ತಾಲೂಕಿಗೊಂದು ಹೊಸ ಕೆರೆ ನಿರ್ಮಾಣ

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ನೆಲ-ಜಲ, ಪರಿಸರ ಕುರಿತ ಸಭೆಯಲ್ಲಿ ಜಿ.ಎಂ. ಗಂಗಾಧರಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ಸಂತೋಷ್ ಕುಮಾರ್, ಶರಣಬಸವೇಶ್ವರ ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ನೆಲ-ಜಲ, ಪರಿಸರ ಕುರಿತ ಸಭೆಯಲ್ಲಿ ಜಿ.ಎಂ. ಗಂಗಾಧರಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ಸಂತೋಷ್ ಕುಮಾರ್, ಶರಣಬಸವೇಶ್ವರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ
  • ನೆಲ-ಜಲ, ಪರಿಸರ ಕುರಿತ ಸಭೆ
ದಾವಣಗೆರೆ : ಹೂಳೆತ್ತುವ ಕಾಮಗಾರಿಗಳ ಜತೆಗೆ ಅವಶ್ಯಕತೆ ಇರುವ ಕಡೆಗಳಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲು ಆದ್ಯತೆ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ನೆಲ-ಜಲ, ಪರಿಸರ ವೃದ್ಧಿ, ಮಳೆನೀರು ಕೊಯ್ಲು, ಸಸಿ ನಡುವುದು ಮತ್ತು ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದರು.
ಊರಿಗೊಂದು ಕೆರೆ ಮಾಡಲು ಸಾಧ್ಯವಾಗದಿದ್ದರೂ, ತಾಲೂಕಿಗೊಂದಾದರೂ ಹೊಸ ಕೆರೆಯನ್ನು ನಿರ್ಮಿಸಬೇಕು. ಜಿಲ್ಲೆಯ ವಿವಿಧ ಕೆರೆಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗುತ್ತಿದೆ. ದಾವಣಗೆರೆ ತಾಲೂಕಿನ ಹೊಸಹಳ್ಳಿ, ಚನ್ನಗಿರಿಯ ಬಸಾಪುರ, ನ್ಯಾಮತಿಯ ಕೊಡಚಗೊಂಡನಹಳ್ಳಿಯ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಇಂಗು ಕೆರೆಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ದಾವಣಗೆರೆ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ಹೊನ್ನಾಳಿ ಉಪ ವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಡಿವೈಎಸ್ಪಿ ಶರಣಬಸವೇಶ್ವರ, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ಡಿಎಚ್‌ಒ ಡಾ.ಷಣ್ಮುಖಪ್ಪ, ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರೈತ ಮುಖಂಡ ಬಲ್ಲೂರು ರವಿಕುಮಾರ್ ಇದ್ದರು.

ಪದೇ ಪದೆ ರಸ್ತೆ ಅಗೆಯುವುದು ಬೇಡ

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸುವಾಗ ಅಥವಾ ಪೇವರ್ಸ್ ಅಳವಡಿಸುವಾಗ ದೂರದೃಷ್ಟಿ ಇಟ್ಟುಕೊಂಡು ಕಾಮಗಾರಿ ನಡೆಸಲು ಆದೇಶಿಸಲಾಗಿದೆ. ರಸ್ತೆ ನಿರ್ಮಾಣವಾದ ಬಳಿಕ ಯುಟಿಲಿಟಿ (ವಿದ್ಯುತ್, ಇಂಟರ್ನೆಟ್, ನೀರು) ಕೇಬಲ್‌ಗಳ ಅಳವಡಿಕೆಗಾಗಿ ಪದೇ ಪದೆ ರಸ್ತೆ ಅಗೆಯುವುದನ್ನು ತಪ್ಪಿಸಲು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು.
ಅದರಂತೆ, ಇನ್ನು ಮುಂದೆ ನಿರ್ಮಿಸಲಾಗುವ ಸಿಸಿ ರಸ್ತೆಗಳಲ್ಲಿ ಕಡ್ಡಾಯವಾಗಿ ಪ್ರತಿ 200 ಅಡಿಗೆ ಒಂದರಂತೆ ರಸ್ತೆಯ ಅಡ್ಡಲಾಗಿ ಕನಿಷ್ಠ 2 ಇಂಚಿನ ಪೈಪ್‌ಗಳನ್ನು ಮೊದಲೇ ಅಳವಡಿಸಲು ಇಲಾಖೆಯ ಡಿಪಿಆರ್‌ನಲ್ಲೇ ಸೇರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಇದರಿಂದ ರಸ್ತೆಗಳ ಆಯಸ್ಸು ಹೆಚ್ಚಲಿದ್ದು, ಸಾರ್ವಜನಿಕರ ಹಣ ಪೋಲಾಗುವುದು ತಪ್ಪುತ್ತದೆ ಎಂದು ತಿಳಿಸಿದರು.
ಉದ್ಯಾನವನಗಳು ಮತ್ತು ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಡುವುದಷ್ಟೇ ಅಲ್ಲದೆ, ಅವುಗಳಿಗೆ ನಿರಂತರವಾಗಿ ನೀರು ಉಣಿಸಿ ಪೋಷಿಸುವುದು ಇಲಾಖೆಗಳ ಜವಾಬ್ದಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮರಗಳ ಬುಡದಲ್ಲಿ ಕಾಂಕ್ರಿಟ್ ಹಾಕಿ ಮರಗಳು ಉಸಿರಾಡಲು ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕಂದಾಯ, ಅರಣ್ಯ, ಮತ್ತು ಮಹಾನಗರ ಪಾಲಿಕೆ ಸೇರಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ 1 ಸಾವಿರ ಸಸಿಗಳನ್ನು ನೆಡಲಾಗಿದೆ. ಕಚೇರಿಗಳ ಆವರಣದಲ್ಲಿ ಈಗಾಗಲೇ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಹಸಿರು ವಿಕಾಸಕ್ಕೆ ಕೊಡುಗೆ ನೀಡಬೇಕೆಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net