುತ್ತಮುತ್ತಲ 20 ಗ್ರಾಮಗಳಿಗೆ ಕುಡಿವ ನೀರಿನ ತೀವ್ರ ಸಮಸ್ಯೆಯಾಗಿದೆ. ಅದರ ತುರ್ತು ನಿರ್ವಹಣೆಗಾಗಿ ಅಗತ್ಯ 40ಲೋಡ್ ಮರಳನ್ನು ನಂದಿಗಾವಿ ಬ್ಲಾಕ್‌ನಿಂದ ಪಡೆಯಬೇಕು. ತುರ್ತಾಗಿ ಕೆಲಸ ನಡೆಸಲು ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯ ಹಿರಿಯ ವಿಜ್ಞಾನಿ ರಶ್ಮಿ ಅವರಿಗೆ ಸೂಚನೆ ನೀಡಿದರು.
ನೆಲ್ಲಿಹಂಕಲು ಪಂಚಾಯಿತಿ ವ್ಯಾಪ್ತಿಯ ಕಗ್ಗಿ ಗ್ರಾಮ ಸಮೀಪದ ಭದ್ರಾ ನಾಲೆ ಮೂಲಕ ರೈತರು ಪಂಪ್‌ಸೆಟ್ ಮೂಲಕ ನೀರು ಎತ್ತುವಳಿ ಮಾಡುತ್ತಿದ್ದಾರೆ. ಅಕ್ರಮವಾಗಿ ನೀರು ಎತ್ತುವಳಿ ಮಾಡುವವರ ಬಗ್ಗೆ ನಿಗಾ ವಹಿಸಿ ಅಂಥವರ ವಿರುದ್ಧ ದೂರು ದಾಖಲಿಸಬೇಕು. ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದರು.
ಪ್ರತಿ ಸೋಮವಾರಕ್ಕೊಮ್ಮೆ ಟಾಸ್ಕ್‌ಫೋರ್ಸ್ ಸಭೆ ನಡೆಸಲಾಗುವುದು. ಹೀಗಾಗಿ ಆಯಾ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಮತ್ತು ಒದಗಿಸಿದ ಪರಿಹಾರಕ್ರಮದ ಘಟನಾವಳಿ ಬಗ್ಗೆ ಜಿಪಂ ಸಿಇಒ ಅವರಿಗೆ ವರದಿ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 26 ಸಾವಿರ ನೀರಿನ ಮಾದರಿ ಪರೀಕ್ಷಿಸಿದ್ದು, ಎಲ್ಲೂ ವಿಷಕಾರಿ ರಾಸಾಯನಿಕ ಅಂಶ ಪತ್ತೆಯಾಗಿಲ್ಲ. ಕೇವಲ ಫ್ಲೋರೈಡ್ ಸಮಸ್ಯೆ ಇದ್ದು ಸರಿಪಡಿಸಲಾಗುತ್ತಿದೆ. ಕುಡಿವ ನೀರಿನ ಪೈಪ್‌ಲೈನ್‌ಗಳಲ್ಲಿ ಚರಂಡಿ ನೀರು ಹರಿದುಬರದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.
ಹೊನ್ನಾಳಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಕೆ-ಸಿಪ್‌ನವರು ಕಾಮಗಾರಿ ಹಿನ್ನೆಲೆಯಲ್ಲಿ ಪೈಪ್‌ಲೈನ್ ಒಡೆದಿದ್ದರ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದಾಗ, ತುರ್ತು ದುರಸ್ತಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಉಪವಿಭಾಗಾಧಿಕಾರಿ ಚನ್ನಪ್ಪ, ದೂಡಾ ಆಯುಕ್ತೆ ರೇಣುಕಾ, ಗ್ರಾ.ಕು.ನೀ.ನೈ. ಇಲಾಖೆ ಅಧಿಕಾರಿ ನಾಗೇಂದ್ರಪ್ಪ, ಜಂಟಿ ಕೃಷಿ ನಿರ್ದೇಶಕ ಕೆ. ಜಿಯಾವುಲ್ಲಾ, ಡಿಎಚ್‌ಒ ಡಾ.ಷಣ್ಮುಖಪ್ಪ ಇತರೆ ಅಧಿಕಾರಿಗಳಿದ್ದರು.
ಸ್ಥಾವರ ಸುಟ್ಟಲ್ಲಿ ಬದಲಿಸಲು ಒತ್ತು
ಕುಡಿವ ನೀರು ಪೂರೈಸುವ ಹಿನ್ನೆಲೆಯಲ್ಲಿ ವಿದ್ಯುತ್ ಸ್ಥಾವರಗಳು ಸುಟ್ಟುಹೋಗಿದ್ದಲ್ಲಿ 24 ತಾಸಿನೊಳಗೆ ಬದಲಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಮೂರು ದುರಸ್ತಿ ಘಟಕಗಳಿವೆ. ಅಲ್ಲದೆ 400 ಹೆಚ್ಚುವರಿ ಸ್ಥಾವರಗಳಿವೆ. ಬೆಸ್ಕಾಂ ಇಲಾಖೆಯ ಲಾರಿ ಮೂಲಕವೇ ಸರಬರಾಜು ಮಾಡಲಾಗುವುದು ಎಂದೂ ಭರವಸೆ ನೀಡಿದರು.
ಮೇವಿಗಿಲ್ಲ ಕೊರತೆ
ಸದ್ಯಕ್ಕೆ ಜಿಲ್ಲೆಯಲ್ಲಿ 36 ವಾರಕ್ಕೆ ಪೂರೈಸಬಹುದಾದಷ್ಟು ಮೇವಿನ ಲಭ್ಯತೆ ಇದೆ. ಈ ಗಾರಿ ರಾಗಿ ಇಳುವರಿಯಾಗಿದೆ. ಕೆಲವೇ ತಿಂಗಳಲ್ಲಿ ಭತ್ತ ಕೂಡ ಕೊಯ್ಲಿಗೆ ಬರಲಿರುವ ಹಿನ್ನೆಲೆಯಲ್ಲಿ ಮೇವಿಗೆ ಕೊರತೆ ಇಲ್ಲ. ಜಾನುವಾರುಗಳಿಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡಲಾಗುತ್ತಿದ್ದು, ಇತರೆ ಅಧಿಕಾರಿಗಳು ಕೂಡ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಸೂಚಿಸಿದರು.
ಸಮಸ್ಯೆಯಿದ್ದಲ್ಲಿ ಸಹಾಯವಾಣಿಗೆ ಸಂಪರ್ಕಿಸಿ
ಜಿಲ್ಲೆಯ ನಾಗರಿಕರು ನೀರಿನ ಸಮಸ್ಯೆ ಇದ್ದಲ್ಲಿ ಜಿಲ್ಲಾ ಸಹಾಯವಾಣಿ ಸಂಖ್ಯೆ 08192-262126 ಇಲ್ಲಿಗೆ ಕರೆ ಮಾಡಬಹುದು. ನಾಲೆಗಳಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಈಜಾಟಕ್ಕಿಳಿಯಬಾರದು. ಅಡಕೆ ಬೆಳೆಗಾರರು ಹನಿನೀರಾವರಿಗೆ ಒತ್ತು ನೀಡುವುದಲ್ಲದೆ ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಬೇಕು ಎಂದು ಡಿಸಿ ಹೇಳಿದರು.
ಹಕ್ಕಿಜ್ವರ ಪ್ರಕರಣ ಜಿಲ್ಲೆಯಲ್ಲಿಲ್ಲ
ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿ ಜ್ವರ ಪ್ರಕರಣ ವರದಿಯಾಗಿಲ್ಲ. ಜನರು ಆತಂಕ ಪಡಬೇಕಿಲ್ಲ. ಎಲ್ಲಿಯಾದರೂ ಹಕ್ಕಿಗಳು ಶಂಕಾಸ್ಪದ ಸಾವಿಗೀಡಾದಲ್ಲಿ ಜನರು ಅದನ್ನು ಮುಟ್ಟದೆ ಮಾಹಿತಿ ನೀಡಬೇಕು ಎಂದು ಡಿಸಿ ಹೇಳಿದರು.
ಸಿಗ್ನಲ್‌ಗಳಲ್ಲಿ ನಿಲುಗಡೆ ಅವಧಿ ಇಳಿಕೆ
ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಚೇರಿ ಅವಧಿ ಬದಲಾವಣೆ ನಿಯಮ ನಮ್ಮ ಜಿಲ್ಲೆಯಲ್ಲಿಲ್ಲ. ಇದನ್ನು ಸರ್ಕಾರವೇ ತೀರ್ಮಾನಿಸಬೇಕು. ನಗರದ ಸಿಗ್ನಲ್‌ಗಳಲ್ಲಿ ವಾಹನ ನಿಲುಗಡೆ ಅವಧಿ ಇಳಿಸಲು ಕ್ರಮ ವಹಿಸಲಾಗುವುದು ಎಂದು ಡಿಸಿ ಹೇಳಿದರು.
ಗಣತಿದಾರರ ಮೇಲೆ ಬಿಡದಿರಿ ನಾಯಿ.!
ಏ. 15ರಿಂದ ಮನೆಗಣತಿ ಆರಂಭವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಮನೆ ಮನೆಗೆ ಬರುವ ಗಣತಿದಾರರ ಜತೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಿ ಪ್ರಶ್ನಾವಳಿಗೆ ಉತ್ತರಿಸಿ. ಗಣತಿಗೆ ಸಹಕರಿಸದೆ ಅವರ ಮೇಲೆ ನಾಯಿಗಳು ಬಿಡುವ ದೂರುಗಳು ಬಂದಿವೆ. ಜನರು ಹಾಗೆ ಮಾಡಬಾರದು ಎಂದೂ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮನವಿ ಮಾಡಿದರು.
--
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಡಿಸಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ದೂಡಾ ಆಯುಕ್ತೆ ರೇಣುಕಾ ಇದ್ದರು.