ಮಾಯಕೊಂಡದಲ್ಲಿ ಮಿನಿ ಜಲಾಶಯ ನಿರ್ಮಾಣ

ಮಾಯಕೊಂಡ ಗ್ರಾಮದ ಹೊರ ವಲಯದ ಗುಡ್ಡ ಹಾಗೂ ಅರಣ್ಯ ಪ್ರದೇಶದ ನಡುವೆ ಇರುವ ಕೆಂಚಮಾರನಹಳ್ಳಿ ಕೆರೆಗೆ ಶಾಸಕ ಕೆ. ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಅರಣ್ಯ ಇಲಾಖೆ ಡಿಎಫ್‌ಒ ಹರ್ಷವರ್ಧನ ಸೇರಿ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಯಕೊಂಡ ಗ್ರಾಮದ ಹೊರ ವಲಯದ ಗುಡ್ಡ ಹಾಗೂ ಅರಣ್ಯ ಪ್ರದೇಶದ ನಡುವೆ ಇರುವ ಕೆಂಚಮಾರನಹಳ್ಳಿ ಕೆರೆಗೆ ಶಾಸಕ ಕೆ. ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಅರಣ್ಯ ಇಲಾಖೆ ಡಿಎಫ್‌ಒ ಹರ್ಷವರ್ಧನ ಸೇರಿ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ
  • ಪರಿಶೀಲಿಸಿದ ಅಧಿಕಾರಿಗಳು
  • ಅಂತರ್ಜಲ ವೃದ್ಧಿ, ಜಾನುವಾರುಗಳಿಗೆ ನೀರುಣಿಸುವ ಸಂಕಲ್ಪ
ಮಾಯಕೊಂಡ: ಹಿರೇ ಮದಕರಿನಾಯಕರ ಅವಧಿಯಲ್ಲಿದ್ದ ಕೆಂಚಮಾರನಹಳ್ಳಿ ಕೆರೆಯ ಜಾಗದಲ್ಲಿ ಶೀಘ್ರವೇ ಮಿನಿ ಜಲಾಶಯ ನಿರ್ಮಿಸಲಾಗುವುದು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು.
ಮಾಯಕೊಂಡ ಸಮೀಪದ ಗುಡ್ಡ ಹಾಗೂ ಅರಣ್ಯದ ಮಧ್ಯದಲ್ಲಿರುವ ಕೆಂಚಮಾರನಹಳ್ಳಿ ಕೆರೆಗೆ ಸೋಮವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಡಿಎಫ್‌ಒ ಹರ್ಷವರ್ಧನ್ ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೆಂಚಮಾರನಹಳ್ಳಿ ಕೆರೆ ಜೀರ್ಣೋದ್ಧಾರ ಮಾಡಿ ಮಿನಿ ಜಲಾಶಯ ನಿರ್ಮಿಸಿ ಅಂತರ್ಜಲ ಮಟ್ಟ ವೃದ್ಧಿ, ಜನ- ಜಾನುವಾರು, ರೈತ ಮತ್ತು ಕಾಡು ಪ್ರಾಣಿಗಳಿಗೆ ನೀರುಣಿಸಬೇಕೆಂಬ ಸಂಕಲ್ಪ ಇಟ್ಟುಕೊಂಡಿದ್ದೇನೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಜಲಾಶಯ ನಿರ್ಮಾಣದ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿ ಸಂಬಂಧಪಟ್ಟ ಸಚಿವರ ಗಮನ ತಂದಿದ್ದೇನೆ. ಅಲ್ಲದೇ ನ.11 ರಂದು ಅರಣ್ಯ ಇಲಾಖೆ ಕಚೇರಿಯಲ್ಲಿ ಡಿಸಿ, ಜಿಪಂ ಸಿಇಒ ಸಮ್ಮುಖದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭೇಟಿಗೆ ನಿರ್ಧರಿಸಲಾಗಿತ್ತು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸುತ್ತಲೂ ಗುಡ್ಡದ ಮಧ್ಯೆ ನೂರಾರು ಎಕರೆ ಪ್ರದೇಶದಲ್ಲಿ ಸುಮಾರು 40 ಅಡಿಗೂ ಹೆಚ್ಚು ಆಳವಿರುವ ವಿಶಾಲವಾದ ಜಾಗವಿದ್ದು, ಅಲ್ಲಿ ಮಿನಿ ಜಲಾಶಯ ನಿರ್ಮಿಸಿದರೆ ಅಧಿಕ ನೀರು ಸಂಗ್ರಹ ಮಾಡಬಹುದು. ಇದರಿಂದ 50 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಮತ್ತು ಕಾಡು ಜೀವಿಗಳಿಗೆ ನೀರುಣಿಸಬಹುದು. ಅಲ್ಲದೇ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರ ಬೋರ್‌ವೆಲ್ ನೀರಾವರಿಗೆ ಅನುಕೂಲತೆ ಮಾಡಿಕೊಡಬಹುದು ಎಂದರು.
ಆರ್ ಎಫ್‌ಒ ಷಣ್ಮುಖಪ್ಪ, ಸಣ್ಣ ನೀರಾವರಿ ಇಲಾಖೆ ಎಇಇ ಪ್ರವೀಣಕುಮಾರ್, ಉಪ ತಹಸೀಲ್ದಾರ್ ಹಾಲೇಶ್, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಎಸ್. ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಬಿ.ಸಿ. ಸಾಕಮ್ಮ, ಮುಖಂಡರಾದ ಎಸ್.ಜಿ. ರುದ್ರೇಶ್, ಎಂ.ಜಿ. ಗೋಪಾಲ್, ಪರಶುರಾಮಪ್ಪ, ಬೀರಪ್ಪ ಸೇರಿ ಗ್ರಾಮಸ್ಥರು ಹಾಜರಿದ್ದರು.

5 ಕಿಮೀ ನಡಿಗೆ

ಕೆರೆ ವೀಕ್ಷಣೆಗೆ ತೆರಳಿದ್ದ ಶಾಸಕ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಡಿಎಫ್‌ಒ ಹರ್ಷವರ್ಧನ್, ಆರ್‌ಎಫ್‌ಒ ಷಣ್ಮುಖಪ್ಪ, ನೀರಾವರಿ ಇಲಾಖೆ ಎಇಇ ಪ್ರವೀಣ್ ಮತ್ತು ಅರಣ್ಯ ಇಲಾಖೆ
ಅಧಿಕಾರಿಗಳು ಕಾಡಿನೊಳಗೆ 5 ಕಿಮೀ ದೂರ ನಡೆದು ಕೆರೆ ವೀಕ್ಷಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net