ಕಿರಿಯ ವಿದ್ಯಾರ್ಥಿಗಳ ಕುಸ್ತಿ ತರಬೇತಿಗೆ ಕೊಕ್

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಸದಸ್ಯ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿದರು. ಕುಸ್ತಿಪಟು ಮಂಜುನಾಥ್, ಜಿ.ವಿ. ಪ್ರಮೋದ್, ದೇವದಾಸ್, ಗಣೇಶ್ ಇದ್ದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಸದಸ್ಯ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿದರು. ಕುಸ್ತಿಪಟು ಮಂಜುನಾಥ್, ಜಿ.ವಿ. ಪ್ರಮೋದ್, ದೇವದಾಸ್, ಗಣೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ಇಲಾಖೆ ಸುತ್ತೋಲೆಗೆ ಅಸಮಾಧಾನ
  • ಹಳೆಯ ವ್ಯವಸ್ಥೆ ಮುಂದುವರಿಸಲು ಆಗ್ರಹ
  • ಸಚಿವ ಪರಮೇಶ್ವರ್ ಭೇಟಿಗೆ ಕುಸ್ತಿಪಟುಗಳ ನಿರ್ಧಾರ
ದಾವಣಗೆರೆ: ಕ್ರೀಡಾ ವಸತಿ ನಿಲಯಗಳಲ್ಲಿ ಇದುವರೆಗೆ ಚಾಲ್ತಿಯಲ್ಲಿದ್ದ, 5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ಕೈಬಿಡುವ ಸಂಬಂಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿರುವುದಕ್ಕೆ ನಗರದ ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಸದಸ್ಯ ಶ್ರೀನಿವಾಸ ದಾಸಕರಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಸ್ತಿ ರಾಷ್ಟ್ರೀಯ ಕಲೆ. ಐದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾರ್ಥಿಗಳು ಕ್ರೀಡಾ ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸದ ಜತೆಗೆ ಕುಸ್ತಿ ಇತರೆ ಕ್ರೀಡೆ ಕಲಿಯಲು ಅವಕಾಶವಿತ್ತು. ಆದರೆ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಈ ವಿದ್ಯಾರ್ಥಿಗಳಿಗೆ ಕ್ರೀಡಾ ಹಾಸ್ಟೆಲ್‌ಗಳಲ್ಲಿ ಅವಕಾಶ ತಪ್ಪಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
5ರಿಂದ 7ನೇ ತರಗತಿ ವಿದ್ಯಾರ್ಥಿಗಳನ್ನು ನೂತನ ಸುತ್ತೋಲೆ ಪ್ರಕಾರ ಬುನಾದಿ ತರಬೇತಿ ವಿಭಾಗದ ಅಡಿಯಲ್ಲಿ ಸೇರಿಸಲು ಕ್ರಮ ವಹಿಸಲಾಗಿದೆ. ಇದರಿಂದ ಕ್ರೀಡಾಪಟುಗಳು, ಪಾಲಕರು ಹಾಗೂ ತರಬೇತುದಾರರಲ್ಲಿ ಗೊಂದಲ ಉಂಟಾಗಿದೆ. ಕ್ರೀಡಾಪಟುವು ಕ್ರೀಡಾ ಹಾಸ್ಟೆಲ್ ಸೇರುವ ಮುನ್ನ ತನ್ನ ಆಸಕ್ತಿ ಸಾಮರ್ಥ್ಯ ಹಾಗೂ ಪ್ರತಿಭೆ ಅನುಸಾರವಾಗಿ ನಿರ್ದಿಷ್ಟ ಕ್ರೀಡೆ ಆಯ್ಕೆ ಮಾಡಿಕೊಳ್ಳುತ್ತಾನೆ.
ಆದರೆ ಬುನಾದಿ ತರಬೇತಿ ವ್ಯವಸ್ಥೆಯಲ್ಲಿ ದೈಹಿಕ ಕ್ಷಮತೆಗೆ ಮಾತ್ರ ಒತ್ತು ನೀಡುವ ಉದ್ದೇಶವಿದೆ. ಕ್ರೀಡಾಪಟುಗಳಿಗೆ ಆರಂಭಿಕ ಹಂತದಲ್ಲೇ ಮಾರ್ಗದರ್ಶನ, ತರಬೇತಿ ನೀಡಬೇಕಿದೆ. ನಿರ್ದಿಷ್ಟ ಕ್ರೀಡಾ ತರಬೇತಿ ನೀಡಿದಲ್ಲಿ ಪರಿಣತಿ ಪಡೆದು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಸಹಕಾರಿಯಾಗಲಿದೆ.
ಆದರೆ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ ಕಿರಿಯರಿಗೆ ಕುಸ್ತಿ ತರಬೇತಿ ಕೈಬಿಡಲಾಗಿದೆ. ಹೀಗಾಗಿ ಹೊಸ ಸುತ್ತೋಲೆಯನ್ನು ಮರು ಪರಿಶೀಲನೆ ಮಾಡಬೇಕು. ಈ ಮೊದಲು ಜಾರಿಯಲ್ಲಿದ್ದಂತೆ 5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಕ್ರೀಡೆಯಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಬೇಕು.
ಈ ವಿಚಾರದಲ್ಲಿ ಕ್ರೀಡಾ ಸಚಿವ ಜಿ. ಪರಮೇಶ್ವರ್ ಅವರಿಗೆ ವಾರದೊಳಗಾಗಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕುಸ್ತಿಪಟು ಮಂಜುನಾಥ್, ಜಿ.ವಿ. ಪ್ರಮೋದ್, ದೇವದಾಸ್, ಗಣೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net