ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಯೋಗದಲ್ಲಿ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಲಾ ಝೇಂಕಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಡಿ.ಆರ್. ರಾಜಪ್ಪ, ಬಿ. ವಾಮದೇವಪ್ಪ, ರವಿಚಂದ್ರ, ಎನ್. ನರೇಂದ್ರಬಾಬು, ರಾಜು ಎಮ್ಮಿಗನೂರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೂಲೆಗುಂಪು ಆಗುತ್ತಿರುವ ಸಂಗೀತ ಕಲಾವಿದರು
ಅಕಾಡೆಮಿ ಸದಸ್ಯ ಡಿ.ಆರ್. ರಾಜಪ್ಪ ಆತಂಕ
ದಾವಣಗೆರೆಯಲ್ಲಿ ಕಲಾ ಝೇಂಕಾರ ಕಾರ್ಯಕ್ರಮ
ದಾವಣಗೆರೆ: ಇಂದಿನ ಯುವ ಸಮುದಾಯಕ್ಕೆ ಸಾಹಿತ್ಯ-ಸಂಸ್ಕೃತಿ, ಹಾಡು-ಅಭಿನಯ, ನೃತ್ಯ ಕಲೆಗಳನ್ನು ಪಸರಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ತಲೆಮಾರು ಕ್ರೌರ್ಯದ ಜತೆಗೇ ಬದುಕಬೇಕಾದೀತು ಎಂದು ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯ ಡಿ.ಆರ್. ರಾಜಪ್ಪ ಆತಂಕ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಲಾ ಝೇಂಕಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಕಲಾವಿದನಲ್ಲಿನ ಧ್ವನಿ, ಪ್ರತಿಭೆ ಸ್ವಂತದ್ದಲ್ಲ. ಅದನ್ನು ಸಮಾಜಕ್ಕೆ ಮೀಸಲಿಡಬೇಕು. ಇಂದಿನ ಸಮುದಾಯಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡದೆ ಹೋದಲ್ಲಿ ಸಮಾಜದಲ್ಲಿ ಕ್ರೌರ್ಯ ಹೆಚ್ಚಲು ಕಾರಣವಾಗಲಿದೆ. ಹಾಗಾಗಿ ಹಳ್ಳಿ ಹಳ್ಳಿಗಳಿಗೂ ಸಾಂಸ್ಕೃತಿಕ ಪರಂಪರೆ ತಲುಪಿಸಬೇಕಿದೆ ಎಂದರು.
ನನ್ನ ತಂದೆ ನನಗೆ ಸಂಗೀತ ಕಲಿಸಲಿಲ್ಲ. ಆದರೂ ನನ್ನ ಕಂಠದ ಲಾಭದ ಪಡೆದು ಜಾನಪದ, ತತ್ವಪದಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ವಿದುರಾಶ್ವತ್ಥದಿಂದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸಾಕ್ಷರತಾ ಅಭಿಯಾನ ನಡೆಸಿದ್ದೇನೆ ಎಂದು ಹೇಳಿಕೊಂಡರು.
ಪಂಡಿತ ಪುಟ್ಟರಾಜ ಗವಾಯಿಗಳು ಅನೇಕ ಅಂಧ ಮಕ್ಕಳಿಗೆ ಸಂಗೀತದ ಕಣ್ಣು ನೀಡಿದ ಮಾಂತ್ರಿಕ. ನಮ್ಮೊಳಗೆ ಅದ್ಭುತ ಪರಂಪರೆ ಇದ್ದಾಗ್ಯೂ ನಮ್ಮ ಮನಸ್ಸು, ಕೈಗಳು ಮೊಬೈಲ್ ದಾಸ್ಯತೆ ಹೆಚ್ಚಿದೆ. ಇದರಿಂದ ಹೊರಬರಬೇಕಿದೆ ಎಂದರು.
ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯಲ್ಲಿ ಹಣ ಕಡಿಮೆ. ಹೀಗಾಗಿ ಬೇರೆ ಬೇರೆ ಚಳವಳಿಗಳಿಂದ ಬಂದ ಸ್ನೇಹಿತರೇ ಸೇರಿ ವಿವಿಧೆಡೆ ಸಾಹಿತ್ಯ ಸಂಗೀತ ಕಲೆಗಳ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ.
ಎರಡು ಹಾಡು ಕಲಿತ ಮಾತ್ರಕ್ಕೆ ರಿಯಾಲಿಟಿ ಶೋಗಳಲ್ಲಿ ಹೀರೋ ಆಗಿ ಮೆರೆಯುತ್ತಿದ್ದಾರೆ. ಪಕ್ಕಾ ವಾದ್ಯಗಳೂ ಇಲ್ಲದೆ ಕೇವಲ ಕರೋಕೆ ಹಾಡುವ ದೊಡ್ಡವರೂ ಇದ್ದಾರೆ. ತಲಾ ಒಂದು ಕಾರ್ಯಕ್ರಮಕ್ಕೆ 70 ಲಕ್ಷ ರೂ. ಪಡೆಯುವವರೂ ಇದ್ದಾರೆ.
ಆದರೆ, ಎಲ್ಲವನ್ನೂ ತ್ಯಾಗ ಮಾಡಿ ವರ್ಷಪೂರ್ತಿ ಸಂಗೀತ ಕಲಿತ ಕಲಾವಿದರು ಮೂಲೆಗುಂಪು ಆಗುತ್ತಿದ್ದಾರೆ. ಅಂಥವರಿಗೆ ವೇದಿಕೆಗೆ ಕರೆತಂದು ಕಾರ್ಯಕ್ರಮ ಕೊಡಿಸುವುದು ಅಕಾಡೆಮಿ ಕೆಲಸವಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ದೇಶದ ವಿವಿಧ ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಹಾಡಿದ ಸಂಗೀತ ಶಾರದೆ ಎಸ್. ಜಾನಕಿ ಅಮ್ಮ ದೊಡ್ಡ ಕಲಾವಿದೆಯಾಗಿಯೂ ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದರು. ಮೂಲತಃ ಆಂಧ್ರದವರಾಗಿದ್ದ ಜಾನಕಿ ಅವರು ಕರ್ನಾಟಕದ ವಿ.ರಾಮಪ್ರಸಾದ್ ಎಂಬುವರನ್ನು ಮದುವೆಯಾಗಿ, ಇದೇ ನೆಲದಲ್ಲೇ ಅಂತ್ಯಕ್ರಿಯೆ ಆಗಲು ಬಯಸಿದ್ದರು. ಅವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ ಸಂಗೀತ ಮತ್ತು ನೃತ್ಯ ಎರಡೂ ಕೂಡ ಭಕ್ತಿ ಮಾರ್ಗದ ಎರಡು ವಿಧಗಳು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರ ಪ್ರಮಾಣ ಚಿಕ್ಕದಿದ್ದರೂ ಗುಣಮಟ್ಟ ದೊಡ್ಡದು. ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಆದರೆ ಕೆಲವು ಬಾರಿ ಆಡಳಿತಾತ್ಮಕವಾಗಿ ವಿಳಂಬ ಆಗಿರಬಹುದು ಎಂದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ನರೇಂದ್ರಬಾಬು ಮಾತನಾಡಿ ಕಲಾವಿದರು ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಕುರಿತಂತೆ ಸಂಶಯಗಳಿದ್ದಲ್ಲಿ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದಯು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ಪ್ರಾರ್ಥನೆ ಹಾಡಿದರು. ಅಕಾಡೆಮಿ ಸದಸ್ಯ ಪ.ದ.ದೇವರಾಜು ಸ್ವಾಗತಿಸಿದರು. ರಮೇಶ್ ಕಮತಗಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಸಂಚಾಲಕ ರಾಜು ಎಮ್ಮಿಗನೂರು ವಂದಿಸಿದರು.
ಸಾಂಸ್ಕೃತಿಕ ರಂಜನೆ
ಭಾನುವಾರವೂ ತುಂಬಿದ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಮಂಜು ಭಜಂತ್ರಿ ಶಹನಾಯಿ ವಾದನದೊಂದಿಗೆ ಬೇರೆ ಲೋಕಕ್ಕೆ ಕರೆದೊಯ್ದರು. ಸುರೇಶ್‌ಕುಮಾರ ಹಡಪದ ತಂಡದಿಂದ ತಬಲಾ ವಾದನ ಗಮನ ಸೆಳೆಯಿತು.
ಮಮತಾ ಮಾಗಳ ತಂಡದಿಂದ ದಾಸವಾಣಿ, ಡಿ.ಒ. ಮುರಾರ್ಜಿ ತಂಡದ ಸುಗಮ ಸಂಗೀತ, ಎಂ.ಕೆ. ರೇವಣಸಿದ್ದಪ್ಪ ತಂಡದಿಂದ ವಚನ ಗಾಯನ, ಆನಂದ ಪಾಟೀಲ್ ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮುದ ನೀಡಿದವು. ಶೇಷಪ್ಪ ಬಡ್ಡಿ ಅವರ ತಂಡದ ಭರತನಾಟ್ಯ ಕಣ್ಮನ ತಣಿಸಿತು.