ದುಗ್ಗಮ್ಮನ ಜಾತ್ರೆಗೆ ಸಾಂಸ್ಕೃತಿಕ ರಸದೂಟ

ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮಹಾಮಂಟಪ.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮಹಾಮಂಟಪ.
Published on

ಪ್ರಮುಖ ಮುಖ್ಯಾಂಶಗಳು

  • ಸಾನ್ವಿ ಶೆಟ್ಟಿ, ದ್ಯಾಮೇಶ್, ರಮೇಶ್ ಲಮಾಣಿ ಆಕರ್ಷಣೆ
  • ಹದಿಮೂರು ದಿನ ಹಾಡು, ನೃತ್ಯ, ನಾಟಕದ ಸುಗ್ಗಿ
  • ದಾವಣಗೆರೆ ಸುತ್ತಮುತ್ತಲಿನ ಜನರಿಗೆ ರಸದೌತಣ
ದಾವಣಗೆರೆ: ದಾವಣಗೆರೆ ದುಗ್ಗಮ್ಮ ರಾಜ್ಯಕ್ಕೆ ಹೆಸರುವಾಸಿ. ಹೀಗಾಗಿ ಅಮ್ಮನ ಜಾತ್ರೆಗೆ ನಾಡಿನ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರ ಸಮಾಗಮವಾಗಲಿದೆ. ದೂರದೂರಿನ ಸಂಬಂಧಿಕರು ಭಕ್ತಿ ಸಲ್ಲಿಸಿ ಸಿಹಿಖಾದ್ಯ, ಬಾಡೂಟ ಸವಿಯುತ್ತಾರೆ.
ಜಾತ್ರೆ ಇಷ್ಟಕ್ಕೆ ಮುಗಿಯುವುದಿಲ್ಲ. ಇತ್ತೀಚೆಗಷ್ಟೇ ನಾಲ್ಕು ದಿನಗಳ ಟಗರು ಕಾಳಗ ನೋಡುಗರ ಹಣ್ಣಿಗೆ ಹಬ್ಬ ನೀಡಿದೆ. ಶುಕ್ರವಾರದಿಂದ ಬೀರಲಿಂಗೇಶ್ವರ ದೇವಸ್ಥಾನದ ಅಖಾಡದಲ್ಲಿ ಕುಸ್ತಿಯಾಟದ ರಸದೌತಣವಿದೆ. ಹೆಂಗಳೆಯರು ಬಳೆ ಖರೀದಿಸುವ ಜತೆಗೆ ಜಾತ್ರೆಯ ಸಾಮಗ್ರಿಗಳನ್ನು ಕೊಳ್ಳುವ ಸಡಗರದಲ್ಲಿ ಮುಳುಗುತ್ತಾರೆ.
ಉತ್ಸವಕ್ಕೆ ಬರುವ ಜನರ ಮನಸ್ಸು ತಣಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ ಇಲ್ಲಿ ಕಾಣಸಿಗಲಿದೆ. ಫೆ. 26ರಿಂದ ಮಾ. 10ರವರೆಗೆ ಹದಿಮೂರು ದಿನಗಳವರೆಗೆ ದೇವಸ್ಥಾನದ ಪ್ರಾಂಗಣದಲ್ಲಿ ನಿತ್ಯ ಸಂಜೆ ಭಜನೆ, ಹಾಡು, ನೃತ್ಯಗಳು,ನಾಟಕ, ವಿವಿಧೆಡೆಯ ಆರ್ಕೆಸ್ಟ್ರಾ ತಂಡಗಳ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಲಿವೆ.
ಫೆ. 26ಕ್ಕೆ ಅಂಬಾಭವಾನಿ ಭಜನಾ ಮಂಡಳಿಯಿಂದ ಭಕ್ತಿಗೀತೆ, ಲಲಿತ ಸಹಸ್ರನಾಮ, ಕೊಪ್ಪದ ರಿದಂ ಆರ್ಕೆಸ್ಟ್ರಾದ ರಸಮಂಜರಿ ಇರಲಿದೆ. 27ರಂದು ಡಿಸಿಎಂ ಟೌನ್‌ಶಿಫ್‌ನ ವಾಸವಿ ಯುವತಿಯರ ಭಜನಾ ಮಂಡಳಿಯಿಂದ ಭಜನೆ ಮೊಳಗಲಿದೆ. ನಂತರ ಹಾನಗಲ್‌ನ ಕಾಶಿಂ ಇವೆಂಟ್ಸ್ ತಂಡದ ರಸಮಂಜರಿ ನಡೆಯಲಿದೆ.
ಫೆ. 28ರಂದು ಯೋಗರಾಜು ಅಯಗ್ರೀವ ದೈವಜ್ಞ ಯುವ ವೇದಿಕೆ ಕಲಾವಿದರು ಭರತನಾಟ್ಯ ಮತ್ತು ಕಥಕ್ ನೃತ್ಯ ಪ್ರದರ್ಶಿಸಲಿದ್ದಾರೆ. ಸಾಗರದ ಸ್ವರಾಂಜಲಿ ಆರ್ಕೆಸ್ಟ್ರಾ ತಂಡದಿಂದ ಸುಗಮಸಂಗೀತ ನಡೆಯಲಿದ್ದು ಸರಿಗಮಪ ಖ್ಯಾತಿಯ ಗಾಯಕಿ ಸಾನ್ವಿ ಶೆಟ್ಟಿ ಆಕರ್ಷಣೆ ಇದೆ.
ಮಾ.1ಕ್ಕೆ ಆನಂದ ಪಾಟೀಲ್ ಜಾನಪದ ಗೀತೆಗಳಿಂದ ರಂಜಿಸಲಿದ್ದಾರೆ. ಸ್ಕಂದ ಇವೆಂಟ್ಸ್ (ಹರ್ಷವರ್ಧನ್ ತಂಡ)ನಿಂದ ರಸಮಂಜರಿ ಸೊಬಗಿದೆ. ಮಾ. 2ರಂದು ನಗರದ ಭಟ್ಟಿ ಡಾನ್ಸ್ ಅವರಿಂದ ನೃತ್ಯ ರಂಜನೆ, ಭಟ್ಕಳದ ಚಂದ್ರಕಾಂತ ಶೆಣೈ ತಂಡದ ಆರ್ಕೆಸ್ಟ್ರಾ ನಡೆಯಲಿದೆ.
ಮಾ. 3ಕ್ಕೆ ದುರ್ಗಾಂಬಿಕಾ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಬೆಳವನೂರು ಹಾಲೇಶ್ ಮತ್ತು ಅನು ನೇತೃತ್ವದ ದಯಾನಂದ ಮೆಲೋಡಿಸ್ ತಂಡದ ರಸಮಂಜರಿ ನಿಗದಿಯಾಗಿದೆ. ಮಾ.4ರಂದು ನಮನ ಅಕಾಡೆಮಿ ತಂಡ ಕಲಾವಿದೆಯರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿತವಾಗಲಿದೆ. ಗಣೇಶ್ ಅವರ ಬಾಲಾಜಿ ಮೆಲೋಡಿಸ್‌ನಿಂದ ಆರ್ಕೆಸ್ಟ್ರಾ ಇದೆ.
ಮಾ. 5ಕ್ಕೆ ದಾವಣಗೆರೆಯ ಪರಶುರಾಂ ಮತ್ತು ಸಂಗಡಿಗರಿಂದ ಸಂಗೀತ ಗಾಯನವಿದೆ. ಶಿಗ್ಗಾಂವ್‌ನ ಗುರುನಾಥ ತಂಡ ಜಾನಪದ ಗೀತೆಗಳನ್ನು ಉಣಬಡಿಸಲಿದೆ. ಮಾ.6ಕ್ಕೆ ಆಯಿಷಾ ಅವರ ಡಿಕೆಡಿ ತಂಡದಿಂದ ನೃತ್ಯಪ್ರದರ್ಶನವಿದೆ. ಕೆಂಗಲ್ ಹನುಮಂತರಾಯ ರಚಿತ ರಕ್ತರಾತ್ರಿ ಅರ್ಥಾತ್ ವೀರ ಅಶ್ವತ್ಥಾಮ ಸಾಮಾಜಿಕ ನಾಟಕವನ್ನು ಭೈರವಲಿಂಗೇಶ್ವರ ಕಲಾ ತಂಡ ಸಾದರಪಡಿಸಲಿದೆ. ಸಿಪಿಐ ಜಿ.ಬಿ. ಉಮೇಶ್ ದುರ್ಯೋಧನ ಪಾತ್ರದಲ್ಲಿ ರಂಜಿಸಲಿದ್ದಾರೆ.
ಮಾ.7ರಂದು ಅಪ್ಪು ಡಾನ್ಸ್ ಗ್ರೂಪ್‌ನಿಂದ ನೃತ್ಯವಿದೆ. ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಕಲಾ ತಂಡದಿಂದ ವೀರಗಾಸೆ-ಕಂಸಾಳೆ ನೃತ್ಯದ ಆಕರ್ಷಣೆ ಇದೆ. ಚಂದನ ತಂಡದಿಂದ ರಸಮಂಜರಿ ನಡೆಯಲಿದೆ. ಮಾ.8ಕ್ಕೆ ಚೌಡೇಶ್ವರಿ ಭಜನಾ ಮಂಡಳಿ ಭಜನೆಗೀತೆಗಳನ್ನು ಪ್ರಸ್ತುತಪಡಿಸಲಿದೆ. ವರುಣ ಮೆಲೋಡಿಸ್ ತಂಡದ ಆರ್ಕೆಸ್ಟ್ರಾ ಇದೆ. ಸರಿಗಮಪ ಖ್ಯಾತಿಯ ಗಾಯಕರಾದ ದ್ಯಾಮೇಶ್, ರಮೇಶ್ ಲಮಾಣಿ ರಂಜಿಸುವರು.
ಮಾ.9ಕ್ಕೆ ಗಣೇಶ್ ತಂಡದಿಂದ ಬ್ಯಾಂಡ್ ವಾದನವಿದೆ. ಕೆರೆಬಿಳಚಿಯ ಸಪ್ತಸ್ವರ ಇವೆಂಟ್ಸ್‌ನಿಂದ ರಸಮಂಜರಿ ನಡೆಯಲಿದೆ. ಮಾ. 10ರಂದು ಪುತ್ತೂರಿನ ಜಗದೀಶ್ ಆಚಾರ್ಯ ಕಲಾ ತಂಡದಿಂದ ಸುಗಮ ಸಂಗೀತ ಸುಧೆ ಹರಿಯಲಿದೆ.
ವಿನೋಬನಗರದಲ್ಲೂ ರಸಮಂಜರಿ ಹಬ್ಬ
ನಗರದ ವಿನೋಬನಗರದ ಚೌಡೇಶ್ವರಿ ದೇವಿ ಜಾತ್ರೆ ಕೂಡ ಒಟ್ಟೊಟ್ಟಿಗೆ ನಡೆಯುತ್ತಿದ್ದು, ಈ ಭಾಗದ ಜನರಿಗಾಗಿ ಫೆ. 26ರಿಂದ ಆರು ದಿನಗಳ ಕಾಲ ನಿತ್ಯ ಸಂಜೆ 6-30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
26ರಂದು ತುಮಕೂರಿನ ಅಜಯ್ ಮೆಲೋಡಿಸ್, 27ಕ್ಕೆ ಸಾಧನಾ ಮೆಲೋಡಿಸ್ ತಂಡದ ರಸಮಂಜರಿ ಇರಲಿದೆ. 28ರಂದು ದಾವಣಗೆರೆಯ ಭಾರತಿ ಆರ್ಕೆಸ್ಟ್ರಾ ತಂಡ, ಮಾ. 1ಕ್ಕೆ ಬೆಂಗಳೂರಿನ ಜಾನೂ ಮೆಲೋಡಿಸ್ ಇವೆಂಟ್ಸ್, ಮಾ.2ಕ್ಕೆ ವಾಯುಪುತ್ರ ಸ್ವಾಕೃತಕ ಸೇವಾ ಸಂಘ ಹಾಗೂ ಮಾ.3ರಂದು ಫ್ರೆಂಡ್ಸ್ ಮೆಲೊಡಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಪ್ರದರ್ಶಿತವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net