ದಾವಣಗೆರೆ ನಗರಪಾಲಿಕೆ ವಿರುದ್ಧ ಮಕ್ಕಳ ಆಯೋಗ ಗರಂ

ದಾವಣಗೆರೆಯ ಖಾಸಗಿ ಶಾಲೆಯಲ್ಲಿ ಪಾಠ ಪ್ರವಚನ
ದಾವಣಗೆರೆಯ ಖಾಸಗಿ ಶಾಲೆಯಲ್ಲಿ ಪಾಠ ಪ್ರವಚನ
Published on

ಪ್ರಮುಖ ಮುಖ್ಯಾಂಶಗಳು

  • ಶಾಲೆ ಕಟ್ಟಡ ತೆರವಿನ ಹಿನ್ನೆಲೆಯಲ್ಲಿ ಸುಮೋಟೊ ದೂರು
  • ಕಾಲಾವಕಾಶ ಕೇಳಿದರೂ ಕಟ್ಟಡ ತೆರವುಗೊಳಿಸಿದ್ದ ಪಾಲಿಕೆ
  • 3 ದಿನದಲ್ಲಿ ಉತ್ತರಕ್ಕೆ ಅಧ್ಯಕ್ಷ ಶಶಿಧರ್ ಎಸ್. ಕೋಸಂಬೆ ಗಡುವು
ದಾವಣಗೆರೆ: ಎಸ್‌ಒಜಿ ಕಾಲನಿಯ ನಗರಪಾಲಿಕೆ ಜಾಗದಲ್ಲಿದ್ದ ಖಾಸಗಿ ಶಾಲಾ ಕಟ್ಟಡವನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ತರಗತಿಗಳಲ್ಲಿದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಪ್ರಕರಣ ಸಂಬಂಧ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ದಾವಣಗೆರೆ ನಗರಪಾಲಿಕೆ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದೆ.
ರವೀಂದ್ರನಾಥ್ ಬಡಾವಣೆಯಿಂದ ಒಕ್ಕಲೆಬ್ಬಿಸಲ್ಪಟ್ಟ, ನಿರಾಶ್ರಿತ 36 ಕುಟುಂಬಗಳಿಗೆ ಜಾಗ ಕಲ್ಪಿಸುವ ಭರದಲ್ಲಿ, ಎಸ್‌ಒಜಿ ಕಾಲನಿಯಲ್ಲಿ ಕಳೆದ 20 ವರ್ಷದಿಂದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲಾ ಕಟ್ಟಡವನ್ನು ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ಜ.2ರಂದು ತೆರವುಗೊಳಿಸಿದ್ದರು.
ಮಾರ್ಚ್‌ನಲ್ಲಿ ಪರೀಕ್ಷೆ ಇದೆ. ಹೀಗಾಗಿ ಶೈಕ್ಷಣಿಕ ವರ್ಷ ಮುಗಿಯವವರೆಗೆ ಶಾಲೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ಶಾಲೆಯವರು ಮನವಿ ಮಾಡಿದ್ದರೂ ಪಾಲಿಕೆ ಸ್ಪಂದಿಸದೆ ಕಾರ್ಯಾಚರಣೆ ನಡೆಸಿತ್ತು. ಕಟ್ಟಡ ನೆಲಸಮಗೊಳಿಸಲಾಗಿತ್ತು. ಇದರ ಪರಿಣಾಮ ಶನಿವಾರವಷ್ಟೇ ಪಾರ್ಕ್ ಜಾಗದಲ್ಲಿ ಪಾಲಕರೇ ಹಾಕಿಸಿಕೊಟ್ಟ ಶಾಮಿಯಾನದಡಿ ಮಕ್ಕಳಿಗೆ ಪಾಠ ಮಾಡಲಾಗಿತ್ತು.
ಪ್ರಕರಣದ ಬೆನ್ನಲ್ಲೇ ರಾಜ್ಯ ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಒಳಗೊಂಡ ವರದಿಯನ್ನು ಆಯೋಗಕ್ಕೆ ಮೂರು ದಿನದಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತರು ನಿರ್ದೇಶನ ನೀಡುವಂತೆ ರಾಜ್ಯ ಮಕ್ಕಳ ಹಕ್ಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಎಸ್. ಕೋಸಂಬೆ ಶನಿವಾರ, ನೋಟಿಸ್ ಜಾರಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net