ಜಾತಿ ಜನಗಣತಿ ಬಗ್ಗೆ ಡಿಕೆಶಿ ನಿಲುವು ಪ್ರಕಟಿಸಲಿ

ಮಾಜಿ ಸಚಿವ ಹರತಾಳು ಹಾಲಪ್ಪ,
ಮಾಜಿ ಸಚಿವ ಹರತಾಳು ಹಾಲಪ್ಪ,
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹ
  • ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಮೋಸ
  • ಬದ್ಧತೆ ಪ್ರದರ್ಶಿಸದ ಮಾಜಿ ಸಿಎಂ ಸಿದ್ದರಾಮಯ್ಯ
ದಾವಣಗೆರೆ: ಕಾಂಗ್ರೆಸ್ ಸರ್ಕಾರ ಹಿಂದುಳಿದವರ ಪರ ಎಂದುಕೊಂಡೇ ಮೋಸ ಮಾಡುತ್ತ ಬಂದಿದೆ. ಇದುವರೆಗೆ ಜಾತಿ ಜನಗಣತಿ ಬಿಡುಗಡೆ ಮಾಡಲಿಲ್ಲ. ಸಿಎಂ ಡಿ.ಕೆ. ಶಿವಕುಮಾರ್ ಇದರ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಬಿಜೆಪಿಯ ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ರಾಜ್ಯ ಸರ್ಕಾರ ಒಟ್ಟು 800 ಕೋಟಿ ರೂ.ಗಳ ಸಾರ್ವಜನಿಕ ತೆರಿಗೆ ಹಣವನ್ನು ವ್ಯಯ ಮಾಡುವ ಜತೆಗೆ ಸಮಯ, ಶ್ರಮವನ್ನೂ ಹಾಳು ಮಾಡಿತು. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಹೆಸರಿನ ಜಾತಿ ಜನಗಣತಿ ವರದಿಯನ್ನು ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಯಂತೆ ಕಸದ ಬುಟ್ಟಿಗೆ ಎಸೆದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು 2014ರಲ್ಲಿ ಕಾಂತರಾಜು ಆಯೋಗಕ್ಕೆ ಜಾತಿ ಜನಗಣತಿ ಜವಾಬ್ದಾರಿ ನೀಡಿದರು. ನಂತರದಲ್ಲಿ ಜಯಪ್ರಕಾಶ್ ಹೆಗ್ಡೆ ಆಯೋಗಕ್ಕೆ ಇದನ್ನು ವಹಿಸಲಾಯಿತು. 10 ವರ್ಷದ ನಂತರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಹೆಸರಿನ ಜಾತಿ ಜನಗಣತಿ ತಯಾರಾಯಿತು.
ಬಿಹಾರದಲ್ಲಿ ನಿತೀಶ್‌ಕುಮಾರ್, ತೆಲಂಗಾಣದ ರೇವಂತ ರೆಡ್ಡಿ ಒಂದು ವರ್ಷದ ಕಾಲಮಿತಿಯಲ್ಲೇ ಜಾತಿ ಜನಗಣತಿ ವರದಿ ಜಾರಿಗೊಳಿಸಿದರೆ, ಸಿದ್ದರಾಮಯ್ಯ ಅವರು 10 ವರ್ಷ ಕಾಲ ಕಾಲಹರಣ ಮಾಡಿ, ಒಬಿಸಿ ಸಮುದಾಯಗಳ ದಿಕ್ಕು ತಪ್ಪಿಸಿದರು.
ಕಳೆದ ವರ್ಷ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಘೋಷಿಸಿದರು. ಅದಾದ ಮೂರು ತಿಂಗಳಲ್ಲಿ ಸಮೀಕ್ಷೆ ಆರಂಭವಾದರೂ ಒಂದು ವರ್ಷವಾದರೂ ಮುಗಿದಿಲ್ಲ ಎಂದರು.
ಮೇ 26ಕ್ಕೆ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿದ್ದರಿಂದ ಮರುದಿನವೇ ತರಾತುರಿಯಲ್ಲಿ ವರದಿ ಸ್ವೀಕರಿಸುವ ಶಾಸ್ತ್ರ ಮಾಡಿದರು. ಅವರಿಗೆ ಬದ್ಧತೆ ಇದ್ದಿದ್ದರೆ ಆಯೋಗ ಚುರುಕಾಗಿ ಕಾರ್ಯ ನಿರ್ವಹಿಸಲು ಸೂಚಿಸಬೇಕಿತ್ತು. ಡಿಕೆ ಶಿವಕುಮಾರ್ ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಇದನ್ನು ಜಾರಿಗೊಳಿಸಲು ಸಲಹೆ ನೀಡಬಹುದಿತ್ತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ಎನ್. ನಾಗಪ್ಪ, ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಹೇಂದ್ರ ಹೆಬ್ಬಾರ್, ರಘು ಅಂಬರ್‌ಕರ್, ಗುಡ್ಡಪ್ಪ, ಶಿವನಗೌಡ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net