ದಾವಣಗೆರೆ:ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದೆ. ತಮಿಳುನಾಡು ರಾಜ್ಯದಲ್ಲೂ ಉಚಿತ ಎಂದು ಹೇಳುತ್ತಲೇ ಸ್ಟಾಲಿನ್ ಮನೆಯಲ್ಲಿ ಖಚಿತವಾಗಿ ಕೂತಿದ್ದಾರೆ. ಕರ್ನಾಟಕದಲ್ಲೂ ಮುಂದೆ ಕಾಂಗ್ರೆಸ್‌ಗೆ ಇದೇ ಪರಿಸ್ಥಿತಿ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಸೋಲಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗೃಹಲಕ್ಷ್ಮಿಎಂಬುದು ಚುನಾವಣೆ ಲಕ್ಷ್ಮಿಯಾಗಿದೆ. ಉಪಚುನಾವಣೆ ಬಂದಾಗ ನಾಲ್ಕೈದು ತಿಂಗಳ ಬಾಬ್ತನ್ನು ಸರ್ಕಾರ, ಮತದಾನಕ್ಕೂ ಮೂರು ದಿನದಲ್ಲಿ ಫಲಾನುಭವಿಗಳಿಗೆ ನೀಡುತ್ತಿದೆ. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬಂದಾಗಲೇ ಬಾಕಿ ಹಣ ನೀಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಶ್ಚಿಮಬಂಗಾಳದಲ್ಲಿ 10 ವರ್ಷದಲ್ಲಿ ಒಂದು ಶಾಸಕ ಸ್ಥಾನ ಪಡೆಯುವ ಕಲ್ಪನೆಯೂ ಇರಲಿಲ್ಲ. ಟಿಎಂಸಿ ಪಕ್ಷದ ಸೊಕ್ಕನ್ನು ಮುರಿದು, ಅಧಿಕಾರದ ಮದದಲ್ಲಿ ತೇಲುತ್ತಿದ್ದ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಈಗ ಕೆಳಗಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವ ಹಾಗೂ ಅಮಿತ್ ಶಾ ಅವರ ಚಾಣಾಕ್ಷ ನಡೆ ಹಾಗೂ ಕಾರ್ಯಕರ್ತರ ಶ್ರಮದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದೇ ರೀತಿಯಲ್ಲೇ ಕರ್ನಾಟಕದಲ್ಲೂ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯವ್ಯಾಪಿ ಸಂಘಟಿಸಿ ಬಿಜೆಪಿ ಗತವೈಭವವನ್ನು ಮರು ಸ್ಥಾಪಿಸಲಾಗುವುದು. ಇಟ್ಟ ಗುರಿ ಮುಂದಿನ ಹೆಜ್ಜೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದರು.
ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇತ್ತು. ಕೆಲವೆಡೆ ನಿರೀಕ್ಷಿತ ಮತಗಳ ಲೀಡ್ ಸಿಗಲಿಲ್ಲ. ಪಕ್ಷದಲ್ಲಿ ಒಳೇಟಿನ ಪ್ರಶ್ನೆಯೇ ಇಲ್ಲ. ಸೋಲಿನಿಂದಾಗಿ ಹತಾಷೆಗೊಳಗಾಗಬೇಕಿಲ್ಲ. ಮುಂದಿನ ದಿನಗಳು ಬಿಜೆಪಿಯದಾಗಲಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಬಿ.ಜಿ. ಅಜಯಕುಮಾರ್, ರಾಜನಹಳ್ಳಿ ಶಿವಕುಮಾರ್, ಅನೀತ್‌ಕುಮಾರ್ ಇದ್ದರು.