ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆಯಲ್ಲಿ ಗೃಹರಕ್ಷಕ ಸಿಬ್ಬಂದಿಯ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಎಸ್ಪಿ ಪರಮೇಶ್ವರ ಹೆಗಡೆ, ಡಾ.ಎಸ್.ಎಚ್. ಸುಜಿತ್‌ಕುಮಾರ್, ಕೆ. ಸರಸ್ವತಿ ಇದ್ದರು.
ದಾವಣಗೆರೆ:ದಾವಣಗೆರೆ ನಗರಪಾಲಿಕೆಯಲ್ಲಿ ಕೆಲವು ಸಿಬ್ಬಂದಿ ನೇಮಿಸುವ ಉದ್ದೇಶವಿದ್ದು, ಗೃಹರಕ್ಷಕರನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಭರವಸೆ ನೀಡಿದರು.
ಗೃಹ ರಕ್ಷಕದಳ ವತಿಯಿಂದ ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಅಖಿಲ ಭಾರತ ಗೃಹರಕ್ಷಕದಳದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ವ್ಯವಸ್ಥೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಗೃಹರಕ್ಷಕರನ್ನು ನೇಮಿಸಿಕೊಳ್ಳುವಂತೆ ಹೋಂ ಗಾರ್ಡ್‌ನ ಜಿಲ್ಲಾ ಕಮಾಂಡೆಂಟ್ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ಗೃಹರಕ್ಷಕ ಪಡೆಯು ಶಿಸ್ತಿಗೆ ಹೆಸರಾದ ಪೊಲೀಸರ ಸಹವರ್ತಿಯಾಗಿ ಕೆಲಸ ಮಾಡುತ್ತಿದೆ. ದೇಶದ ರಕ್ಷಣೆ, ಶಾಂತಿ ಸುವ್ಯವಸ್ಥೆ, ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು ಅಭಿನಂದನೀಯ. ಸಮವಸ್ತ್ರದಲ್ಲಿ ಕೆಲಸ ಮಾಡುವುದೇ ಸೌಭಾಗ್ಯ ಎಂದರು.
ಎಲ್ಲರಿಗೂ ಸರ್ಕಾರಿ ನೌಕರಿ ಕೊಡಲು ಸಾಧ್ಯವಿಲ್ಲ. ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಹೆಚ್ಚಿನವರಿಗೆ ಅವಕಾಶ ದಕ್ಕಿದೆ. ವಿದೇಶಗಳಲ್ಲಿ ಈ ಅವಕಾಶವಿಲ್ಲ. ದೃಢಕಾಯರಾಗಿದ್ದಲ್ಲಿ ಎಂಥಹದ್ದೇ ಕೆಲಸವನ್ನೂ ನಿಭಾಯಿಸಬಹುದು. ಹೀಗಾಗಿ ಗೃಹರಕ್ಷಕರು ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗೃಹರಕ್ಷಕರು ಬ್ಯಾಂಕ್, ಸರ್ಕಾರಿ ವ್ಯವಸ್ಥೆಗಳ ಅಡಿಯಲ್ಲಿ ಆರೋಗ್ಯ ವಿಮೆ ಇನ್ನಿತರೆ ಯೋಜನೆಗಳ ಲಾಭ ಪಡೆಯಬೇಕು. ಚನ್ನಗಿರಿಯ ಶಿಕ್ಷಕ ತಿಪ್ಪೇಶ್ ಇತ್ತೀಚೆಗೆ ನಿಧನರಾಗಿದ್ದು ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರವಾಗಿ ದೊರೆತಿದೆ. ದುಡಿಮೆಯ ಸ್ವಲ್ಪ ಹಣವನ್ನು ವಿಮೆಗಾಗಿ ಮೀಸಲಿಡಬೇಕು. ಇದರಿಂದ ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗಲಿದೆ ಎಂದರು.
ಜಿಲ್ಲಾಡಳಿತದಿಂದ ಶೀಘ್ರವೇ ಕೆನರಾ ಬ್ಯಾಂಕ್ ಎಸ್‌ಬಿಐ ಬ್ಯಾಂಕ್‌ಗಳಿಂದ ಗೃಹರಕ್ಷಕ ಸಿಬ್ಬಂದಿಗೆ ಪುನರ್ಮನನ ಶಿಬಿರ ಆಯೋಜಿಸಲಾಗುವುದು. ಬ್ಯಾಂಕ್‌ನವರ ಮೂಲಕ ಅಗತ್ಯ ವಿಮೆ ಮಾಡಿಸಿಕೊಳ್ಳಿ. ಸಾಧ್ಯವಾದರೆ ಗುಂಪು ವಿಮೆಗೂ ಆದ್ಯತೆ ನೀಡಿ ಎಂದು ಹೇಳಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಡಾ.ಎಸ್.ಎಚ್. ಸುಜಿತ್‌ಕುಮಾರ್ ಮಾತನಾಡಿ 2019ರಲ್ಲಿ ಗುಜರಾತ್‌ನ ಪ್ರವಾಹ ಸಂದರ್ಭದಲ್ಲಿ ಮನೆಯೊಂದರಲ್ಲಿ ಸಿಲುಕಿದ್ದ ಐವರನ್ನು ಗೃಹರಕ್ಷಕ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು ಕಾಪಾಡಿದರು. ಅವರಿಗೆ ಕನಿಷ್ಠ ತರಬೇತಿ ಇದ್ದರೂ ಈ ಸೇವೆ ಮಾಡಿದರು. ಇದು ಹೋಂ ಗಾರ್ಡ್‌ಗಳ ಶಿಸ್ತು ಬದ್ಧತೆಗೆ ಸಾಕ್ಷಿ ಎಂದರು.
ರೈಲ್ವೆ ಇಲಾಖೆಯಲ್ಲಿ ನಿಯೋಜಿತ ಕೆಲವು ಗೃಹರಕ್ಷಕರು ಹಲವು ಪ್ರಯಾಣಿಕರನ್ನು ಸಾವಿನ ದವಡೆಯಿಂದ ಹೊರತಂದಿದ್ದಾರೆ. ಕೆರೆಗೆ ಬಿದ್ದವರನ್ನೂ ರಕ್ಷಣೆ ಮಾಡಿದ್ದಾರೆ. ಈ ಗೃಹರಕ್ಷಕರು ಪರ್ಯಾಯವಾಗಿ ಔಷಧದಂಗಡಿ, ಕಿರಾಣಿ, ಕೃಷಿ ಇತರೆ ಕೆಲಸ ನಿರ್ವಹಿಸುತ್ತಿದ್ದು ಕರ್ತವ್ಯದ ಕರೆ ಬಂದಾಗ ಸ್ಪಂದಿಸುತ್ತಿದ್ದಾರೆ. ಇವರ ಜೀವನ ನಿರ್ವಹಣೆಗೆ ನಿರಂತರ ಕೆಲಸ ನೀಡಬೇಕಿದೆ. ಇದಕ್ಕಾಗಿ ಸರ್ಕಾರದ ವಿವಿಧೆಡೆ ಅಗತ್ಯವಿರುವಲ್ಲಿ ಕೆಲಸಕ್ಕೆ ನಿಯೋಜಿಸಬೇಕು ಎಂದು ಮನವಿ ಮಾಡಿದರು.
ಗೃಹರಕ್ಷಕ ದಳದ ಸಿಬ್ಬಂದಿ ಸಮಾಜದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಣ್ಣ ತಪ್ಪು ಮಾಡಿದರೂ ದಾಖಲಾಗಲಿದೆ. ಹೀಗಾಗಿ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಗೃಹರಕ್ಷಕ ಸಿಬ್ಬಂದಿಯ ಮಕ್ಕಳನ್ನು ಗೌರವಿಸಲಾಯಿತು. ಹರಿಹರ ಘಟಕದ ಗೃಹರಕ್ಷಕ ನಾಗಪ್ಪ ಭೀಮಪ್ಪ ಗಾಳೇರ್ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಅವರ ಪತ್ನಿ ಉಮಾದೇವಿ ಅವರಿಗೆ 20 ಸಾವಿರ ರೂ.ಗಳ ಚೆಕ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಹೋಂ ಗಾರ್ಡ್‌ನ ಬೋಧಕ ಕಿಶೋರ್‌ಕುಮಾರ್, ಸ್ಟಾಫ್ ಆಫೀಸರ್ ಕೆ. ಸರಸ್ವತಿ ಇದ್ದರು. ದೇವರಾಜ್ ಸಂಗೇನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ನಮ್ಮ ಸ್ಥಾನ ನಿರ್ವಾತವಾದರೆ ಬೇರೊಬ್ಬರು ಹುದ್ದೆ ನಿಭಾಯಿಸಬಹುದು. ಆದರೆ ಜವಾಬ್ದಾರಿಯುತ ವ್ಯಕ್ತಿ ಇಲ್ಲವಾದರೆ ಅವರ ಕುಟುಂಬದ ನಿರ್ವಹಣೆ ಕಷ್ಟ. ಉತ್ತಮ ವ್ಯಾಯಾಮ, ಪೌಷ್ಟಿಕ ಆಹಾರದ ರೂಢಿ ಬೆಳೆಸಿಕೊಳ್ಳಿ. ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ವೆಚ್ಚ ಸರಿದೂಗಿಸುವ ಬದಲಾಗಿ ಉತ್ತಮ ಆರೋಗ್ಯ ಸಂಪಾದಿಸಿ ಅದೇ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿ.