ದಾವಣಗೆರೆಯಲ್ಲಿ ಸೋಮವಾರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಚ್.ಬಿ. ಮಂಜಪ್ಪ, ಡಿ. ಬಸವರಾಜ್, ದಿನೇಶ್ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಅನಿತಾಬಾಯಿ, ಎ. ನಾಗರಾಜ್, ಮುದೇಗೌಡ್ರ ಗಿರೀಶ್, ಖಾಲಿದ್ ಅಹಮದ್, ಎಲ್.ಎಂ.ಎಚ್. ಸಾಗರ್ ಇದ್ದರು.
ದಾವಣಗೆರೆ :ಕೇಂದ್ರ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಅಡುಗೆ ಅನಿಲ ಸಿಲಿಂಡರ್ ಚಿತ್ರವಿರುವ ಫಲಕಗಳನ್ನು ಹಿಡಿದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಡವರ, ಕಾರ್ಮಿಕರ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿಂದ ಮೆರವಣಿಗೆ ಹೊರಟು, ಮಹಾತ್ಮ ಗಾಂಧಿ ವೃತ್ತದ ಮೂಲಕ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿ ಸಂತೋಷ ಕುಮಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ‘ಒಳ್ಳೆಯ ದಿನಗಳು ಬರಲಿವೆ’ ಎಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರು ಅದರಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.
ಇಂಧನಗಳನ್ನು ಮಿತವಾಗಿ ಬಳಸಿ ಎಂದು ಉಪದೇಶ ಮಾಡುವ ಪ್ರಧಾನಿ ವಿದೇಶ ಪ್ರವಾಸಗಳನ್ನು ಮಾಡುತ್ತಿದ್ದಾರೆ. ಉದ್ಯೋಗಗಳ ಸೃಷ್ಟಿ ಮಾಡಲಿಲ್ಲ, ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡಿದ್ದಾರೆ. ಸಬ್ಸಿಡಿಗಳನ್ನು ತೆಗೆದಿದ್ದಾರೆ. ಜನರಿಗೆ ಇದರಿಂದ ಹೊರೆಯಾಗಿದೆ. ಇಂಧನಗಳ ಬೆಲೆ ಇಳಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರದ ಕ್ರಮಗಳನ್ನು ಸದಾ ಸಮರ್ಥಿಸಿಕೊಂಡು ಬರುತ್ತಿರುವ ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮತಿ ಇರಾನಿ ಮತ್ತು ಕಂಗನಾ ರಣಾವತ್ ಈಗೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಪಂಚ ರಾಜ್ಯಗಳ ಚುನಾವಣೆ ವೇಳೆ ಇಂಧನಗಳ ಬೆಲೆ ಏರಿಕೆಯ ಬಗ್ಗೆ ಪ್ರಸ್ತಾಪಿಸದೇ, ಚುನಾವಣೆ ಮುಗಿದ ನಂತರ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳನ್ನು ಮತ್ತಷ್ಟು ಶ್ರೀಮಂತರಾಗುವಂತೆ ಮಾಡುತ್ತಿದೆ, ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಸಿಲಿಂಡರ್ ದುಬಾರಿಯಾಗಿರುವ ಜತೆಗೆ ಸರಬರಾಜು ವ್ಯವಸ್ಥೆಯೂ ಸರಿಯಾಗಿಲ್ಲ. ದರ ಏರಿಕೆಯಿಂದ ಮಹಿಳೆಯರು, ಬಡವರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ಕೇಂದ್ರ ಸರ್ಕಾರ ಕಳೆದ 1 ತಿಂಗಳಿನಿಂದ 4-5 ಬಾರಿ ಅಡುಗೆ ಅನಿಲದ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಸರ್ಕಾರಿ ಸ್ವಾಮ್ಯದ ಮಾರಾಟ ಕಂಪನಿಗಳು ಕಳೆದ ತಿಂಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿವೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ, ಮುಖಂಡರಾದ ಎ. ನಾಗರಾಜ್, ಮುದೇಗೌಡ್ರ ಗಿರೀಶ್, ಖಾಲಿದ್ ಅಹಮದ್, ಎಲ್.ಎಂ.ಎಚ್. ಸಾಗರ್ ಪಾಲ್ಗೊಂಡಿದ್ದರು.