ಅಪ್ರಾಪ್ತ ಬಾಲಕರಿಗೆ ಬೈಕ್ ಚಲಾಯಿಸಲು ನೀಡಿದ ಪಾಲಕರಿಗೆ, ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದರು. ಎಎಸ್ಪಿ ಪರಮೇಶ್ವರ ಹೆಗಡೆ, ಮಂಜುನಾಥ, ಜಯಶೀಲಾ, ಶಕುಂತಲಾ ಇತರರಿದ್ದರು.
ದಾವಣಗೆರೆ:ಮಕರ ಸಂಕ್ರಾಂತಿ ದಿನದಿಂದ ಸೂರ್ಯ ಹೊಸ ಪಥದಲ್ಲಿ ಸಾಗುತ್ತಾನೆ. ಪಾಲಕರು ಕೂಡ ಹೊಸ ದಾರಿ ಹಿಡಿಯಬೇಕು. ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡಿಸದಿರುವ ಬಗ್ಗೆ ಸಂಕಲ್ಪ ಮಾಡಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಮನವಿ ಮಾಡಿದರು.
ಅಪ್ರಾಪ್ತ ಬಾಲಕರಿಗೆ ಬೈಕ್ ಚಲಾಯಿಸಲು ನೀಡಿದ ಪಾಲಕರಿಗೆ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಸಂಚಾರಿ ಪೊಲೀಸ್ ವೃತ್ತ ಕಚೇರಿ ಬಳಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ಐವರು ಮಕ್ಕಳು ಅಸು ನೀಗಿದ್ದಾರೆ. ಹೀಗಾಗಿ ಮಾತ್ರೆ, ತರಕಾರಿ, ಹಣ್ಣು- ಹಾಲು ತರಲು ಮಕ್ಕಳಿಗೆ ಬೈಕ್ ನೀಡುವುದು ಸರಿಯಲ್ಲ. ಈಗ ಆನ್‌ಲೈನ್‌ನಲ್ಲಿ ಸಾಮಗ್ರಿ ತರಿಸಿಕೊಳ್ಳಲು ಅವಕಾಶವಿದೆ.ಮಕ್ಕಳು ಹಠ ಮಾಡಿದರು ಎಂಬ ಸಬೂಬು ಹೇಳಿ ಬೈಕ್ ಕೊಡುವುದನ್ನು ಬಿಡಿ. ನಮಗೆ ಮಕ್ಕಳ ಜೀವ ಮುಖ್ಯವಾಗಿದೆ ಎಂದರು.
ಮಕ್ಕಳಿಗೆ ಬೈಕ್ ನೀಡಿದರೆ 25 ಸಾವಿರ ರೂ.ನಿಂದ 40 ಸಾವಿರ ರೂ. ವರೆಗೆ ದಂಡ ಭರಿಸಬೇಕು. ದಾವಣಗೆರೆ ಜಿಲ್ಲೆಯಲ್ಲಿ ಅಪ್ರಾಪ್ತರು ಬೈಕ್ ಚಲಾಯಿಸಿದರೂ ಕೇಸ್ ಮಾಡದಿರುವ ಬಗ್ಗೆ ಪ್ರಶ್ನೆ ಕೇಳಿಬರುತ್ತಿದೆ. ಹೈಕೋರ್ಟ್, ಸುಪ್ರೀಂಕೋರ್ಟ್ ಕೂಡ ಸೂಚನೆ ನೀಡಿದೆ ಎಂದರು.
18 ವರ್ಷದ ನಂತರ ಪರವಾನಗಿ ಪಡೆದ ನಂತರ ವಾಹನ ಓಡಿಸಬೇಕು. ಯಾರೋ ಮಾಡಿದ ತಪ್ಪಿಗೆ ಪಾದಚಾರಿಗಳೂ ಕೂಡ ತೊಂದರೆ ಅನುಭವಿಸಿದ ನಿದರ್ಶನಗಳಿವೆ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಸಂಚಾರ ನಿಯಮಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕಾನೂನಿನ ಪರಿಜ್ಞಾನವಿಲ್ಲ ಎಂದರೆ ರಿಯಾಯಿತಿ ಇಲ್ಲ. ಗೊತ್ತಿದ್ದು ತಪ್ಪೆಸಗಿದರೆ ಅದು ಅಪರಾಧವಾಗಲಿದೆ. ಹೀಗಾಗಿ ಪಾಲಕರು ರಸ್ತೆ ಸಂಚಾರ ನಿಯಮ ಪಾಲಿಸುವ ಬಗ್ಗೆ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ತಿಳಿಸಿದರು.
ನೋಂದಣಿಯಾಗದ ಹೊಸ ವಾಹನ ಓಡಿಸಿದರೂ ಇನ್ನು ಮುಂದೆ ದಂಡ ಮಾತ್ರವಲ್ಲದೆ ಎಫ್‌ಐಆರ್ ದಾಖಲಿಸಲಾಗುವುದು. ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಿದರೆ ಸಹಿಸುವುದಿಲ್ಲ. ಪಾಲಕರಿಗೆ ದಂಡದ ಜತೆಗೆ ಜೈಲು ಕಳಿಸುವ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಎಸ್ಪಿ ಪರಮೇಶ್ವರ ಹೆಗಡೆ ಮಾತನಾಡಿ ರಸ್ತೆ ಬಳಕೆದಾರ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಓಡಿಸಬೇಕು. ಶೇ. 35ರಷ್ಟು ಪಾದಚಾರಿಗಳು ತಮ್ಮದಲ್ಲದ ತಪ್ಪಿಗೆ ತೊಂದರೆಗೆ ಒಳಗಾಗುತ್ತಿದ್ದಾರೆ. ಅಪಘಾತಗಳು ಹೆಚ್ಚಿ ಜೀವಹಾನಿ, ಅಂಗಾಂಗ ಊನ ಆಗುತ್ತಿವೆ. ಇನ್ನಾದರೂ ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡದಿರುವ ಬಗ್ಗೆ ಜಾಗೃತಿ ಹೊಂದಬೇಕು ಎಂದರು.
ನಂತರ ಎಲ್ಲ ಅಪ್ರಾಪ್ತ ಮಕ್ಕಳು ಹಾಗೂ ಅವರ ಪಾಲಕರಿಗೆ ಸಂಚಾರ ಕಮ್ಯಾಂಡಿಂಗ್ ಸೆಂಟರ್‌ನಲ್ಲಿ ಸಿಸಿಟಿವಿ ಕಾರ್ಯವೈಖರಿ, ಸಂಚಾರ ನಿರ್ವಹಣೆ ಬಗೆಗಿನ ನಿಗಾ ಕಾರ್ಯಾಚರಣೆ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಚಾರ ವೃತ್ತ ನಿರೀಕ್ಷಕ ಮಂಜುನಾಥ, ಪಿಎಸ್‌ಐಗಳಾದ ಶೈಲಜಾ, ಜಯಶೀಲಾ, ಶಕುಂತಲಾ, ಮಹಾದೇವ ಬತ್ತಿ ಹಾಗೂ ಸಿಬ್ಬಂದಿ ಇದ್ದರು. ಪಾಲಕರಿಗೆ ಜಾಗೃತಿ ನೀಡಿದ ಬಳಿಕ ಅಪ್ರಾಪ್ತ 62 ಮಕ್ಕಳು ಓಡಿಸುತ್ತಿದ್ದ ಬೈಕ್‌ಗಳ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.