ಬಜೆಟ್ ಚರ್ಚೆಗೆ ಸಿಎಂ ಉತ್ತರ ಸುಳ್ಳಿನ ಕಂತೆ

 ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್ ಇದ್ದರು.
ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪ
  • ರಾಜ್ಯ ಸರ್ಕಾರ ಮಾತಿಗೆ ತಪ್ಪಿದೆ
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಬಜೆಟ್ ಮೇಲಿನ ಚರ್ಚೆಗೆ ನೀಡಿದ ಉತ್ತರ ಸುಳ್ಳಿನ ಕಂತೆಯಾಗಿದೆ. ಸುಳ್ಳನ್ನು ಗಟ್ಟಿಯಾಗಿ ಹೇಳಿದರೆ ಸತ್ಯವಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ತತ್ವ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮಾತಿಗೆ ತಪ್ಪಿದೆ. ಜನರಿಗೆ ಸುಳ್ಳು ಹೇಳಿ ನಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಸಿದ್ದರಾಮಯ್ಯ ಅಹಿಂದದ ಬೆಂಕಿಯಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದಾರೆ, ಆದರೆ ಆ ವರ್ಗದ ಜನರಿಗೆ ಕಿಂಚಿತ್ತೂ ಸಹಾಯ ಮಾಡಿಲ್ಲ. ಅಹಿಂದವನ್ನು ದುರುಪಯೋಗ ಪಡಿಸಿಕೊಂಡಿರುವ ಆಡಳಿತ ಪಕ್ಷದ ನಾಯಕರಿಗೆ ಆ ವರ್ಗದ ಜನರಿಗೆ ಮುಖ ತೋರಿಸುವ ಧೈರ್ಯವಿಲ್ಲ. ಆದರೂ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದರು.
ಎರಡೂವರೆ ವರ್ಷಗಳ ಕಾಂಗ್ರೆಸ್ ಆಡಳಿತದ ಬಗ್ಗೆ ರಾಜ್ಯದ ಜನರು ಭ್ರಮನಿರಸನಗೊಂಡಿದ್ದಾರೆ. ಸರ್ಕಾರ ಜೀವಂತವಾಗಿದೆ ಎಂಬ ಭಾವನೆಯೆ ಇಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಮುಖಂಡರಾದ ಯಶವಂತರಾವ್ ಜಾಧವ್, ಬಿ.ಎಂ. ಸತೀಶ್, ತುಮ್‌ಕೋಸ್ ಅಧ್ಯಕ್ಷ ಶಿವಕುಮಾರ್, ದೇವರಮನೆ ಶಿವಕುಮಾರ್, ಎನ್.ಎ. ಮುರುಗೇಶ್, ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

ಶೂನ್ಯ ಅಭಿವೃದ್ಧಿ

ಈ ಸರ್ಕಾರ ರಾಜ್ಯದಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂಬುದನ್ನು ಹುಡುಕಬೇಕಾದ ಸ್ಥಿತಿ ಇದೆ. ದಾವಣಗೆರೆ ಅಭಿವೃದ್ಧಿಗಂತೂ ಯಾವುದೇ ಕೊಡುಗೆ ನೀಡಿಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 900 ಕೋಟಿ ರೂ.ಗಳ ಅಭಿವೃದ್ಧಿಯಾಗಿದ್ದು ಅದು ಕೇಂದ್ರದ ಯೋಜನೆಯಾಗಿದೆ. ರಾಜ್ಯ ಸರ್ಕಾರದಿಂದ ಹೇಳಿಕೊಳ್ಳುವಂಥ ಕೆಲಸ ಏನೂ ಆಗಿಲ್ಲ ಎಂದು ಹೇಳಿದರು.
ಶಿಗ್ಗಾಂವ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿತ್ತು. ಅಕ್ಕಪಕ್ಕದ ಕ್ಷೇತ್ರಗಳಿಂದ 8 ಸಾವಿರ ಹೊಸ ಮತದಾರರನ್ನು ಸೇರ್ಪಡೆ ಮಾಡಿ ಕುತಂತ್ರದಿಂದ ಗೆದ್ದರು. ಈಗ ಜನ ಜಾಗೃತರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net