ಸುರಕ್ಷತಾ ಸಾಧನಗಳಿಲ್ಲದೆ ಮಲಗುಂಡಿ ಸ್ವಚ್ಛತೆ

ದಾವಣಗೆರೆಯ ಪ್ರವಾಸಿ ಮಂದಿರದ ಮಲಗುಂಡಿಯನ್ನು (ಯುಜಿಡಿ) ಸುರಕ್ಷತಾ ಸಾಧನಗಳಿಲ್ಲದೇ ಕೈಯಿಂದ ಸ್ವಚ್ಛಗೊಳಿಸಿದ ದೃಶ್ಯ.
ದಾವಣಗೆರೆಯ ಪ್ರವಾಸಿ ಮಂದಿರದ ಮಲಗುಂಡಿಯನ್ನು (ಯುಜಿಡಿ) ಸುರಕ್ಷತಾ ಸಾಧನಗಳಿಲ್ಲದೇ ಕೈಯಿಂದ ಸ್ವಚ್ಛಗೊಳಿಸಿದ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಸಂಸ ಒತ್ತಾಯ
  • ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ದಾವಣಗೆರೆ : ನಗರದ ಪ್ರವಾಸಿ ಮಂದಿರದ ಮಲಗುಂಡಿಯನ್ನು (ಯುಜಿಡಿ) ಸುರಕ್ಷತಾ ಸಾಧನಗಳಿಲ್ಲದೇ ಕೈಯಿಂದ ಸ್ವಚ್ಛಗೊಳಿಸಿದ ಪ್ರಕರಣದ ಕುರಿತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘಟನೆಯ ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಈ ಪ್ರಕರಣ ನಡೆದಿದ್ದು ಕಾನೂನು ಉಲ್ಲಂಘನೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯ್ ರಾಜ್ ಅವರು ದೂರವಾಣಿ ಮೂಲಕ ಚೆನ್ನಮಲ್ಲಪ್ಪ ಎಂಬ ವ್ಯಕ್ತಿಗೆ ಪ್ರವಾಸಿ ಮಂದಿರದ ಮಲಗುಂಡಿಯನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದ್ದರು ಎಂದು ಮನವಿಯಲ್ಲಿ ಹೇಳಲಾಗಿದೆ.
ಚೆನ್ನಮಲ್ಲಪ್ಪ ಇಬ್ಬರು ಕಾರ್ಮಿಕರನ್ನು ಕರೆಸಿ, ಶೂ, ಕೈಗವಸುಗಳು, ಮಾಸ್ಕ್, ಸುರಕ್ಷತಾ ಉಡುಪು, ಆಮ್ಲಜನಕ ವ್ಯವಸ್ಥೆ ಅಥವಾ ಇತರೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸದೆ, ಕೈಯಿಂದಲೇ ಮಲಗುಂಡಿಯನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಸಂಘಟನೆಯವರು ಆರೋಪಿಸಿದರು.
ಮಾನವ ಮಲವನ್ನು ಕೈಯಿಂದ ಸ್ವಚ್ಛಗೊಳಿಸುವುದನ್ನು ನಿಷೇಧಿಸುವ ಸಂಬಂಧಿತ ಸುರಕ್ಷತಾ ನಿಯಮಗಳ 2013ರ ಎಂಎಸ್ ಕಾಯ್ದೆಯನ್ನು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಕಾರ್ಮಿಕರ ಜೀವಕ್ಕೆ ಅಪಾಯ ಉಂಟುಮಾಡುವ ಈ ರೀತಿಯ ನಿರ್ಲಕ್ಷೃವು ಗಂಭೀರ ಆಡಳಿತಾತ್ಮಕ ಮತ್ತು ಕಾನೂನುಬದ್ಧ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಂಜಿನಿಯರ್ ವಿನಯ್ ರಾಜ್ ಮತ್ತು ಚೆನ್ನಮಲ್ಲಪ್ಪ ಅವರ ವಿರುದ್ಧ ಸೆಕ್ಷನ್ 8ರ ಪ್ರಕಾರ ಶಿಸ್ತು ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಮಲಗುಂಡಿಯನ್ನು ಸ್ವಚ್ಛಗೊಳಿಸಿದ ಕಾರ್ಮಿಕರ ಹೇಳಿಕೆಯನ್ನು ದಾಖಲಿಸಿ ಅವರಿಗೆ ಅಗತ್ಯ ವೈದ್ಯಕೀಯ ತಪಾಸಣೆ ಮಾಡಿಸಿ, ಪರಿಹಾರ ಒದಗಿಸಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸಿ ಮಂದಿರಗಳಲ್ಲಿ ಮಾನವ ಮಲ ಸ್ವಚ್ಛಗೊಳಿಸುವ ಪದ್ಧತಿ ಸಂಪೂರ್ಣವಾಗಿ ನಿಲ್ಲಿಸಿರುವುದನ್ನು ಖಚಿತಪಡಿಸಬೇಕು. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾರ್ಮಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಈ ದೂರಿನ ಮೇಲೆ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ, ಜಿಲ್ಲಾ ಸಂಚಾಲಕರಾದ ರವಿ ಎಂ. ಕೆಟಿಜೆ ನಗರ, ಕೆಂಚಮ್ಮನಹಳ್ಳಿ ರುದ್ರೇಶ್, ಹುಚ್ಚೆಂಗೆಪ್ಪ, ಮಲ್ಲಿಕಾರ್ಜುನ ವಿ, ಜಿಲ್ಲಾ ಖಜಾಂಚಿ ಎಚ್. ಮಲ್ಲಿಕಾರ್ಜುನ ವಂದಾಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net