ಹೋಳಿ ಆಚರಣೆಗೆ ದಾವಣಗೆರೆ ಸಿಂಗಾರ

ಹೋಳಿ ಹಬ್ಬದಂಗವಾಗಿ ಬಣ್ಣದ ಬಟ್ಟೆಯಿಂದ ಸಿಂಗಾರಗೊಂಡ ದಾವಣಗೆರೆಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ.
ಹೋಳಿ ಹಬ್ಬದಂಗವಾಗಿ ಬಣ್ಣದ ಬಟ್ಟೆಯಿಂದ ಸಿಂಗಾರಗೊಂಡ ದಾವಣಗೆರೆಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ.
Published on

ಪ್ರಮುಖ ಮುಖ್ಯಾಂಶಗಳು

  • ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಆಕರ್ಷಣೆ
  • ಬಣ್ಣದ ಬಟ್ಟೆಗಳ ಕಮಾನು, ನೆರಳಿನಾಸರೆ
  • ಡಿಜೆಗಳ ಸದ್ದು, ರೇನ್ ಡಾನ್ಸ್‌ಗೆ ಸಿದ್ಧತೆ
ದಾವಣಗೆರೆ: ಬುಧವಾರ ನಡೆಯಲಿರುವ ಹೋಳಿ ಹಬ್ಬದ ಆಚರಣೆಗೆ ನಗರ ರಂಗಾಗಿದೆ. ವೈವಿಧ್ಯಮಯ ಬಣ್ಣದ ಬಟ್ಟೆಗಳಿಂದ ಕಮಾನಿನ ರೂಪದಲ್ಲಿ ಸಿಂಗಾರಗೊಂಡ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ ಹೋಳಿಪ್ರಿಯರನ್ನು ಆಕರ್ಷಿಸುತ್ತಿದೆ.
ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿದೆ. ಹೀಗಾಗಿ ಓಕಳಿಗೆ ಬರುವ ಜನರಿಗೆ ನೆರಳಿನ ವ್ಯವಸ್ಥೆಯಾಗಿ ರಾಂ ಆ್ಯಂಡ್ ಕೋ ಗೆಳೆಯರ ಬಳಗದಿಂದ ವೃತ್ತದ ಸುತ್ತಲ ರಸ್ತೆಗಳಲ್ಲಿ ಅನತಿ ದೂರವರೆಗೆ ಹಲವಾರು ಬಣ್ಣಗಳ ಮಿಶ್ರಿತ ಬಟ್ಟೆಯನ್ನು ಶಾಮಿಯಾನ ರೂಪದಲ್ಲಿ ಅಳವಡಿಸಲಾಗಿದೆ.
ಪುರುಷರು-ಮಹಿಳೆಯರಿಗೆ ಪ್ರತ್ಯೇಕವಾಗಿ ರೇನ್ ಡಾನ್ಸ್‌ಗಾಗಿ ವ್ಯವಸ್ಥೆ ಮಾಡಲಾಗಿದೆ. ಗಣೇಶ ಹಬ್ಬದಲ್ಲಿ ಮಾಯವಾಗಿದ್ದ ಡಿಜೆಗಳು ಹೋಳಿಯಲ್ಲಿ ಮತ್ತೆ ಸದ್ದು ಮಾಡಲಿವೆ. ಒಂದೆಡೆ ಸೆಲ್ಫಿ ಸ್ಟಾೃಂಡ್ ಅಳವಡಿಸಲಾಗಿದೆ. ವೃತ್ತದ ಮಧ್ಯೆ ಕಬ್ಬಿನ ಬಿಲ್ಲು, ಹೂಬಾಣ ಹಿಡಿದ ಮನ್ಮಥನ ಚಿತ್ರ ಕೂಡ ಸಿದ್ಧವಾಗಿದೆ.
ಪ್ರತಿವರ್ಷದಂತೆ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ಮಾಡಲಾಗಿದೆ. ಹಿಂದಿನ ಬಾರಿ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಮೆಲ್ಭಾಗದಲ್ಲಿ ವಿದ್ಯುತ್ ತಂತಿಗಳು ಹೆಚ್ಚಿದ್ದವು. ಈ ಬಾರಿ ಅನಗತ್ಯ ತಂತಿಗಳನ್ನು ತೆಗೆದು ಮುಖ್ಯ ಮಾರ್ಗ ಮಾತ್ರ ಉಳಿಸಿಕೊಳ್ಳಲಾಗಿದೆ. ಇದೂ ಸಹ ಹಬ್ಬದಾಚರಣೆಗೆ ಅನುಕೂಲ ಮಾಡಿಕೊಡಲಿದೆ ಎಂದು ರಾಂ ಅ್ಯಂಡ್ ಕೋ ಗೆಳೆಯರ ಬಳಗದ ಅಧ್ಯಕ್ಷ ನಾಗೇಂದ್ರ ರೆಡ್ಡಿ ತಿಳಿಸಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್‌ನ ಏಳನೇ ಮುಖ್ಯ ರಸ್ತೆಯಲ್ಲಿಯೂ ಆಸಕ್ತರು ಇದೇ ಮಾದರಿಯಲ್ಲಿ ಬಣ್ಣಗಳ ಬಟ್ಟೆಗಳ ಕಮಾನು ಹಾಗೂ ನೆರಳಿನ ಆಸರೆ ಕಲ್ಪಿಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಮಾರುಕಟ್ಟೆಗಳಲ್ಲಿ ಹರ್ಬಲ್ ಪೌಡರ್‌ಗಳೂ ಸೇರಿದಂತೆ ವಿವಿಧ ಬಣ್ಣದ ಪುಡಿಗಳ ಸ್ಯಾಚೆಗಳು, ಮಕ್ಕಳಿಗಾಗಿ ಪಿಚಕಾರಿ, ಬಣ್ಣದ ಗನ್‌ಗಳ ಮಾರಾಟ ಕೂಡ ಜೋರಾಗಿದೆ.
* ಓಕಳಿಪ್ರಿಯರಿಗೆ ಪೊಲೀಸ್ ಇಲಾಖೆ ಸೂಚನೆ
ಮಾ.3ರಂದು ಕಾಮದಹನ, 4ರಂದು ಹೋಳಿ ಹಬ್ಬದ ಆಚರಣೆೆ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಕೆಲವು ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಪಿಯು ಇತರೆ ಪರೀಕ್ಷಾರ್ಥಿಗಳ ಮೇಲೆ, ಬೇರೊಂದು ಹಾಸ್ಟೆಲ್‌ಗೆ ತೆರಳಿ ವಿದ್ಯಾರ್ಥಿನಿಯರ ಮೇಲೆ, ಪ್ರಯಾಂಣಿಕರು, ನೌಕರರು, ಶಾಲಾ ಮಕ್ಕಳ ಮೇಲೆ ಬಣ್ಣ ಎರಚಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್, ಗಾಣದ ಎಣ್ಣೆ, ಮೊಟ್ಟೆ ಹಾಗೂ ಅಪಾಯಕಾರಿ ರಾಸಾಯನಿಕ ಮಿಶ್ರಣ ಎರಚುವುದು ನಿಷಿದ್ಧ.
ಚರ್ಚ್, ಮಸೀದಿ, ದರ್ಗಾ ಮತ್ತು ದೇವಾಲಯಗಳಿಗೆ ಬಣ್ಣ ಎರಚುವಂತಿಲ್ಲ. ಪ್ರಚೋದನಾಕಾರಿ ಅವಹೇಳನಕಾರಿ ಭಿತ್ತಿಪತ್ರ ಪ್ರದರ್ಶನ, ವದಂತಿ ಹರಿಬಿಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ-ವ್ಯಕ್ತಿ ವಿರುದ್ಧದ ಹೇಳಿಕೆ ಹಾಕಿದ್ದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನುಕ್ರಮ ವಹಿಸಲಾಗುವುದು.
ಹಬ್ಬದ ಹೆಸರಲ್ಲಿ ಬಲವಂತದ ಚಂದಾ ವಸೂಲಿಗೆ ಅವಕಾಶವಿಲ್ಲ. ಸಾರ್ವಜನಿಕ ನೀರು ಸರಬರಾಜು ಸ್ಥಳಗಳನ್ನು ಮಲಿನ ಮಾಡುವಂತಿಲ್ಲ. ತ್ರಿಬಲ್ ರೈಡಿಂಗ್, ಬೈಕ್ ವ್ಹೀಲಿಂಗ್ ಮಾಡುವುದು ಹಾಗೂ ವಾಹನದ ಸೈಲೆನ್ಸರ್‌ಗಳನ್ನು ತೆಗೆದು ಕರ್ಕಶ ಶಬ್ಧ ಉಂಟು ಮಾಡಿದಲ್ಲಿ ನಂಬರ್ ಪ್ಲೇಟ್ ಕಾಣದಂತೆ ಬಟ್ಟೆ ಕಟ್ಟಿದಲ್ಲಿ ಕಾನೂನು ಕ್ರಮವಾಗಲಿದೆ.
ಆಯೋಜಕರು ಧ್ವನಿವರ್ಧಕ ಅಳವಡಿಕೆಗೆ ಅನುಮತಿ ಪಡೆದು ನಿಯಮ ಪಾಲಿಸಬೇಕು. ಮೈ ಮೇಲಿನ ಬಟ್ಟೆಗಳನ್ನು ಹರಿದುಕೊಂಡು ಸಾರ್ವಜನಿಕವಾಗಿ ಅಸಹ್ಯವಾಗಿ ನೃತ್ಯ ಮಾಡಿದಲ್ಲಿ, ಬಣ್ಣ ಎರಚುವ ನೆಪದಲ್ಲಿ ಮಹಿಳೆಯರ ಜತೆ ಅಸಭ್ಯ ವರ್ತನೆ, ಚುಡಾಯಿಸಿದಲ್ಲಿ ಹಾಗೂ ಪಾನಮತ್ತರಾಗಿ, ಅತಿವೇಗ ಅಪಾಯಕಾರಿಯಾಗಿ ವಾಹನ ಚಲಾಯಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್.ಟಿ. ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net