ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

ದಾವಣಗೆರೆಯಲ್ಲಿ ‘ನಭೋ ಮಂಡಲದಲ್ಲಿ ತಾರೆಗಳ ಹುಡುಕಾಟ’ ಕೃತಿಯನ್ನು ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಬಿಡುಗಡೆ ಮಾಡಿದರು. ಡಾ.ಎಸ್. ಶಿಶುಪಾಲ, ಪ್ರೊ.ಎಂ.ಆರ್. ನಾಗರಾಜ್, ಡಾ.ಎಚ್.ವಿ. ವಾಮದೇವಪ್ಪ, ಎಂ.ಟಿ. ಶರಣಪ್ಪ, ಡಾ.ಟಿ. ವಸಂತನಾಯ್ಕ, ಡಾ. ಶಿವಕುಮಾರಸ್ವಾಮಿ, ಡಾ.ಎಂ.ಆರ್. ಜಗದೀಶ್, ಎಂ. ಗುರುಸಿದ್ದಸ್ವಾಮಿ ಇದ್ದರು.
ದಾವಣಗೆರೆಯಲ್ಲಿ ‘ನಭೋ ಮಂಡಲದಲ್ಲಿ ತಾರೆಗಳ ಹುಡುಕಾಟ’ ಕೃತಿಯನ್ನು ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಬಿಡುಗಡೆ ಮಾಡಿದರು. ಡಾ.ಎಸ್. ಶಿಶುಪಾಲ, ಪ್ರೊ.ಎಂ.ಆರ್. ನಾಗರಾಜ್, ಡಾ.ಎಚ್.ವಿ. ವಾಮದೇವಪ್ಪ, ಎಂ.ಟಿ. ಶರಣಪ್ಪ, ಡಾ.ಟಿ. ವಸಂತನಾಯ್ಕ, ಡಾ. ಶಿವಕುಮಾರಸ್ವಾಮಿ, ಡಾ.ಎಂ.ಆರ್. ಜಗದೀಶ್, ಎಂ. ಗುರುಸಿದ್ದಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ವಿವಿ ಕುಲಪತಿ ರಂಗಸ್ವಾಮಿ ಸಲಹೆ
  • ಕೃತಿ ಬಿಡುಗಡೆ ಕಾರ್ಯಕ್ರಮ
ದಾವಣಗೆರೆ : ತಂತ್ರಜ್ಞಾನದ ಪ್ರಗತಿಯಿಂದಾಗಿ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಸಿಗುತ್ತಿದೆ. ಆದರೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಸಲಹೆ ನೀಡಿದರು.
ಕೊಂಡ್ಲಹಳ್ಳಿಯ ಎಂ.ಆರ್.ಟಿ. ಪ್ರಕಾಶನ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ, ನಿವೃತ್ತ ಮುಖ್ಯ ಶಿಕ್ಷಕ ಎಂ.ಟಿ. ಶರಣಪ್ಪ ಅವರ ‘ನಭೋ ಮಂಡಲದಲ್ಲಿ ತಾರೆಗಳ ಹುಡುಕಾಟ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪುಸ್ತಕಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೃತಿಯ ಲೇಖಕ ಎಂ.ಟಿ. ಶರಣಪ್ಪ ಅವರು ಟೆಲಿಸ್ಕೋಪ್ ಹಿಡಿದು ಹಳ್ಳಿ ಹಳ್ಳಿಗೆ ತಿರುಗಿ ಜನರಿಗೆ ವಿಜ್ಞಾನದ ಅರಿವು ಮೂಡಿಸಿದ್ದಾರೆ. ಆಕಾಶದ ಅದ್ಭುತಗಳನ್ನು, ನಭೋ ಮಂಡಲದಲ್ಲಿ ನಡೆಯುವ ಗ್ರಹಣ, ನಕ್ಷತ್ರಗಳು, ಗ್ರಹಗಳ ಕುರಿತು ತಿಳಿವಳಿಕೆ ನೀಡಿದ್ದಾರೆ. ವಿಜ್ಞಾನ ಕಷ್ಟದ ವಿಷಯವಲ್ಲ ಎಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ತುಂಬಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್. ನಾಗರಾಜ್, ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ, ಕೃತಿಯ ಲೇಖಕ ಎಂ.ಟಿ. ಶರಣಪ್ಪ, ಧ.ರಾ.ಮ. ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ.ಟಿ. ವಸಂತನಾಯ್ಕ, ಪ್ರಾಧ್ಯಾಪಕರಾದ ಡಾ. ಶಿವಕುಮಾರಸ್ವಾಮಿ, ಡಾ.ಎಂ.ಆರ್. ಜಗದೀಶ್ ಇದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ ಘಟಕದ ನಿಕಟಪೂರ್ವ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಸ್ವಾಗತಿಸಿದರು. ಪ್ರಿಯಾಂಕಾ ಪ್ರಾರ್ಥಿಸಿದರು.
ವಿದ್ಯಾರ್ಥಿಗಳು ತಲೆಯಲ್ಲಿ ಕುತೂಹಲದ ಹುಳ ಬಿಟ್ಟುಕೊಂಡು ವಿಜ್ಞಾನದ ಬಗ್ಗೆ ಹೆಚ್ಚು ಸಂಗತಿಗಳನ್ನು ತಿಳಿದುಕೊಳ್ಳಬೇಕು ಎಂದು ದಾವಣಗೆರೆ ವಿವಿ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥ ಡಾ.ಎಸ್. ಶಿಶುಪಾಲ ಹೇಳಿದರು.
ವೀಕ್ಷಣೆ ಮತ್ತು ಪ್ರಯೋಗಶೀಲತೆಯ ಮೂಲಕ ಸತ್ಯಾನ್ವೇಷಣೆ ಮಾಡುವುದು ವಿಜ್ಞಾನದ ಲಕ್ಷಣ. ಪ್ರಶ್ನೆಗಳನ್ನು ಕೇಳುವುದರಿಂದ ಹೆಚ್ಚು ಜ್ಞಾನವನ್ನು ಪಡೆಯಬಹುದು. ಆಕಾಶದಲ್ಲಿ ನಡೆಯುವ ಕೌತುಕಗಳು, ನಕ್ಷತ್ರಗಳ ಲೋಕ, ಸೂರ್ಯನ ಅಗಾಧ ಶಕ್ತಿಯ ಕುರಿತು ತಿಳಿದುಕೊಳ್ಳಬೇಕು ಎಂದರು.
ಜ್ಯೋತಿಷ್ಯಶಾಸ್ತ್ರ, ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ ವಿಷಯಗಳ ವಿಶೇಷತೆಗಳನ್ನು ಬಿಡಿಸಿಟ್ಟರು. ಆರ್ಯಭಟ, ಗೆಲಿಲಿಯೋರಿಂದ ಹಿಡಿದು ನಾಸಾ ಸಂಸ್ಥೆಯ ವರೆಗೆ ನಡೆಯುತ್ತ ಬಂದಿರುವ ಸಂಶೋಧನೆಯ ಕುರಿತು ತಿಳಿಸಿಕೊಟ್ಟರು. ವಿಜ್ಞಾನದ ಬಗ್ಗೆ ಸಾಹಿತಿ ಪಾ.ವೆಂ. ಆಚಾರ್ಯರು ಬರೆದ ಸಾಲುಗಳನ್ನು ಉದಾಹರಿಸಿದರು.
"

ಆರ್ಯಭಟನ ಕಾಲದಿಂದಲೂ ಭಾರತದಲ್ಲಿ ಖಗೋಳಶಾಸ್ತ್ರದ ಬಗ್ಗೆ ಸಂಶೋಧನೆಗಳಾಗಿವೆ. ಭೂಮಿಯ ಚಲನೆ, ಬದುಕಿನ ಮೇಲೆ ಗ್ರಹಗಳ ಪ್ರಭಾವದಂಥ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವಿಜ್ಞಾನ ವಿಷಯದ ಬಗ್ಗೆ ಹೆಚ್ಚು ಪುಸ್ತಕಗಳು ಪ್ರಕಟವಾಗಬೇಕು.

— ಪ್ರೊ. ವೈ. ವೃಷಭೇಂದ್ರಪ್ಪ, ಬಿಐಇಟಿ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net